ಯುರೇನಿಯಂ ನಿಕ್ಷೇಪದ ಹೆಸರಲ್ಲಿ  ಊರು ಖಾಲಿ ಮಾಡಿಸಿದರೆ ಉಗ್ರ ಹೋರಾಟ
ಹಾಸನ

ಯುರೇನಿಯಂ ನಿಕ್ಷೇಪದ ಹೆಸರಲ್ಲಿ  ಊರು ಖಾಲಿ ಮಾಡಿಸಿದರೆ ಉಗ್ರ ಹೋರಾಟ

November 27, 2018

ಅರಸೀಕೆರೆ: ನನ್ನ ಕ್ಷೇತ್ರದ ಜನತೆ ಮತ್ತು ರೈತರೇ ನನ್ನ ನಿಕ್ಷೇಪ. ಇವರ ಜಮೀನಿನಲ್ಲಿ ಖನಿಜ ಇದೆ ಎಂದು ಮೈನಿಂಗ್ ಮತ್ತು ಮ್ಯಾಪಿಂಗ್ ಮಾಡುವ ನೆಪದಲ್ಲಿ ಕಿರುಕುಳ ನೀಡಿ ಊರು ಖಾಲಿ ಮಾಡಿಸುವ ದುಸ್ಸಾಹಸಕ್ಕೆ ಕೈ ಹಾಕಿದರೆ ಅದಕ್ಕೆ ನನ್ನ ನೇತೃತ್ವದಲ್ಲೇ ದೊಡ್ಡ ಮಟ್ಟದಲ್ಲಿ ಪ್ರತಿರೋಧ ಒಡ್ಡಲಾಗುವುದು ಎಂದು ಶಾಸಕ ಕೆ.ಎಂ.ಶಿವಲಿಂಗೇ ಗೌಡ ಕೇಂದ್ರ ಸರ್ಕಾರದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ತಾಲೂಕಿನ ಶಶಿವಾಳ ಮತ್ತು ಮಾಡಾಳು ಗ್ರಾಮಗಳ ಸುತ್ತಮುತ್ತಲಿನಲ್ಲಿ ಕಳೆದ ಹಲವಾರು ದಿನಗಳಿಂದ ಕೇಂದ್ರ ಸರ್ಕಾರದ ಅಧಿಕಾರಿಗಳ ತಂಡವು ನಡೆಸುತ್ತಿರುವ ಯುರೇನಿಯಂ ನಿಕ್ಷೇಪ ಮೈನಿಂಗ್ ಮತ್ತು ಮ್ಯಾಪಿಂಗ್ ಸಂಬಂಧ ಭಯಭೀತರಾಗಿದ್ದ ಜನತೆಯನ್ನು ಉದ್ದೇಶಿಸಿ ಶಶಿವಾಳ ಗ್ರಾಮದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಹಲವಾರು ದಿನಗಳಿಂದ ನಡೆಯುತ್ತಿರುವ ಸರ್ವೆಯಿಂದ ಸ್ಥಳೀಯ ಜನತೆ ಆತಂಕ ಪಡುವ ಅವಶ್ಯಕತೆ ಇಲ್ಲ. 1938 ರಲ್ಲಿ ಅಂದಿನ ಬ್ರಿಟಿಷ್ ಸರ್ಕಾರವು ದೇಶದಲ್ಲಿರುವ ಖನಿಜ ಸಂಪತ್ತನ್ನು ಕೊಳ್ಳೆ ಹೊಡೆಯಲು ಸಲುವಾಗಿ ಸರ್ವೆ ಮಾಡಲು ಒಂದು ನಿರ್ಣಯವನ್ನು ಕೈಗೊಂಡಿತ್ತು. ಅಂದಿನ ನಿರ್ಣಯದಂತೆ ಭಾರತ ಸರ್ಕಾರವು ಇಂದು ದೇಶದಲ್ಲಿರುವ ವಿವಿಧ ಖನಿಜ ಸಂಪತ್ತು ಇರಬಹುದಾದ ಸ್ಥಳಗಳನ್ನು ಸರ್ವೆ ಮಾಡುತ್ತಿದೆ ಎಂದರು.

