ವೈದ್ಯರ ಸಲಹೆ: ಸಿಎಂ 3 ದಿನ ವಿಶ್ರಾಂತಿ
ಮೈಸೂರು

ವೈದ್ಯರ ಸಲಹೆ: ಸಿಎಂ 3 ದಿನ ವಿಶ್ರಾಂತಿ

November 10, 2018

ಬೆಂಗಳೂರು: ವೈದ್ಯರ ಸಲಹೆ ಮೇರೆಗೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರ ಸ್ವಾಮಿ ವಿಶ್ರಾಂತಿ ಮೊರೆ ಹೋಗಿದ್ದಾರೆ. ಕುಟುಂಬ ಸದಸ್ಯರ ಜೊತೆಗೂಡಿ ಮೈಸೂರು ಹೊರ ವಲಯದ ಕಬಿನಿ ಹಿನ್ನೀರಿನ ರೆಸಾರ್ಟ್‍ವೊಂದರಲ್ಲಿ ನಿನ್ನೆಯಿಂದ ವಿಶ್ರಾಂತಿ ಪಡೆಯುತ್ತಿದ್ದಾರೆ. ಅವರು ಇಲ್ಲಿ ನ.11ರವರೆಗೆ ವಿಶ್ರಾಂತಿ ಪಡೆಯಲಿದ್ದಾರೆ. ಈ ಅವಧಿಯಲ್ಲಿ ಎಲ್ಲಾ ಅಧಿಕೃತ ಕಾರ್ಯಕ್ರಮಗಳು ರದ್ದಾಗಿದ್ದು, ಖಾಸಗಿ ಭೇಟಿಗೂ ಅವಕಾಶವಿಲ್ಲ ಎಂದು ಮುಖ್ಯಮಂತ್ರಿ ಕಾರ್ಯಾಲಯ ತಿಳಿಸಿದೆ.

ವಿಶ್ರಾಂತಿ ಮೊರೆ ಹೋಗಿರುವುದರಿಂದ ನಾಳೆ ಸರ್ಕಾರದ ವತಿಯಿಂದ ಹಮ್ಮಿಕೊಂಡಿ ರುವ ಟಿಪ್ಪು ಜಯಂತಿ ಕಾರ್ಯಕ್ರಮದಲ್ಲೂ ಅವರು ಭಾಗವಹಿಸುತ್ತಿಲ್ಲ. ವೈದ್ಯರ ಸಲಹೆ ಹಿನ್ನೆಲೆಯಲ್ಲಿ ತಾವು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಕನ್ನಡ ಮತ್ತು ಸಂಸ್ಕøತಿ ಖಾತೆ ಸಚಿವರಿಗೆ ತಿಳಿಸಿದ್ದರು. ಈ ಹಿನ್ನೆಲೆಯಲ್ಲೇ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ನಡೆಯುತ್ತಿರುವ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲೂ ಮುಖ್ಯಮಂತ್ರಿಯವರ ಹೆಸರನ್ನು ಕೈಬಿಡಲಾಗಿದೆ. ಗೃಹ ಇಲಾಖೆ ಹೊಣೆಯನ್ನೂ ಹೊತ್ತಿರುವ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಕೂಡ ವಿಶ್ರಾಂತಿ ಮೊರೆ ಹೋಗಿ ರುವುದರಿಂದ ಅವರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿಲ್ಲ.

ನಾಳೆ ರಾಜಧಾನಿಯಲ್ಲಿ ನಡೆಯುತ್ತಿರುವ ಟಿಪ್ಪು ಜಯಂತಿ ಕಾರ್ಯಕ್ರಮ ಕೇವಲ ಕಾಂಗ್ರೆಸ್ ನಾಯಕರಿಗೆ ಸೀಮಿತವಾದಂತಿದೆ. ವಿಧಾನಪರಿಷತ್ತಿನ ಹಂಗಾಮಿ ಸಭಾಪತಿ ಬಸವರಾಜ ಹೊರಟ್ಟಿ ಹೊರತುಪಡಿಸಿದರೆ ಜೆಡಿಎಸ್‍ನ ಯಾವೊಬ್ಬ ನಾಯಕರ ಹೆಸರೂ ಆಹ್ವಾನ ಪತ್ರಿಕೆಯಲ್ಲಿ ಇಲ್ಲ. ಇತ್ತೀಚೆಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಟಿಪ್ಪು ಜಯಂತಿಯನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ಮಾಡಲಾಗುವುದು ಎಂದು ಹೇಳಿದ್ದರು. ಆದರೆ, ಸಚಿವ ಜಮೀರ್ ಅಹಮದ್ ಖಾನ್, ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿಯೇ ಕಾರ್ಯಕ್ರಮ ನಡೆಸಲಾಗುವುದು ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು. ಹಾಗಾಗಿ ಸರ್ಕಾರದಲ್ಲೇ ಗೊಂದಲ ಏರ್ಪಟ್ಟಿದೆ. ಟಿಪ್ಪು ಸುಲ್ತಾನ್ ಜಯಂತಿ ಆಚರಣೆಯನ್ನು ಬಿಜೆಪಿ ಬಲವಾಗಿ ವಿರೋಧಿಸುತ್ತಿದೆ. ಯಾರಿಗೂ ಬೇಡವಾಗಿರುವ ಜಯಂತಿ ಆಚರಿಸಿದರೆ ಮೈತ್ರಿ ಸರ್ಕಾರ ಬಹಳ ದಿನ ಉಳಿಯಲ್ಲ. ಮುಖ್ಯ ಮಂತ್ರಿ ಪಾಲ್ಗೊಂಡರೆ ಹಾಳಾಗಿ ಹೋಗ್ತಾರೆ ಎಂದು ಮಾಜಿ ಡಿಸಿಎಂ ಆರ್. ಅಶೋಕ್ ಎಚ್ಚರಿಕೆ ನೀಡಿದ್ದಾರೆ. ಟಿಪ್ಪು ಜಯಂತಿ ಅಚರಣೆ ವಿರೋಧಿಸಿ ಮೈಸೂರು ಬ್ಯಾಂಕ್ ವೃತ್ತದಲ್ಲಿ ಬೆಂಗಳೂರು ನಗರ ಬಿಜೆಪಿ ಘಟಕದಿಂದ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಟಿಪ್ಪು ಹೆಸರಿನಲ್ಲಿ ವೋಟ್ ಬ್ಯಾಂಕ್ ರಾಜಕಾರಣ ಮಾಡಲು ಸರ್ಕಾರ ಹೊರಟಿದೆ ಎಂದಿದ್ದಾರೆ.

Translate »