ಬಿಸಿಎಂ ಹಾಸ್ಟೆಲ್‍ಗೆ ನುಗ್ಗಿದ ಖದೀಮ
ಮೈಸೂರು

ಬಿಸಿಎಂ ಹಾಸ್ಟೆಲ್‍ಗೆ ನುಗ್ಗಿದ ಖದೀಮ

December 22, 2018

ಮೈಸೂರು: ಕೆ.ಆರ್.ಆಸ್ಪತ್ರೆ ಆವರಣದ ನರ್ಸಿಂಗ್ ಹಾಸ್ಟೆಲ್‍ಗೆ ನುಗ್ಗಿದ ವಿಕೃತ ವ್ಯಕ್ತಿ ಸಿಕ್ಕಿಬಿದ್ದ ಪ್ರಕರಣ ಇನ್ನೂ ಮಾಸದಿರುವ ಬೆನ್ನಲ್ಲೇ ಮೈಸೂರಿನ ಕುವೆಂಪುನಗರದ ಬಿಸಿಎಂ ಮಹಿಳಾ ಹಾಸ್ಟೆಲ್‍ಗೆ ಖದೀಮನೋರ್ವ ನುಸುಳಿ ಆತಂಕ ಹುಟ್ಟಿಸಿರುವ ಘಟನೆ ಡಿಸೆಂಬರ್ 17 ರಂದು ನಡೆದಿದೆ.ಆದಿಚುಂಚನಗಿರಿ ರಸ್ತೆಯಲ್ಲಿರುವ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಇಲಾಖೆಯ ಮಹಿಳಾ ವಿದ್ಯಾರ್ಥಿನಿಲಯಕ್ಕೆ ಅಂದು ಮುಂಜಾನೆ 2.30 ಗಂಟೆ ವೇಳೆಗೆ ನುಸುಳಿದ ಖದೀಮ, ವಿದ್ಯಾರ್ಥಿನಿಯರ ಮೊಬೈಲ್ ಕಳವಿಗೆ ಯತ್ನಿಸಿದ.

ಒಂದು ಕೊಠಡಿಯಿಂದ ಮತ್ತೊಂದು ಕೊಠಡಿಗೆ ತೆರಳುತ್ತಿದ್ದ ಆತನನ್ನು ಕಿಟಕಿ ಗಾಜಿನಿಂದ ಕಂಡ ವಿದ್ಯಾರ್ಥಿನಿಯೊಬ್ಬರು ಕಿರುಚಿಕೊಂಡಿದ್ದರಿಂದ ಎಲ್ಲರೂ ಎಚ್ಚರಗೊಂಡು ಕೂಗಲಾರಂಭಿಸಿದಾಗ ಕಳ್ಳ ಕಾಂಪೌಂಡ್ ಹಾರಿ ಪರಾರಿಯಾಗಿದ್ದಾನೆ ಎಂದು ಹಾಸ್ಟೆಲ್ ನಿವಾಸಿಗಳು ವಾರ್ಡನ್‍ಗೆ ತಿಳಿಸಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆಯೇ ಅಶೋಕಪುರಂ ಮತ್ತು ಕುವೆಂಪುನಗರ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಮಹಜರು ನಡೆಸಿದಾಗ ಅಪರಿಚಿತ ಯುವಕ ನುಸುಳಿ ದ್ದಾನೆಂಬುದು ಹಾಸ್ಟೆಲ್‍ನ ಸಿಸಿ ಟಿವಿ ಫುಟೇಜ್‍ಗಳಿಂದ ತಿಳಿದುಬಂದಿದೆ.

ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ಕುವೆಂಪುನಗರ ಠಾಣೆ ಪೊಲೀ ಸರು, ತನಿಖೆ ನಡೆಸುತ್ತಿದ್ದಾರೆ. ಈ ವಿಷಯ ತಿಳಿದ ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಸಾ.ರಾ. ನಂದೀಶ್, ಬುಧವಾರ ಸಂಜೆ ಹಾಸ್ಟೆಲ್‍ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಮಗೆ ಸೂಕ್ತ ಭದ್ರತಾ ಸಿಬ್ಬಂದಿಗಳನ್ನು ನೇಮಿಸಿ ಸುರಕ್ಷತಾ ಕ್ರಮ ವಹಿಸಬೇಕು, ಬಿಸಿ ನೀರು ಸೌಲಭ್ಯ ಒದಗಿಸಬೇಕೆಂದು ಹಾಸ್ಟೆಲ್ ವಾಸಿಗಳು ಈ ಸಂದರ್ಭ ನಂದೀಶ್ ಅವರನ್ನು ಒತ್ತಾಯಿಸಿದರು. ವಿದ್ಯಾರ್ಥಿನಿಯರಿಗೆ ಸಮಾಧಾನ ಹೇಳಿದ ಅವರು, ದಿನದ 24 ಗಂಟೆಯೂ ಸದೃಢ ಭದ್ರತಾ ಸಿಬ್ಬಂದಿ ನಿಯೋಜಿಸಿ ಎಚ್ಚರ ವಹಿಸುವಂತೆ ವಾರ್ಡನ್‍ಗೆ ಸೂಚನೆ ನೀಡಿದರು.

Translate »