ಇಂದು ಕುಂಬಾರಕೊಪ್ಪಲಲ್ಲಿ ರಾಷ್ಟ್ರೀಯ ಡೆಂಗ್ಯೂ ದಿನಾಚರಣೆ
ಮೈಸೂರು

ಇಂದು ಕುಂಬಾರಕೊಪ್ಪಲಲ್ಲಿ ರಾಷ್ಟ್ರೀಯ ಡೆಂಗ್ಯೂ ದಿನಾಚರಣೆ

May 25, 2018

ಮೈಸೂರು: ಮೈಸೂರಿನ ಕುಂಬಾರಕೊಪ್ಪಲಿನಲ್ಲಿರುವ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಾಳೆ(ಮೇ.25) ಬೆಳಿಗ್ಗೆ 10ಕ್ಕೆ `ರಾಷ್ಟ್ರೀಯ ಡೆಂಗ್ಯೂ ದಿನಾಚರಣೆ’ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಎಸ್.ಚಿದಂಬರ ತಿಳಿಸಿದ್ದಾರೆ. ಪ್ರತಿ ವರ್ಷದಂತೆ ಆಚರಿಸುವ `ರಾಷ್ಟ್ರೀಯ ಡೆಂಗ್ಯೂ ದಿನಾಚರಣೆ’ ಕಾರ್ಯಕ್ರಮವನ್ನು ಈ ಸಾಲಿನಲ್ಲಿ ಕುಂಬಾರಕೊಪ್ಪಲಿನಲ್ಲಿ ಆಚರಿಸಲಾಗುತ್ತಿದೆ. ಕಳೆದ ಎರಡು-ಮೂರು ವರ್ಷಗಳಲ್ಲಿ ಜಿಲ್ಲಾ ರೋಗವಾಹಕ ಆಶ್ರತಿ ರೋಗಗಳ ನಿಯಂತ್ರಣ ಇಲಾಖೆಯ ವತಿಯಿಂದ ಸಾಕಷ್ಟು ಅರಿವು ಮೂಡಿಸುವ ಕಾರ್ಯಕ್ರಮಗಳು ನಡೆದರೂ ಕುಂಬಾರಕೊಪ್ಪಲಿನಲ್ಲಿ ಸುಮಾರು 35ಕ್ಕೂ ಹೆಚ್ಚು ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿದ್ದವು. ಈ ಹಿನ್ನೆಲೆಯಲ್ಲಿ ಈ ಬಾರಿ ನಗರದ ಮದ್ಯ ಭಾಗದಲ್ಲಿ ಡೆಂಗ್ಯೂ ದಿನಾಚರಣೆಯನ್ನು ಹೈ ರಿಸ್ಕ್ ಏರಿಯಾ ಆಗಿರುವ ಕುಂಬಾರಕೊಪ್ಪಲಿನಲ್ಲಿ ಆಚರಿಸಲಾಗುತ್ತಿದೆ ಎಂದು ಹೇಳಿದರು.

ಕುಂಬಾರಕೊಪ್ಪಲಿನಲ್ಲಿರುವ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂಭಾಗದಿಂದ ಬೆಳಿಗ್ಗೆ 10ಕ್ಕೆ ಜಾಥ ನಡೆಸಲಾಗುತ್ತದೆ. ಈ ಜಾಥ ಬಡಾವಣೆಯ ವಿವಿಧ ರಸ್ತೆಗಳಲ್ಲಿ ಸಂಚರಿಸಲಿದೆ. ನಂತರ ಇಲಾಖೆಯ ಸಿಬ್ಬಂದಿ ನಾಲ್ಕೈದು ತಂಡಗಳಲ್ಲಿ ಕುಂಬಾರಕೊಪ್ಪಲಿನಲ್ಲಿರುವ ಪ್ರತಿ ಮನೆಗಳಿಗೂ ಭೇಟಿ ನೀಡಿ ಡೆಂಗ್ಯೂ ಬಗ್ಗೆ ಅರಿವು ಮೂಡಿಸಲಾಗುತ್ತದೆ. ಅಲ್ಲದೆ ಮನೆಯಲ್ಲಿ ಸೊಳ್ಳೆ ಉತ್ಪತ್ತಿಯಾಗುವ ಸ್ಥಳಗಳ ಬಗ್ಗೆ ಮಾಹಿತಿ ನೀಡುವುದು ಹಾಗೂ ಸೊಳ್ಳೆಗಳ ನಾಶಕ್ಕೆ ಕೈಗೊಳ್ಳುವ ಕ್ರಮಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಲಾಗುತ್ತದೆ ಎಂದು ಹೇಳಿದ ಅವರು, ಕಾರ್ಯಕ್ರಮದ ನಂತರ ಎರಡು ತಂಡಗಳಲ್ಲಿ ಇಲಾಖೆಯ ಸಿಬ್ಬಂದಿಗಳು ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳ ಕಚೇರಿಗಳಿಗೆ ತೆರಳಿ ಭಿತ್ತಿಪತ್ರ ವಿತರಿಸಲಿದ್ದಾರೆ. ಮುಂದಿನ ತಿಂಗಳು ಕ್ಯಾತಮಾರನಹಳ್ಳಿ, ಕುವೆಂಪುನಗರ ಹಾಗೂ ರಾಮಕೃಷ್ಣನಗರಗಳಲ್ಲಿ ಜಾಗೃತಿ ಕಾರ್ಯಕ್ರಮ ನಡೆಸಲಾಗುತ್ತದೆ ಎಂದು ಅವರು ವಿವರಿಸಿದರು.

Translate »