ಎಂಸಿಡಿಸಿಸಿ ಬ್ಯಾಂಕ್ ಚುನಾವಣೆಗೆ ಹೈಕೋರ್ಟ್ ಹಸಿರು ನಿಶಾನೆ
ಮೈಸೂರು

ಎಂಸಿಡಿಸಿಸಿ ಬ್ಯಾಂಕ್ ಚುನಾವಣೆಗೆ ಹೈಕೋರ್ಟ್ ಹಸಿರು ನಿಶಾನೆ

November 10, 2018

ಮೈಸೂರು: ಮೈಸೂರು ಮತ್ತು ಚಾಮ ರಾಜನಗರ ಜಿಲ್ಲಾ ಸಹಕಾರ (ಎಂಸಿಡಿಸಿಸಿ) ಬ್ಯಾಂಕ್ ಚುನಾವಣೆಗೆ ಎದುರಾಗಿದ್ದ ವಿಘ್ನವನ್ನು ಹೈಕೋರ್ಟ್ ನಿವಾರಣೆ ಮಾಡಿದ್ದು, ಈಗಾಗಲೇ ಹೊರಡಿಸಿರುವ ಅಧಿಸೂಚನೆಯಂತೆ ನ.12ಕ್ಕೆ ಚುನಾವಣೆ ನಡೆಯಲು ಗ್ರೀನ್ ಸಿಗ್ನಲ್ ನೀಡಿದೆ.

ಚುನಾವಣೆಗೆ ಹೈಕೋರ್ಟ್‍ನ ತಡೆಯಾಜ್ಞೆ ಇರುವುದನ್ನು ಉಲ್ಲೇಖಿಸಿ ಸಹಕಾರ ಚುನಾವಣಾ ಆಯೋಗವು ಚುನಾವಣಾ ಪ್ರಕ್ರಿಯೆ ಯನ್ನು ಸ್ಥಗಿತಗೊಳಿಸುವಂತೆ ನ.7ರಂದು ಸೂಚನೆ ನೀಡಿತ್ತು. ಆದರೆ, ಈಗ ಹೈಕೋರ್ಟ್ ಚುನಾವಣೆಗೆ ಗ್ರೀನ್ ಸಿಗ್ನಲ್ ನೀಡಿರುವ ಕಾರಣ ನಿಗದಿಯಂತೆ ನ.12ರಂದು ಮೈಸೂರಿನ ನಂಜ ರಾಜ ಬಹದ್ದೂರ್ ಛತ್ರದಲ್ಲಿ ಎಂಸಿ ಡಿಸಿಸಿ ಬ್ಯಾಂಕ್‍ನ ನಿರ್ದೇಶಕರ ಸ್ಥಾನ ಗಳಿಗೆ ಚುನಾವಣೆ ನಡೆಯಲಿದೆ.

ಬ್ಯಾಂಕ್‍ನ ಮಾಜಿ ಅಧ್ಯಕ್ಷ ಸಿ. ಬಸವೇಗೌಡ, ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡರ ಪುತ್ರ ಜಿ.ಡಿ.ಹರೀಶ್ ಗೌಡ ಮತ್ತು ಯಳಂದೂರಿನ ಜಯರಾಮು ಅವರು ಈಗಾಗಲೇ ಅವಿರೋಧವಾಗಿ ಆಯ್ಕೆಯಾಗಿದ್ದು, ಉಳಿದ ಸ್ಥಾನಗಳಿಗೆ ಚುನಾ ವಣೆ ನಡೆಯಲಿದೆ.

