ಕಾಂಗ್ರೆಸ್‍ನಲ್ಲಿ ಅತೃಪ್ತರೇ ಇಲ್ಲ… ಎಲ್ಲರೂ ತೃಪ್ತರಿದ್ದಾರೆ: ಸಿದ್ದರಾಮಯ್ಯ ಪ್ರತಿಪಾದನೆ
ಮೈಸೂರು

ಕಾಂಗ್ರೆಸ್‍ನಲ್ಲಿ ಅತೃಪ್ತರೇ ಇಲ್ಲ… ಎಲ್ಲರೂ ತೃಪ್ತರಿದ್ದಾರೆ: ಸಿದ್ದರಾಮಯ್ಯ ಪ್ರತಿಪಾದನೆ

June 13, 2018

ಮೈಸೂರು:  ಕಾಂಗ್ರೆಸ್‍ನಲ್ಲಿ ಅತೃಪ್ತರೇ ಇಲ್ಲ. ಎಲ್ಲರೂ ತೃಪ್ತರಾಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಆಡಳಿತ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಚುನಾವಣೆ ಬಳಿಕ ಒಂದು ತಿಂಗಳ ನಂತರ ಮಂಗಳವಾರ ಮೈಸೂರಿಗೆ ಭೇಟಿ ನೀಡಿದ ಅವರು, ತಮ್ಮ ಮನೆಯ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿ, ನಾನು ಎಂ.ಬಿ.ಪಾಟೀಲ್, ಬಿ.ಸಿ.ಪಾಟೀಲ್, ಸುಧಾಕರ್, ಸಂಗಮೇಶ, ಈಶ್ವರ ಖಂಡ್ರೆ, ಎಸ್.ಆರ್.ಪಾಟೀಲ್ ಇನ್ನಿತರರ ಜೊತೆಗೆ ಮಾತನಾಡಿದ್ದೇನೆ. ಅವರೆಲ್ಲಾ ತೃಪ್ತರಾಗಿದ್ದಾರೆ ಎಂದರು. ರಾಜ್ಯದ ಜನರು ಐದು ವರ್ಷಗಳಿಗೆಂದು ತೀರ್ಪು ನೀಡಿದ್ದಾರೆ. ಅದರಂತೆ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಐದು ವರ್ಷ ಪೂರ್ಣಗೊಳಿಸುತ್ತದೆ ಎಂದು ಸ್ಪಷ್ಟಪಡಿಸಿದರು.

ಬಿಜೆಪಿ ಆಮಿಷ: ಬಿಜೆಪಿಯವರು ಸರ್ಕಾರ ರಚನೆ ಸಂದರ್ಭದಲ್ಲಿ ಶಾಸಕರಿಗೆ ಆಮಿಷ ಒಡ್ಡಿದ್ದು ನಿಜ. ಅದಕ್ಕೆ ಸಂಬಂಧಿಸಿದ ದಾಖಲೆಯೂ ಇದೆ. ಹಣ ಮತ್ತು ಅಧಿಕಾರ ಕೊಡುವುದಾಗಿ ಶಾಸಕರನ್ನು ತಮ್ಮತ್ತ ಸೆಳೆಯಲು ಪ್ರಯತ್ನಿಸಿದ್ದರು. ಎಷ್ಟೇ ಆಮಿಷ ಒಡ್ಡಿದ್ದರೂ ಯಾರೂ ಹೋಗಲಿಲ್ಲ. ಹೋಗುವುದೂ ಇಲ್ಲ. ಯಡಿಯೂರಪ್ಪ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಮುಂಬರುವ ಲೋಕಸಭಾ ಚುನಾವಣೆಯಲ್ಲಿಯೂ ಜೆಡಿಎಸ್ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳಲಿದ್ದೀರಾ ಎಂಬ ಪ್ರಶ್ನೆಗೆ, ಈ ವಿಚಾರದಲ್ಲಿ ಎಐಸಿಸಿ ಕಾರ್ಯದರ್ಶಿ ವೇಣುಗೋಪಾಲ್ ಈಗಾಗಲೇ ಹೇಳಿದ್ದಾರೆ. ಮತ್ತೊಮ್ಮೆ ನಾನು ಹೇಳುವ ಅಗತ್ಯವಿಲ್ಲ ಎಂದರು. ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ನನಗೆ ಮುಖ್ಯಮಂತ್ರಿ ಸ್ಥಾನ ಬೇಕಿರಲಿಲ್ಲ ಎಂದು ಹೇಳಿದ್ದಾರಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಲು ಸಿದ್ದರಾಮಯ್ಯ ನಿರಾಕರಿಸಿದರು.

ಗುರುವಾರ ಸಮನ್ವಯ ಸಮಿತಿ ಸಭೆ: ನಾಳಿದ್ದು ಗುರುವಾರ ಸಮನ್ವಯ ಸಮಿತಿ ಸಭೆ ಇದೆ. ಅದಕ್ಕೆ ಸಂಬಂಧಿಸಿದ ಅಜೆಂಡ ಇನ್ನೂ ಸಿದ್ದಪಡಿಸಿಲ್ಲ. ಬಾದಾಮಿಗೆ ಹೋಗಿದ್ದೆ. ಈಗ ಮೈಸೂರಿಗೆ ಬಂದಿದ್ದೇನೆ. ನಾಳಿದ್ದು ಸಮನ್ವಯ ಸಮಿತಿ ಸಭೆ ಬಳಿಕ ಧರ್ಮಸ್ಥಳದಲ್ಲಿ 15 ದಿನಗಳ ಕಾಲ ಪ್ರಕೃತಿ ಚಿಕಿತ್ಸೆಗೆ ತೆರಳಲಿದ್ದೇನೆ ಎಂದರು.

Translate »