ತಮಿಳುನಾಡಿನಲ್ಲಿ ಗೋಲಿಬಾರ್‍ಗೆ ಖಂಡನೆ ತಕ್ಷಣವೇ ಸ್ಟೆರ್ಲೈಟ್ ಕಂಪನಿ ಮುಚ್ಚಲು ಆಗ್ರಹಿಸಿ ಪ್ರತಿಭಟನೆ
ಮೈಸೂರು

ತಮಿಳುನಾಡಿನಲ್ಲಿ ಗೋಲಿಬಾರ್‍ಗೆ ಖಂಡನೆ ತಕ್ಷಣವೇ ಸ್ಟೆರ್ಲೈಟ್ ಕಂಪನಿ ಮುಚ್ಚಲು ಆಗ್ರಹಿಸಿ ಪ್ರತಿಭಟನೆ

May 25, 2018

ಮೈಸೂರು: ತಮಿಳುನಾಡಿನ ತೂತ್ತುಕುಡಿಯಲ್ಲಿ ಸ್ಟೆರ್ಲೈಟ್ ತಾಮ್ರ ಸಂಸ್ಕರಣಾ ಘಟಕದ ವಿರುದ್ಧ ಹೋರಾಟ ನಡೆಸುತಿದ್ದವರ ಮೇಲೆ ಗೋಲಿಬಾರ್ ನಡೆಸಿ 12ಕ್ಕೂ ಹೆಚ್ಚು ಮಂದಿಯ ಸಾವಿಗೆ ಕಾರಣವಾದ ತಮಿಳುನಾಡು ಸರ್ಕಾರದ ಜನವಿರೋಧಿ ಕ್ರಮವನ್ನು ಖಂಡಿಸಿ ಮೈಸೂರಿನಲ್ಲಿ ಎಡಪಕ್ಷಗಳ ಜಂಟಿ ಸಮಿತಿ ಆಶ್ರಯದಲ್ಲಿ ಗುರುವಾರ ಮೈಸೂರಿನಲ್ಲಿ ಪ್ರತಿಭಟನೆ ನಡೆಸಲಾಯಿತು.

ಮೈಸೂರಿನ ರಾಮಸ್ವಾಮಿ ವೃತ್ತದಲ್ಲಿ ಜಮಾಯಿಸಿದ ಸಿಪಿಐ, ಸಿಪಿಐ(ಎಂ), ಸಿಪಿಐ (ಎಂಎಲ್) ಮತ್ತು ಎಸ್‍ಯುಸಿಐ ಇನ್ನಿತರ ಪಕ್ಷಗಳು, ಸಂಘಟನೆಗಳು ಕಾರ್ಯಕರ್ತರು ಸ್ಟೆರ್ಲೈಟ್ ಕಂಪನಿ ಹಾಗೂ ತಮಿಳುನಾಡು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ತಮಿಳುನಾಡು ಸರ್ಕಾರದ ಜನವಿರೋಧಿ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿದರು.

25 ವರ್ಷಗಳಿಂದ ಸ್ಟೆರ್ಲೈಟ್ ಕಂಪನಿಯು ತೂತ್ತುಕುಡಿಯಲ್ಲಿ ಉಂಟು ಮಾಡುತ್ತಿದ್ದ ಮಾಲಿನ್ಯದಿಂದಾಗಿ ಸುತ್ತಲಿನ ನೆಲ, ಗಾಳಿ ಮತ್ತು ನೀರು ಕಲುಷಿತಗೊಂಡು, ಜನತೆ ನಾನಾ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಪರಿಸರ ಸಂರಕ್ಷಣೆಯ ನಿಯಮಗಳನ್ನು ಗಾಳಿಗೆ ತೂರಿ ಗಾಳಿಗೆ ವಿಷಯುಕ್ತ ಅನಿಲ ಸೇರ್ಪಡೆಯಾಗುತ್ತಿದ್ದ ಬಗ್ಗೆ 2013ರಲ್ಲಿ ಸುಪ್ರಿಂಕೋರ್ಟ್ ಈ ಕಂಪನಿಗೆ ದಂಡ ವಿಧಿಸಿತ್ತು. ಆದರೆ ಚುನಾಯಿತ ಸರ್ಕಾರ ಜನಹಿತವನ್ನು ಬಿಟ್ಟು ಬಂಡವಾಳ ಶಾಹಿಗಳ ಹಿತ ಕಾಯಲು ಮುಂದಾದವು. ಇದನ್ನು ವಿರೋಧಿಸಿ ಸಹಸ್ರಾರು ಸಂಖ್ಯೆಯ ಜನತೆ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಅವರ ಮೇಲೆ ಪೊಲೀಸರು ಗುಂಡು ಹಾರಿಸಿ, ಹಲವು ಸಾವುಗಳಿಗೆ ಕಾರಣರಾಗಿದ್ದಾರೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರ ತಕ್ಷಣವೇ ಮೃತರ ಕುಟುಂಬ ಮತ್ತು ಗಾಯಾಳುಗಳಿಗೆ ಸೂಕ್ತ ಪರಿಹಾರ ನೀಡಬೇಕು. ನಿಷ್ಟಕ್ಷಪಾತ ತನಿಖೆ ನಡೆಸಿ ಗೋಲಿಬಾರ್‍ಗೆ ಕಾರಣರಾದವರಿಗೆ ಉಗ್ರ ಶಿಕ್ಷೆ ವಿಧಿಸಬೇಕು. ಸ್ಥಳೀಯ ಜನರ ಬೇಡಿಕೆಯಂತೆ ಸ್ಟೆರ್ಲೈಟ್ ಕಂಪನಿ ತಕ್ಷಣವೇ ಮುಚ್ಚಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ಕೆ.ಬಸವರಾಜು, ಎಚ್.ಆರ್.ಶೇಷಾದ್ರಿ, ಬಿ.ರವಿ, ಚಂದ್ರಶೇಖರ ಮೇಟಿ, ಉಮಾದೇವಿ, ಹರೀಶ್, ಸುಮ, ಚಂದ್ರಕಲಾ, ಪುಟ್ಟರಾಜು, ಮುದ್ದುಕೃಷ್ಣ, ಚೌಡಳ್ಳಿ ಜವರಯ್ಯ ಇನ್ನಿತರರು ಉಪಸ್ಥಿತರಿದ್ದರು.

Translate »