ಹಿನ್ನೆಲೆ: ಬ್ಯಾಂಕ್‍ನ ಹುಣಸೂರು ಶಾಖೆಯಲ್ಲಿ ನಡೆದಿದ್ದ ಅವ್ಯವಹಾ ರದ ಹಿನ್ನೆಲೆಯಲ್ಲಿ ಬ್ಯಾಂಕ್‍ನ ಅಂದಿನ ವ್ಯವಸ್ಥಾಪಕ ನಿರ್ದೇಶಕ ಲಿಂಗಣ್ಣಯ್ಯ ಅವರನ್ನು ಆಡಳಿತ ಮಂಡಳಿ ಸೇವೆಯಿಂದ ಬಿಡುಗಡೆ ಮಾಡಿತ್ತು. ಆದರೆ, ಕೆಲ ನಿರ್ದೇಶಕರು ಸಹಕಾರ ಇಲಾಖೆ ಜಂಟಿ ನಿಬಂಧಕರ ಮೊರೆ ಹೋದಾಗ ಅವರು ಲಿಂಗಣ್ಣಯ್ಯ ಅವರ ಬಿಡುಗಡೆಗೆ ತಡೆಯಾಜ್ಞೆ ನೀಡಿದ್ದರು.

ಇದನ್ನು ಪ್ರಶ್ನಿಸಿ, ಬ್ಯಾಂಕ್‍ನ ಅಧ್ಯಕ್ಷ ಎಸ್.ಚಂದ್ರಶೇಖರ್ ಹೈಕೋರ್ಟ್ ಮೆಟ್ಟಲೇರಿ ದ್ದರು. ಆಗ ಸಹಕಾರ ಇಲಾಖೆಯ ಜಂಟಿ ನಿಬಂಧಕರ ಆದೇಶವನ್ನು ರದ್ದು ಮಾಡಿದ್ದಲ್ಲದೇ, ಚುನಾವಣೆಗೂ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು. ಹೈಕೋರ್ಟ್‍ನ ತಡೆಯಾಜ್ಞೆಯನ್ನು ಗಮನಿಸದೆ ಜಿಲ್ಲಾಧಿಕಾರಿಗಳು ಸೆ.1ರಂದು ಚುನಾವಣೆ ಪ್ರಕ್ರಿಯೆಗೆ ಚಾಲನೆ ನೀಡಿದ್ದ ಲ್ಲದೇ, ಅ.25ರಂದು ಚುನಾವಣಾ ವೇಳಾ ಪಟ್ಟಿಯನ್ನು ಪ್ರಕಟಿಸುವ ಮೂಲಕ ಪ್ರಕ್ರಿಯೆಗೆ ಚಾಲನೆ ನೀಡಿದ್ದರು. ಅದರಂತೆ ನಾಮಪತ್ರ ಸಲ್ಲಿಕೆ,
ಪರಿಶೀಲನೆ ಹಾಗೂ ಹಿಂಪಡೆತ ಪ್ರಕ್ರಿಯೆಗಳು ಮುಗಿದ ಹಂತದಲ್ಲಿ ಕೆಲ ನಿರ್ದೇಶಕರು ಸಹಕಾರ ಇಲಾಖೆಯ ವಕೀಲರನ್ನು ಸಂಪರ್ಕಿಸಿದ ಪರಿಣಾಮ, ಇಲಾಖೆಯು ಸಹಕಾರ ಚುನಾವಣಾ ಆಯೋಗದ ನಿರ್ದೇಶನವನ್ನು ಕೋರಿತ್ತು. ಈ ಹಿನ್ನೆಲೆಯಲ್ಲಿ ಆಯೋಗವು ಚುನಾವಣಾ ಪ್ರಕ್ರಿಯೆಯನ್ನು ಸ್ಥಗಿತಗೊಳಿಸುವಂತೆ ಸೂಚಿಸಿತ್ತು. ಇದರಿಂದಾಗಿ ಕೆಲ ನಿರ್ದೇಶಕರು ಹೈಕೋರ್ಟ್ ಮೊರೆ ಹೋದರು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ಜಿ. ನರೇಂದರ್ ಅವರು ಅ. 25ರ ವೇಳಾಪಟ್ಟಿ ಯಂತೆ ಚುನಾವಣೆಗೆ ಗ್ರೀನ್ ಸಿಗ್ನಲ್ ನೀಡಿ, ಆದೇಶಿಸಿದ್ದಾರೆ.

Translate »