ನೈಋತ್ಯ ಪದವೀಧರರ ಕ್ಷೇತ್ರದಲ್ಲಿ ಬಿಜೆಪಿಯ ಆಯನೂರು ಮಂಜುನಾಥ್ ಮೊದಲ ಸುತ್ತಿನಲ್ಲೇ ಗೆಲುವು ದಾಖಲು
ಮೈಸೂರು

ನೈಋತ್ಯ ಪದವೀಧರರ ಕ್ಷೇತ್ರದಲ್ಲಿ ಬಿಜೆಪಿಯ ಆಯನೂರು ಮಂಜುನಾಥ್ ಮೊದಲ ಸುತ್ತಿನಲ್ಲೇ ಗೆಲುವು ದಾಖಲು

June 13, 2018

ನೈಋತ್ಯ ಶಿಕ್ಷಕರ ಕ್ಷೇತ್ರದಿಂದ ಜೆಡಿಎಸ್‍ನ ಎಸ್.ಎಲ್.ಬೋಜೇಗೌಡ ಆಯ್ಕೆ

ಮೈಸೂರು:  ನೈಋತ್ಯ ಪದವೀಧರರ ಕ್ಷೇತ್ರದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಆಯನೂರು ಮಂಜುನಾಥ್ ಅವರು, ಪ್ರಥಮ ಪ್ರಾಶಸ್ತ್ಯದ ಮತ ಎಣಿಕೆ ಹಂತದಲ್ಲೇ ಭರ್ಜರಿ ಗೆಲುವು ದಾಖಲಿಸುವ ಮೂಲಕ ವಿಧಾನ ಪರಿಷತ್‍ಗೆ ಪುನರಾಯ್ಕೆಯಾಗಿದ್ದಾರೆ.
ನೈಋತ್ಯ ಪದವೀಧರರ ಕ್ಷೇತ್ರದಲ್ಲಿ ಒಟ್ಟು 47,171 ಮತದಾನವಾಗಿತ್ತು. ಅಭ್ಯರ್ಥಿ ಗೆಲುವಿಗೆ 21526 ಖೋಟಾ ಮತಗಳ ಅಗತ್ಯವಿತ್ತು. ಹಾಗೆಯೇ ಪ್ರಥಮ ಪ್ರಾಶಸ್ತ್ಯ ಮತ ಎಣಿಕೆಯಲ್ಲೇ ಆಯನೂರು ಮಂಜುನಾಥ್ 25,250 ಮತಗಳನ್ನು ಪಡೆದುಕೊಳ್ಳುವ ಮೂಲಕ ಅದ್ವಿತೀಯ ಗೆಲುವು ದಾಖಲಿಸಿದರು. ಪ್ರತಿಸ್ಪರ್ಧಿಗಳಾದ ಎಸ್.ಪಿ.ದಿನೇಶ್ 16,157, ಅರುಣ್‍ಕುಮಾರ್ 1342, ಬಿ.ಕೆ.ಮಂಜುನಾಥ 139, ಜಫ್ರುಲ್ಲಾ ಸತ್ತರ್‍ಖಾನ್ 87, ಬಿ.ಆರ್.ಪ್ರಭುಲಿಂಗ 33, ಜಿ.ಎಂ.ಜಯಕುಮಾರ್ 31 ಹಾಗೂ ಜಿ.ಸಿ. ಪಟೇಲ್ 12 ಮತಗಳನ್ನು ಪಡೆದುಕೊಂಡರೆ, 121 ಮತಗಳು ನೋಟಾಗೆ ಚಲಾವಣೆಯಾಗಿದ್ದು, 3999 ಮತಗಳು ತಿರಸ್ಕೃತಗೊಂಡಿವೆ.

