ಉರುಳಿ ಬಿದ್ದ ಸಿಲಿಂಡರ್ ತುಂಬಿದ ಲಾರಿ
ಮೈಸೂರು

ಉರುಳಿ ಬಿದ್ದ ಸಿಲಿಂಡರ್ ತುಂಬಿದ ಲಾರಿ

October 13, 2018

ಮುನ್ನೆಚ್ಚರಿಕೆ ಕ್ರಮವಾಗಿ ಸಂಚಾರ ನಿರ್ಬಂಧ, ಪರಿಹಾರ ಕಾರ್ಯಾಚರಣೆ, ಸಾರಾ ಕನ್ವೆನ್ಷನ್ ಬಳಿ ರಿಂಗ್ ರಸ್ತೆಯಲ್ಲಿ ಘಟನೆ
ಮೈಸೂರು: ಗ್ಯಾಸ್ ಸಿಲಿಂಡರ್ ತುಂಬಿದ್ದ ಲಾರಿ ಮಗುಚಿ ಬಿದ್ದ ಘಟನೆ ಮೈಸೂರಿನ ದಟ್ಟಗಳ್ಳಿಯಲ್ಲಿರುವ ಸಾರಾ ಕನ್‍ವೆನ್ಷನ್ ಹಾಲ್ ಬಳಿ ರಿಂಗ್ ರಸ್ತೆಯಲ್ಲಿ ಇಂದು ರಾತ್ರಿ ಸಂಭವಿಸಿದೆ. ಲಾರಿಯಲ್ಲಿದ್ದ ಸಿಲಿಂಡರ್‍ಗಳೆಲ್ಲವೂ ಗ್ಯಾಸ್‍ನಿಂದ ಭರ್ತಿಯಾಗಿದ್ದು, ಲಾರಿ ಮಗುಚಿದಾಗ ಸಿಲಿಂಡರ್‍ಗಳು ರಸ್ತೆಯಲ್ಲಿ ಚೆಲ್ಲಾಡಿವೆ. ಚಾಲಕ ಸಣ್ಣಪುಟ್ಟ ಗಾಯ ಗಳೊಂದಿಗೆ ಅಪಾಯದಿಂದ ಪಾರಾಗಿದ್ದಾನೆ. ರಸ್ತೆಯಲ್ಲಿ ಬಿದ್ದಿರುವ ಹಾಗೂ ಲಾರಿಯಲ್ಲೇ ಉಳಿದಿರುವ ಸಿಲಿಂಡರ್‍ಗಳಲ್ಲಿ ಯಾವುದಾದರೂ ಒಂದು ಒತ್ತಡ ತಾಳದೇ ಸಿಡಿದಿದ್ದಲ್ಲಿ ಭಾರೀ ಅಪಾಯ ಉಂಟಾಗುತ್ತಿತ್ತು. ಅದೃಷ್ಟವಶಾತ್ ಅಂತಹ ಯಾವುದೇ ದುರಂತ ಸಂಭವಿಸಿಲ್ಲ. ವಿಷಯ ತಿಳಿಯುತ್ತಿದ್ದಂತೆಯೇ ಕುವೆಂಪುನಗರ ಸಂಚಾರ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಪರಿಕರಗಳೊಂದಿಗೆ ಸ್ಥಳಕ್ಕೆ ಧಾವಿಸಿ ಪರಿಹಾರ ಕಾರ್ಯಗಳನ್ನು ಕೈಗೊಂಡಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಈ ರಸ್ತೆಯಲ್ಲಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ ಎಂದು ಹೇಳಲಾಗಿದ್ದು, ಪತ್ರಿಕೆ ಅಚ್ಚಿಗೆ ಹೋಗುವ ವೇಳೆಯಲ್ಲೂ ಪರಿಹಾರ ಕಾರ್ಯ ಮುಂದುವರೆದಿತ್ತು.

Translate »