ಕ್ಷೇತ್ರದ ಉಳಿದ ಕೆರೆಗಳಿಗೆ ನೀರು ತುಂಬಿಸುವ ಚಿಂತನೆ ಇದೆ
ಚಾಮರಾಜನಗರ

ಕ್ಷೇತ್ರದ ಉಳಿದ ಕೆರೆಗಳಿಗೆ ನೀರು ತುಂಬಿಸುವ ಚಿಂತನೆ ಇದೆ

June 18, 2018

ಗುಂಡ್ಲುಪೇಟೆ:  ಕ್ಷೇತ್ರದಲ್ಲಿನ ಉಳಿದ ಕೆರೆಗಳಿಗೆ ನೀರು ತುಂಬಿಸುವುದು, ಶುದ್ಧ ಕುಡಿ ಯುವ ನೀರು, ಉತ್ತಮ ರಸ್ತೆ ಹಾಗೂ ಚರಂಡಿಗಳ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಲಿದ್ದೇನೆ ಎಂದು ಶಾಸಕ ಸಿ.ಎಸ್.ನಿರಂಜನಕುಮಾರ್ ಹೇಳಿದರು.

ಇಲ್ಲಿನ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹರವೆ ಹೋಬಳಿಯ ಕಲ್ಪುರ, ದೇಶೀಗೌಡನಪುರ, ಮಲೆಯೂರು ಹಾಗೂ ಹರವೆ ಗ್ರಾಮಗಳಲ್ಲಿ ಪಾದಯಾತ್ರೆ ಮೂಲಕ ಮನೆ ಮನೆಗಳಿಗೆ ತೆರಳಿದ ಶಾಸಕ ಸಿ.ಎಸ್. ನಿರಂಜನಕುಮಾರ್ ಮತದಾರರಿಗೆ ಕೃತಜ್ಞತೆ ಅರ್ಪಿಸಿ ಮಾತನಾಡಿ, ಕುಡಿಯುವ ನೀರಿನ ಕೊರತೆ, ಅಂತರ್ಜಲ ಇಳಿಕೆ ಮುಂತಾದ ಕಾರಣಗಳಿಂದ ಬರಪೀಡಿತ ಹೋಬಳಿಯ ಕೆಲವು ಕೆರೆಗಳಿಗೆ ನೀರು ತುಂಬಿಸುವಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೆಚ್ಚಿನ ಕಾಳಜಿ ವಹಿಸಿದ್ದರು.

ಈ ಹಿನ್ನೆಲೆಯಲ್ಲಿ ಕಳೆದ ಚುನಾವಣೆಯಲ್ಲಿ ಹೋಬಳಿಯ ಮತದಾರರು ಬಿಜೆಪಿಗೆ ಹೆಚ್ಚಿನ ಮತಗಳನ್ನು ನೀಡಿದ್ದರಿಂದ ತಾವು ಗೆಲುವು ಸಾಧಿಸಲು ಸಾಧ್ಯವಾಗಿದೆ. ನೀತಿಸಂಹಿತೆ ಜಾರಿ ಯಿದ್ದ ಹಿನ್ನೆಲೆಯಲ್ಲಿ ಅಧಿಕೃತ ಕಾರ್ಯಕ್ರಮ ಗಳನ್ನು ಹಾಗೂ ಅಧಿಕಾರಿಗಳ ಸಭೆಯನ್ನು ನಡೆಸಲು ಸಾಧ್ಯವಾಗಿಲ್ಲ ಎಂದರು.

ಶೀಘ್ರ ಕ್ರಮ: ಮತಯಾಚನೆ ಹಾಗೂ ಗ್ರಾಮ ವಾಸ್ತವ್ಯ ಮಾಡಿದ್ದ ಸಂದರ್ಭದಲ್ಲಿ ಕ್ಷೇತ್ರದ ಬಹುತೇಕ ಗ್ರಾಮಗಳಲ್ಲಿ ಮೂಲಸೌಕರ್ಯಗಳ ಕೊರತೆ ಇರುವುದು ಕಂಡುಬಂದಿದೆ. ಮತದಾರರ ಋಣ ತೀರಿಸುವ ಸಲುವಾಗಿ ಕ್ಷೇತ್ರದ ಉಳಿದ ಕೆರೆಗಳಿಗೆ ನೀರು ತುಂಬಿಸಲು, ಶುದ್ಧ ಕುಡಿಯುವ ನೀರು, ಉತ್ತಮ ರಸ್ತೆ ಹಾಗೂ ಚರಂಡಿಗಳ ನಿರ್ಮಾಣಕ್ಕೆ ಶೀಘ್ರವಾಗಿ ಕ್ರಮ ಕೈಗೊಂಡು ಕ್ಷೇತ್ರದಲ್ಲಿನ ಮೂಲ ಸೌಕರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತೇನೆ ಎಂದರು.

ಈ ಸಂದರ್ಭದಲ್ಲಿ ಮುಖಂಡರಾದ ಕೆ.ಆರ್.ಲೋಕೇಶ್, ಮಲೆಯೂರು ನಾಗೇಂದ್ರ, ಕುಲಗಾಣ ಕುಮಾರ್, ಪಾಪಣ್ಣ, ದೇಶೀ ಗೌಡನಪುರ ಕುಮಾರ್, ರೇವಣ್ಣ, ಪರಶಿವ ಮೂರ್ತಿ ನಟರಾಜು, ದೊಡ್ಡಹುಂಡಿ ಜಗದೀಶ್, ಎಸ್.ಸಿ.ಮಂಜುನಾಥ್, ಮಲ್ಲಿಕಾರ್ಜುನ್, ರಾಜಪ್ಪ ಸೇರಿದಂತೆ ಹಲವರು ಇದ್ದರು.

Translate »