ಶಿಕ್ಷಕರ ಕ್ಷೇತ್ರ: ನೈಋತ್ಯ ಶಿಕ್ಷಕರ ಕ್ಷೇತ್ರದಿಂದ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಎಸ್.ಎಲ್.ಬೋಜೇಗೌಡ, ಮರು ಆಯ್ಕೆ ಬಯಸಿದ್ದ ಬಿಜೆಪಿ ಬೆಂಬಲಿತ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರನ್ನು ಮಣಿಸಿ, ಆಯ್ಕೆಯಾಗಿದ್ದಾರೆ.
ಪ್ರಥಮ ಪ್ರಾಶಸ್ತ್ಯದ ಮತ ಎಣಿಕೆಯಲ್ಲಿ ಜೆಡಿಎಸ್‍ನ ಬೋಜೇಗೌಡ 6241 ಮತ, ಬಿಜೆಪಿಯ ಗಣೇಶ್ ಕಾರ್ಣಿಕ್ 5344, ಕಾಂಗ್ರೆಸ್‍ನ ಕೆ.ಕೆ. ಮಂಜುನಾಥ ಕುಮಾರ್ 2345, ಪಕ್ಷೇತರರಾದ ಡಾ.ಅರುಣ್ ಹೊಸಕೊಪ್ಪ 516, ಎ.ಡಿಸೋಜಾ 412, ಕೆ.ಬಿ.ಚಂದ್ರೋಜಿರಾವ್ 6, ಡಿ.ಕೆ.ತುಳಸಪ್ಪ 1, ಅಂಪರ್ ನಿತ್ಯಾನಂದ ಶೆಟ್ಟಿ 210, ಪ್ರಭುಲಿಂಗ 3, ಕೆ.ಸಿ.ಬಸವರಾಜಪ್ಪ 12, ಎಂ.ರಮೇಶ್ 579 ಹಾಗೂ ಕೆ.ಪಿ.ರಾಜೇಂದ್ರಕುಮಾರ್ 21 ಮತಗಳನ್ನು ಪಡೆದರು. 11 ನೋಟಾ ಚಲಾವಣೆಯಾಗಿದ್ದರೆ 773 ಅಸಿಂಧು ಮತಗಳಾಗಿದ್ದವು. ಆದರೆ ಗೆಲುವಿಗೆ ಬೇಕಿದ್ದ 7846 ಖೋಟಾ ಮತಗಳನ್ನು ಯಾವ ಅಭ್ಯರ್ಥಿಯೂ ಪಡೆಯದ ಹಿನ್ನೆಲೆಯಲ್ಲಿ ನಡೆದ 2ನೇ ಪ್ರಾಶಸ್ತ್ಯ ಮತ ಎಣಿಕೆಯಲ್ಲಿ ಬೋಜೇಗೌಡ ಅವರು ಪ್ರಯಾಸದ ಗೆಲುವು ದಾಖಲಿಸಿದರು. ದಕ್ಷಿಣ ಶಿಕ್ಷಕರ ಕ್ಷೇತ್ರದಂತೆ ನೈಋತ್ಯ ಶಿಕ್ಷಕರ ಕ್ಷೇತ್ರದ ಮತ ಎಣಿಕೆಯೂ ಅಂತಿಮ ಹಂತದಲ್ಲಿ ನಿರ್ಣಯವಾಯಿತು. ಪಕ್ಷೇತರರೆಲ್ಲಾ ಎಲಿಮಿನೇಟ್ ಆದರೂ ಫಲಿತಾಂಶದ ಘಟ್ಟ ತಲುಪಲಿಲ್ಲ. ಆದ್ದರಿಂದ 10ನೇ ಸುತ್ತಿನಲ್ಲಿ ಕಾಂಗ್ರೆಸ್‍ನ ಮಂಜುನಾಥ್ ಕುಮಾರ್ ಅವರನ್ನು ಎಲಿಮಿನೇಟ್ ಮಾಡಿ ಅವರಿಗೆ ದಕ್ಕಿದ್ದ ಪ್ರಥಮ ಪ್ರಾಶಸ್ತ್ಯದ ಮತಪತ್ರಗಳನ್ನು ವಿಂಗಡಿಸಿದ ನಂತರ ಬೋಜೇಗೌಡರಿಗೆ ಒಟ್ಟು 7310 ಹಾಗೂ ಕ್ಯಾ. ಗಣೇಶ್ ಕಾರ್ಣಿಕ್ 5812 ಮತಗಳು ದಕ್ಕಿದ್ದವು. ಆದರೂ ಖೋಟಾ ಮತಗಳನ್ನು ತಲುಪದ ಹಿನ್ನೆಲೆಯಲ್ಲಿ 2ನೇ ಸ್ಥಾನದಲ್ಲಿದ್ದ ಬಿಜೆಪಿಯ ಗಣೇಶ್ ಕಾರ್ಣಿಕ್ ಹೊರಗುಳಿಯಬೇಕಾಯಿತು.

ಗಣೇಶ್ ಕಾರ್ಣಿಕ್ ಅವರಿಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡಿದ್ದ 5344 ಮತದಾರರಲ್ಲಿ 1337 ಮಂದಿ 2ನೇ ಪ್ರಾಶಸ್ತ್ಯವನ್ನು ಬೋಜೇಗೌಡರಿಗೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಅಂತಿಮ ಸುತ್ತಿಗೆ ಒಟ್ಟು 8647 ಮತಗಳೊಂದಿಗೆ ಬೋಜೇಗೌಡ ಗೆಲುವಿನ ನಗೆ ಬೀರಿದರು. ವಿಧಾನ ಪರಿಷತ್ ಸದಸ್ಯರಾಗಿದ್ದ ಹಿರಿಯ ನಾಯಕ ಗಣೇಶ್ ಕಾರ್ಣಿಕ್ ಪುನರಾಯ್ಕೆ ಕನಸನ್ನು ನುಚ್ಚುನೂರು ಮಾಡಿದರು.

Translate »