ಶಶಿವಾಳ ಸುತ್ತಮುತ್ತಲಿನಲ್ಲಿ ಸ್ವಾಮೀಜಿಗಳು, ಅವಧೂತರು ಮತ್ತು ಸಿದ್ದರು ಇರುವ ಶಕ್ತಿ ಪೀಠಗಳಿವೆ. ಇಂತಹ ಸ್ಥಳ ಗಳಲ್ಲಿ ಬೆಲೆ ಬಾಳುವ ಖನಿಜಗಳಿದ್ದರೆ ಅವರ ದಿವ್ಯ ದೃಷ್ಟಿಗೆ ಬಿದ್ದು ಅವರುಗಳೇ ತಮ್ಮ ಸ್ವಾಧೀನಕ್ಕೆ ಪಡೆದು ಸಮಾಜಕ್ಕೆ ಸದ್ವಿನಿ ಯೋಗ ಮಾಡಿಕೊಳ್ಳುತ್ತಿದ್ದರು. ಇಂದು ರೈತರ ಜಮೀನನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಶಪಡಿಸಿಕೊಳ್ಳಬೇಕಾದರೆ ನೂತನವಾಗಿ ರಚಿಸಿರುವ ಕೇಂದ್ರ ಸರ್ಕಾ ರದ ಜನರ ಅರ್ಥಿಕ ಸಮೀಕ್ಷೆಯ ಪ್ರಕಾರ ಸಾಮಾಜಿಕ ಭದ್ರತೆ ಅಡಿಯಲ್ಲಿ ಆಯಾ ಜಮೀನಿನ ಮಾಲೀಕನ ಅನುಮತಿ ಕಡ್ಡಾಯವಾಗಿ ಬೇಕೇ ಬೇಕು ಎಂದರು.

ಅಧಿಕಾರಿಗಳು ಬರಲಿ, ಯಾವುದೇ ತೊಂದರೆ ಇಲ್ಲ. ಅವರು ಸರ್ವೆ ಮಾಡಿಕೊಂಡು ಹೋಗಲಿ. ಸರ್ವೆ ಮಾಡಿದಾಕ್ಷಣ ನಿಮ್ಮ ಜಮೀನನ್ನು ಸ್ವಾಧೀನಪಡಿಸಿಕೊಳ್ಳುವುದಿಲ್ಲ. ಒಂದು ವೇಳೆ ಅಂತಹ ಸಂದರ್ಭ ಬಂದಲ್ಲಿ ಜಿಲ್ಲಾ ಪ್ರತಿನಿಧಿಗಳು, ತಾಲೂಕು ಪ್ರತಿನಿಧಿಗಳು ಸೇರಿದಂತೆ ವಿವಿಧ ಸಂಘ ಸಂಸ್ಥೆ ಗಳ ಜೊತೆಗೂಡಿ ಹೋರಾಟ ಮಾಡೋಣ. ಇಂದು ಜಿಲ್ಲಾ ಖನಿಜ ಮತ್ತು ಭೂ ವಿಜ್ಞಾನ ಇಲಾಖೆಗಳ ಅಧಿಕಾರಿಗಳು ಇಲ್ಲಿ ನಡೆಯು ತ್ತಿರುವ ಸರ್ವೆ ಬಗ್ಗೆ ಸದಾ ಗಮನ ನೀಡ ಬೇಕು. ಜನರಲ್ಲಿ ಯಾವುದೇ ಗೊಂದಲ ವನ್ನು ಮೂಡಿಸುವುದು ಬೇಡ. ಮುಂದಿನ ದಿನಗಳಲ್ಲಿ ಈ ಬಗ್ಗೆ ಯಾವುದೇ ರೀತಿಯ ಹೋರಾಟ ಅವಶ್ಯಕತೆ ಇದ್ದಲ್ಲಿ ನಾನೇ ನಾಯ ಕತ್ವವನ್ನು ವಹಿಸುತ್ತೇನೆ ಎಂದು ಸಭೆಯಲ್ಲಿ ನೆರೆದಿದ್ದ ಜನತೆಗೆ ಭರವಸೆ ನೀಡಿದರು.

