ಸುಭದ್ರ ಉದ್ಯೋಗ ಕುರಿತು ಪ್ರಧಾನಿ ಪ್ರಶ್ನಿಸಲು `ಉದ್ಯೋಗಕ್ಕಾಗಿ ಯುವ ಜನರು’ ವೇದಿಕೆ ನಿರ್ಧಾರ
ಮೈಸೂರು

ಸುಭದ್ರ ಉದ್ಯೋಗ ಕುರಿತು ಪ್ರಧಾನಿ ಪ್ರಶ್ನಿಸಲು `ಉದ್ಯೋಗಕ್ಕಾಗಿ ಯುವ ಜನರು’ ವೇದಿಕೆ ನಿರ್ಧಾರ

April 26, 2018

ಮೈಸೂರು: ಉದ್ಯೋಗ ಭದ್ರತೆಯೇ ಇಲ್ಲದಂತೆ ಮಾಡುವ ನಿಟ್ಟಿನಲ್ಲಿ ಕಾನೂನಿಗೆ ತಿದ್ದುಪಡಿ ತಂದಿರುವ ಹಿನ್ನೆಲೆಯಲ್ಲಿ ಸುಭದ್ರ ಉದ್ಯೋಗ ಕುರಿತ ಪ್ರಶ್ನೆಗಳಿಗೆ ಉತ್ತರ ಕೊಡದೇ ತಪ್ಪಿಸಿ ಕೊಳ್ಳುತ್ತಿರುವ ಪ್ರಧಾನಿ ಮೋದಿ ಅವರನ್ನು ತಡೆದು ಪ್ರಶ್ನಿಸಲು `ಉದ್ಯೋಗಕ್ಕಾಗಿ ಯುವ ಜನರು’ ವೇದಿಕೆ ನಿರ್ಧರಿಸಿದೆ. ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಸೋಮಶೇಖರ್ ಚಲ್ಯ, ಮುತ್ತುರಾಜ್, ಉದ್ಯೋಗ ಸೃಷ್ಟಿಯ ದೊಡ್ಡ ಭರವಸೆಯನ್ನು ಕೊಟ್ಟ ನರೇಂದ್ರ ಮೋದಿಯವರು ಈಗ ಎಷ್ಟು ಉದ್ಯೋಗ ಸೃಷ್ಟಿ ಮಾಡಿದ್ದೀರಿ ಎಂಬ ಪ್ರಶ್ನೆ ಹಾಕಿದರೆ, ಪಕೋಡಾ ಮಾರಿ ಎನ್ನುತ್ತಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ದೇಶದ ಯುವಜನರು ಉದ್ಯೋಗಕ್ಕಾಗಿ-ಉದ್ಯೋಗ ಭದ್ರತೆಗಾಗಿ ಆಂದೋಲನ ನಡೆಸುತ್ತಿರುವ ಹೊತ್ತಿನಲ್ಲೇ ಖಾಯಂ ಉದ್ಯೋಗವೇ ಇಲ್ಲದಂತೆ ಮಾಡುವ ಅಪಾಯಕಾರಿ ಕಾನೂನು ತಿದ್ದುಪಡಿಯನ್ನು ಕಳೆದ ಮಾ.16ರಂದು ತಂದಿದ್ದಾರೆ ಎಂದು ದೂರಿದರು. ಈ ಹಿನ್ನೆಲೆಯಲ್ಲಿ ಕಾರ್ಮಿಕ ದಿನದಂದೇ ಚುನಾವಣಾ ಪ್ರಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಮರಾಜನಗರಕ್ಕೆ ಆಗಮಿಸುತ್ತಿದ್ದು, ಈ ಸಂದರ್ಭ ದಲ್ಲಿ ಉದ್ಯೋಗಕ್ಕೆ ಸಂಬಂಧಿಸಿದಂತೆ ಅವರಿಗೆ ಕೆಲ ಪ್ರಶ್ನೆಗಳನ್ನು ಮಾಡಲು ಉದ್ದೇಶಿಸಿದ್ದೇವೆ. ಒಂದು ವೇಳೆ ಇದಕ್ಕೆ ಅವಕಾಶ ಕಲ್ಪಿಸದೇ ಇದ್ದರೆ, ವಿಮಾನ ನಿಲ್ದಾಣದಿಂದ ಚಾಮರಾಜನಗರಕ್ಕೆ ಹೋಗುವ ದಾರಿಯಲ್ಲೇ ಅವರನ್ನು ಅಡ್ಟಗಟ್ಟಿ, ನಮ್ಮ ಪ್ರಶ್ನೆಗಳಿಗೆ ಉತ್ತರ ನೀಡಬೇಕೆಂದು ಒತ್ತಾಯಿಸಲಿದ್ದೇವೆ ಎಂದರು. ಮೇ 6ರಂದು ಬೆಂಗಳೂರಿನಲ್ಲಿ ನಡೆಯಲಿರುವ ವೇದಿಕೆಯ ರಾಜ್ಯ ಮಟ್ಟದ ಸಮಾ ವೇಶದಲ್ಲಿ ಚುನಾವಣೆಯಲ್ಲಿ ಯಾರಿಗೆ ಮತ ಚಲಾಯಿಸ ಬೇಕೆಂಬುದರ ಬಗ್ಗೆ ಚರ್ಚಿಸಿ ನಿರ್ಧಾರಕ್ಕೆ ಬರಲಾಗುವುದು ಎಂದರು. ವೇದಿಕೆಯ ಸರೋವರ್, ಅಸಾದುಲ್ಲಾ, ಪುಷ್ಪಾ ಗೋಷ್ಠಿಯಲ್ಲಿದ್ದರು.

Translate »