ಗುಂಡ್ಲುಪೇಟೆ: ಕುಡಿದ ಮತ್ತಿನಲ್ಲಿ ಸ್ನೇಹಿತರೇ ಯುವಕನನ್ನು ಕೊಲೆ ಮಾಡಿರುವ ಘಟನೆ ಪಟ್ಟಣದಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ.
ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಪುಟ್ಟಗೋಪಮ್ಮ ಮತ್ತು ಬಸವಣ್ಣ ಎಂಬುವವರ ಪುತ್ರ ಗಿರೀಶ್‍ಬಾಬು(27) ಎಂಬಾತನೇ ಸ್ನೇಹಿತರಿಂದ ಕೊಲೆ ಯಾದ ಯುವಕ. ಗಿರೀಶ್‍ಬಾಬು ಪಟ್ಟಣದ ಕೆ.ಎಸ್.ನಾಗ ರತ್ನಮ್ಮ ಬಡಾವಣೆಯ ನಿವಾಸಿಯಾಗಿದ್ದು, ಪಟ್ಟಣದ ನಿವಾಸಿಗಳಾದ ಗಿರೀಶ್, ಪ್ರಸಾದ್, ಪ್ರಶಾಂತ್ ಹಾಗೂ ಅಮೀದ್ ಸ್ನೇಹಿತರೊಂದಿಗೆ ಪಟ್ಟಣದ ಅನುಪಮ ಬಾರ್‍ನಲ್ಲಿ ಕುಡಿದು ತಡರಾತ್ರಿವರೆಗೂ ರಸ್ತೆಯಲ್ಲಿ ಮಾತಾಡುತ್ತಿದ್ದಾಗ ಹೊಸ ವರ್ಷಾಚರಣೆಗೆ ಗಿರೀಶ್‍ಬಾಬು ಗೈರು ಹಾಜರಾಗಿದ್ದ ಬಗ್ಗೆ ಮಾತಿಗೆ ಮಾತು ಬೆಳೆದು ಪರಸ್ಪರ ಕೈ ಕೈ ಮಿಲಾಯಿಸಿಕೊಂಡಿದ್ದಾರೆ. ಈ ಗಲಾಟೆಯಿಂದ ತಲೆಗೆ ತೀವ್ರ ಪೆಟ್ಟುಬಿದ್ದಿದ್ದ ಗಿರೀಶ್‍ಬಾಬು ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ. ಇನ್ನೊಬ್ಬ ಪ್ರಸಾದ್ ಎಂಬಾತ ಗಾಯಗೊಂಡು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಪೆÇಲೀಸರು ತಿಳಿಸಿದ್ದಾರೆ.
ಈ ಸಂಬಂಧ ಮೃತ ಗಿರೀಶ್‍ಬಾಬು ಪೋಷಕರು ಪಟ್ಟಣದ ಠಾಣೆಗೆ ದೂರು ನೀಡಿದ್ದು, ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಗಿರೀಶ್‍ಬಾಬು ಸ್ನೇಹಿತರಾದ ಪ್ರಶಾಂತ್ ಹಾಗೂ ಅಮೀದ್ ಎಂಬುವರನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಸ್ಥಳಕ್ಕೆ ವೃತ್ತ ನಿರೀಕ್ಷಕ ಬಾಲಕೃಷ್ಣ ಮತ್ತು ಸಿಬ್ಬಂದಿ ಭೇಟಿ ನೀಡಿದ್ದರು.