ಸಭೆಯಲ್ಲಿ ತಾಲೂಕು ದಂಡಾಧಿಕಾರಿ ಎನ್.ವಿ.ನಟೇಶ್, ಗ್ರಾಮಾಂತರ ಪೊಲೀಸ್ ಠಾಣೆ ಸರ್ಕಲ್ ಇನ್ಸ್‍ಪೆಕ್ಟರ್ ಸಿದ್ದರಾಮೇಶ್, ಜಿ.ಪಂ ಸದಸ್ಯ ಮಾಡಾಳು ಸ್ವಾಮಿ, ಎಪಿಎಂಸಿ ಅಧ್ಯಕ್ಷ ಚಂದ್ರಶೇಖರ್ ಸೇರಿದಂತೆ ವಿವಿಧ ಜನ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಜನತೆ ಆತಂಕ ಪಡುವ ಆವಶ್ಯಕತೆ ಇಲ್ಲ: ಭೂ ಸರ್ವೇಕ್ಷಣ ಅಧಿಕಾರಿ ಹಿಮಾದ್ರಿ ಸಾಬ್ ಮಾತನಾಡಿ, ಸ್ಥಳೀಯ ಜನತೆ ಆತಂಕ ಪಡುವ ಅವಶ್ಯಕತೆ ಇಲ್ಲ. ಇಲ್ಲಿ ನಡೆಸುತ್ತಿರುವ ಸರ್ವೇಕ್ಷಣೆ ಕೇವಲ ಭೂಮಿಯಲ್ಲಿ ಸಿಗಬಹುದಾದ ಖನಿಜ ಮತ್ತು ನಿಕ್ಷೇಪಗಳ ಪರೀಕ್ಷೆಯಾಗಿರುತ್ತದೆ ಹೊರತು ಇಲ್ಲಿ ಭೂ ಸ್ವಾಧೀನಪಡಿಸಿಕೊಳ್ಳುವ ಉದ್ದೇಶ ಇರುವುದಿಲ್ಲ.

ಕರ್ನಾಟಕದ ಶಿವಮೊಗ್ಗ, ರಾಯ ಚೂರು ಮತ್ತು ಲಿಂಗಸೂರು ತಾಲೂಕುಗಳಲ್ಲಿ ಇದೇ ಮಾದರಿಯಲ್ಲಿ ಭೂ ಪರೀಕ್ಷೆಯನ್ನು ಮಾಡಲಾಗುತ್ತಿದೆ. ಇಲ್ಲಿ ಸಿಗಬಹುದಾದ ಖನಿಜಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲು ಭೂ ಪರೀಕ್ಷೆ ಹಾಗೂ ಸ್ಯಾಂಪಲ್‍ಗಳನ್ನು ಸಂಗ್ರಹಿಸಲಾಗುತ್ತಿದೆ. ಈ ಬಗ್ಗೆ ಹಾಸನ ಜಿಲ್ಲಾ ಆಡಳಿತಕ್ಕೆ ಮಾಹಿತಿಯನ್ನು ಕೂಡ ನೀಡಲಾಗಿದೆ. ನಮ್ಮ ಸಂಸ್ಥೆಯು ಭಾರತ ಸ್ವಾಮ್ಯಕ್ಕೆ ಒಳಪಟ್ಟಿದೆ. ಈ ಸಂಸ್ಥೆಯಿಂದ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ ಸರ್ವೆ ಮಾಡುತ್ತದೆ. ಅರಸೀಕೆರೆ ತಾಲೂಕಿನ ಮಾಡಾಳು ಮತ್ತು ಶಶಿವಾಳ ಗ್ರಾಮಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಿಗಬಹುದಾದ ನಿಕ್ಷೇಪಗಳ ಬಗ್ಗೆ ಮಾತ್ರ ಸರ್ವೆ ನಡೆಸಲಾಗುತ್ತಿದೆ. ನಮ್ಮ ಇಲಾಖೆ ಪ್ರಯತ್ನಕ್ಕೆ ಸೂಕ್ತ ಮಾಹಿತಿ ಸಿಕ್ಕರೂ ಸಿಗಬಹುದು ಅಥವಾ ಸಿಗದಿರಬಹುದು. ಒಟ್ಟಿನಲ್ಲಿ ನಮ್ಮೊಂದಿಗೆ ಬಂದಿರುವ ತಂಡವು ಕೇವಲ ಸರ್ವೆ ಮಾಡುವುದಕ್ಕಷ್ಟೆ ಸೀಮಿತವಾಗಿರುವುದು. ಭೂ ಸ್ವಾಧೀನ ಮತ್ತು ಒಕ್ಕಲೆಬ್ಬಿಸುವ ವದಂತಿಗಳಿಗೆ ದಯಮಾಡಿ ಯಾರು ಕಿವಿಗೊಡಬಾರದು ಎಂದು ಮನವಿ ಮಾಡಿ ಮಾಹಿತಿ ನೀಡಿದರು.

Translate »