ಮತ ಎಣಿಕೆ ಹಿನ್ನೆಲೆ ವಾಹನ ಸಂಚಾರ ನಿರ್ಬಂಧ: ಸಾರ್ವಜನಿಕರಿಗೆ ಕಿರಿಕಿರಿ
ಮೈಸೂರು

ಮತ ಎಣಿಕೆ ಹಿನ್ನೆಲೆ ವಾಹನ ಸಂಚಾರ ನಿರ್ಬಂಧ: ಸಾರ್ವಜನಿಕರಿಗೆ ಕಿರಿಕಿರಿ

June 13, 2018

ಮೈಸೂರು:  ಮೈಸೂರಿನ ಪಡುವಾರಹಳ್ಳಿಯಲ್ಲಿರುವ ಮಹಾರಾಣಿ ವಾಣಿಜ್ಯ ಕಾಲೇಜಿನಲ್ಲಿ ಮಂಗಳವಾರ ನಡೆದ ದಕ್ಷಿಣ ಶಿಕ್ಷಕರ ಕ್ಷೇತ್ರ, ನೈರುತ್ಯ ಶಿಕ್ಷಕರ ಹಾಗೂ ಪದವೀ ಧರರ ಕ್ಷೇತ್ರದ ಚುನಾವಣೆಗಳ ಮತ ಎಣಿಕಾ ಕಾರ್ಯದ ಹಿನ್ನೆಲೆಯಲ್ಲಿ ಪೊಲೀಸರು ಇಲ್ಲಿನ ರಸ್ತೆಗಳಲ್ಲಿ ವಾಹನ ಸಂಚಾರವನ್ನು ಅನಾವಶ್ಯಕ ನಿರ್ಬಂಧಿಸುವ ಮೂಲಕ ಸಾರ್ವಜನಿಕರು ಹಾಗೂ ವಾಹನ ಸವಾರರು ಪರದಾಡುವಂತೆ ಮಾಡಿದರು.

ಕಳೆದ ತಿಂಗಳು ನಡೆದ ವಿಧಾನ ಸಭಾ ಚುನಾವಣೆಯ ಮತ ಎಣಿಕಾ ಕಾರ್ಯ ದಂತೆ ಇಂದು ಸಹ ವಿಧಾನ ಪರಿಷತ್ ಚುನಾವಣೆಯ ಮತ ಎಣಿಕಾ ಕಾರ್ಯಕ್ಕೂ ಬಿಗಿ ಬಂದೋಬಸ್ತ್ ಮಾಡುವ ಮೂಲಕ ಸ್ಥಳೀಯರು ಹಾಗೂ ವಾಹನ ಸವಾರರಿಗೆ ಅನಗತ್ಯವಾಗಿ ತೊಂದರೆ ನೀಡಿದರು. ಕಲಾಮಂದಿರದ ಮುಂಭಾಗದಿಂದ ಆದಿಚುಂಚನಗಿರಿ ವಿದ್ಯಾರ್ಥಿನಿಲಯದ ವರೆಗೂ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿತ್ತು. ಅಲ್ಲದೆ, ವಾಲ್ಮೀಕಿ ರಸ್ತೆ, ಮಾತೃಮಂಡಳಿ ವೃತ್ತದಿಂದ ವಾಲ್ಮೀಕಿ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿಯೂ ವಾಹನ ಸಂಚಾರವನ್ನು ನಿಷೇಧಿಸಲಾಗಿತ್ತು.

ಮೂರು ಕ್ಷೇತ್ರಗಳ ಒಟ್ಟು 10 ಜಿಲ್ಲೆಗಳ ವ್ಯಾಪ್ತಿಯ ಮತ ಎಣಿಕಾ ಕೇಂದ್ರದ ಬಳಿ ಹೆಚ್ಚಿನ ಜನರು ಸೇರಲಿದ್ದಾರೆ ಎಂಬ ಕಲ್ಪನೆಯಲ್ಲಿ ಬಿಗಿ ಬಂದೋ ಬಸ್ತ್ ಏರ್ಪಡಿಸಲಾಗಿತ್ತು. ಆದರೆ ಸಂಜೆಯವರೆಗೂ ಬೆರಳೆಣಿಕೆಯಷ್ಟು ಮಂದಿ ವಿವಿಧ ಪಕ್ಷಗಳ ಕಾರ್ಯ ಕರ್ತರು ಎಣಿಕಾ ಕೇಂದ್ರದ ಬಳಿ ಇದ್ದರು. ಆದರೂ ಬಿಗಿಭದ್ರತೆಯಲ್ಲಿ ಯಾವುದೇ ಬದಲಾವಣೆ ಮಾಡಲಿಲ್ಲ.

Translate »