ಎಂ.ಜಿ.ಕೊಪ್ಪಲಿನಲ್ಲಿ ಶಾಸಕ ನಾಗೇಂದ್ರ ಪಾದಯಾತ್ರೆ
ಮೈಸೂರು

ಎಂ.ಜಿ.ಕೊಪ್ಪಲಿನಲ್ಲಿ ಶಾಸಕ ನಾಗೇಂದ್ರ ಪಾದಯಾತ್ರೆ

July 1, 2018

ಮೈಸೂರು: ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಅವರು ಇಂದು ಮಂಚೇಗೌಡನಕೊಪ್ಪಲಿನಲ್ಲಿ ಪಾದಯಾತ್ರೆ ನಡೆಸಿ ಸಾರ್ವಜನಿಕರ ಕುಂದು-ಕೊರತೆ ಆಲಿಸಿದರು.

ಬೆಳಿಗ್ಗೆ 7.30 ಗಂಟೆಗೆ ಮುಡಾ, ಪಾಲಿಕೆ, ವಾಣಿವಿಲಾಸ ವಾಟರ್ ವಕ್ರ್ಸ್, ಆರೋಗ್ಯಾಧಿಕಾರಿಗಳೊಂದಿಗೆ ಮಂಚೇಗೌಡನಕೊಪ್ಪಲು ಮತ್ತು ಸುತ್ತಲಿನ ಬಡಾವಣೆಗಳಲ್ಲಿ ನಾಗರಿಕ ಸೌಲಭ್ಯಗಳನ್ನು ಪರಿಶೀಲಿಸಿದರು. ಎಂ.ಜಿ.ಕೊಪ್ಪಲಿನ ದೊಡ್ಡ ಮೋರಿಯಲ್ಲಿ ನೀರು ಹರಿದು ಹೋಗಲು ಅಡ್ಡಿಯಾಗಿ ವಾಸನೆ ಬರುತ್ತಿರುವ ಬಗ್ಗೆ ಸ್ಥಳೀಯರು ದೂರು ನೀಡಿದರು.

ಕುಡಿಯುವ ನೀರು ಸರಬರಾಜು ಯೋಜನೆಗಾಗಿ ಹೊಸದಾಗಿ ಪೈಪ್‍ಲೈನ್ ಅಳವಡಿಸಲು ರಸ್ತೆಗಳನ್ನು ಅಗೆದು ಮುಚ್ಚದೇ ಬಿಟ್ಟಿರುವುದರಿಂದ ವಾಹನ ಸಂಚಾರಕ್ಕೆ ತೊಂದರೆಯಗುತ್ತಿರುವ ಬಗ್ಗೆ ಸ್ಥಳ ಪರಿಶೀಲನೆ ವೇಳೆ ಕಂಡು ಬಂದ ಹಿನ್ನೆಲೆಯಲ್ಲಿ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧಿಕಾರಿಗಳಿಗೆ ಕ್ರಮ ವಹಿಸುವಂತೆ ನಾಗೇಂದ್ರ ಅವರು ಸೂಚಿಸಿದರು.
ಕೆಲವೆಡೆ ನೀರು ಬಾರದೆ ಜನರು ತೊಂದರೆ ಅನುಭವಿಸುತ್ತಿರುವುದರಿಂದ ನಿತ್ಯ ನೀರು ಪೂರೈಸುವಂತೆ ಹೇಳಿದ ನಾಗೇಂದ್ರ ಅವರು, ಹಾಳಾಗಿರುವ ರಸ್ತೆ ರಿಪೇರಿ, ಗುಂಡಿ ಮುಚ್ಚುವ ಕಾಮಗಾರಿಗಳಿಗೆ ಎಸ್ಟಿಮೇಟ್ ತಯಾರಿಸುವಂತೆಯೂ ತಿಳಿಸಿದರು.
ಪಾರ್ಕುಗಳ ನಿರ್ವಹಣೆ, ಬೀದಿ ದೀಪ, ಸ್ವಚ್ಛತೆ ಸೇರಿದಂತೆ ಹಲವು ನಾಗರಿಕ ಸೌಲಭ್ಯಗಳನ್ನು ಪೂರೈಸಬೇಕು. ಪ್ರತೀ ದಿನ ಪಾಲಿಕೆ ಅಧಿಕಾರಿಗಳು ಕ್ಷೇತ್ರದ ವ್ಯಾಪ್ತಿಯಲ್ಲಿ ಸಂಚರಿಸಿ ದೂರುಗಳು ಬಂದಲ್ಲಿ ತಡ ಮಾಡದೇ ಸ್ಪಂದಿಸಬೇಕೆಂದೂ ಶಾಸಕರು ಇದೇ ವೇಳೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

Translate »