`ಮೈಸೂರು ಮಿತ್ರ’ ವರದಿ ಫಲಶ್ರುತಿ: ಚೆಲುವಾಂಬ ಆಸ್ಪತ್ರೆಗೆ ಬಂತು 25 ಮಂಚ
ಮೈಸೂರು

`ಮೈಸೂರು ಮಿತ್ರ’ ವರದಿ ಫಲಶ್ರುತಿ: ಚೆಲುವಾಂಬ ಆಸ್ಪತ್ರೆಗೆ ಬಂತು 25 ಮಂಚ

July 1, 2018
  • 100 ಮಂಚಗಳಿಗೆ ಟೆಂಡರ್ ಪ್ರಕ್ರಿಯೆ ನಡೆದಿದೆ: ಅಧೀಕ್ಷಕಿ ಡಾ.ರಾಧಾಮಣ

ಮೈಸೂರು: ಮೈಸೂರಿನ ಪ್ರತಿಷ್ಠಿತ ಚೆಲುವಾಂಬ ಆಸ್ಪತ್ರೆಯಲ್ಲಿ ಮಂಚಗಳ ಕೊರತೆಗೆ ತಾತ್ಕಾಲಿಕ ಪರಿಹಾರ ಸಿಕ್ಕಿದೆ. ಆಸ್ಪತ್ರೆಗೆ ಸದ್ಯಕ್ಕೆ 25 ಮಂಚಗಳು ಬಂದಿದ್ದು, ಅವುಗಳನ್ನು ಆಸ್ಪತ್ರೆಯಲ್ಲಿ ಜಾಗ ಇರುವ ಕಡೆಗಳಲ್ಲಿ ಹಾಕಲಾಗಿದೆ.

ಆಸ್ಪತ್ರೆಯಲ್ಲಿ ಮಂಚಗಳ ಕೊರತೆಯಿಂದಾಗಿ ನೆಲದ ಮೇಲೆ ಬೆಡ್‍ಗಳನ್ನು ಹಾಕಿ ಗರ್ಭಿಣಿಯರು, ಬಾಣಂತಿಯರು ಮತ್ತು ಮಕ್ಕಳನ್ನು ಮಲಗಿಸಲಾಗಿದ್ದ ಬಗ್ಗೆ ಇತ್ತೀಚೆಗೆ `ಮೈಸೂರು ಮಿತ್ರ’ ಬೆಳಕು ಚೆಲ್ಲಿತ್ತು. ಪತ್ರಿಕೆ ವರದಿ ನೋಡಿದ ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ, ಖುದ್ದು ಪರಿಶೀಲನೆ ನಡೆಸಿದ ವೇಳೆ ತುಂಬು ಗರ್ಭಿಣಿಯರು, ಬಾಣಂತಿಯರು ಹಾಗೂ ಮಕ್ಕಳನ್ನು ನೆಲದ ಮೇಲೆ ಹಾಸಿಗೆ ಹಾಕಿ ಮಲಗಿಸಿದ್ದನ್ನು ಕಂಡು ತೀವ್ರ ವಿಷಾದ ವ್ಯಕ್ತಪಡಿಸಿ, ಆಸ್ಪತ್ರೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು.

ಈ ಬಗ್ಗೆ ಶುಕ್ರವಾರ ಮೈಸೂರು ಜಿಪಂ ಸಭಾಂಗಣದಲ್ಲಿಯೂ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಉಸ್ತುವಾರಿ ಸಮಿತಿ ಸಭೆಯಲ್ಲಿ ಸಂಸದ ಆರ್.ಧ್ರುವನಾರಾಯಣ ಈ ವಿಷಯ ಪ್ರಸ್ತಾಪಿಸಿ, ಪ್ರಸ್ತಾವನೆ ಸಲ್ಲಿಸಲು ಸೂಚಿಸಿದ್ದರು.

ಇದರ ಪರಿಣಾಮ ಇದೀಗ ಆಸ್ಪತ್ರೆಗೆ 25 ಮಂಚ ಮತ್ತು ಬೆಡ್‍ಗಳನ್ನು ಪಿಕೆಟಿಬಿ ಆಸ್ಪತ್ರೆಯಿಂದ ತರಿಸಿಕೊಳ್ಳಲಾಗಿದೆ. ಚೆಲುವಾಂಬ ಆಸ್ಪತ್ರೆಯ ಎ, ಬಿ, ಸಿ ಬ್ಲಾಕ್‍ಗಳಲ್ಲಿ ಎಲ್ಲೆಲ್ಲಿ ಜಾಗ ಇದೆಯೋ ಅಲ್ಲಲ್ಲಿ ಹಾಕಲಾಗಿದೆ. ನೆಲದ ಮೇಲೆ ಹಾಸಿಗೆ ಹಾಕಿ ಮಲಗಿಸಲಾಗಿದ್ದವರನ್ನು ಮಂಚಗಳಿಗೆ ಸ್ಥಳಾಂತರಿಸಲಾಗಿದೆ. ಅಲ್ಲದೆ ಇನ್ನೂ 100 ಮಂಚಗಳಿಗೆ ಪ್ರಸ್ತಾವನೆ, ಟೆಂಡರ್ ಪ್ರಕ್ರಿಯೆ ನಡೆದಿದೆ.

ಈ ಬಗ್ಗೆ ಚೆಲುವಾಂಬ ಆಸ್ಪತ್ರೆಯ ಅಧೀಕ್ಷಕಿ ಡಾ.ರಾಧಾಮಣ , ಈಗ ತಾತ್ಕಾಲಿಕವಾಗಿ ಸಿಸಿಟಿಬಿ ಆಸ್ಪತ್ರೆಯಿಂದ 25 ಮಂಚಗಳನ್ನು ತರಿಸಲಾಗಿದ್ದು, ಬಂದಿರುವ ಮಂಚಗಳನ್ನು ಎಲ್ಲೆಲ್ಲಿ ಜಾಗ ಇದೆಯೋ ಅಲ್ಲಲ್ಲಿ ಹಾಕಲಾಗಿದೆ ಎಂದು `ಮೈಸೂರು ಮಿತ್ರ’ನಿಗೆ ಸ್ಪಷ್ಟಪಡಿಸಿದರು.

ಅಲ್ಲದೆ 100 ಮಂಚಗಳನ್ನು ಖರೀದಿ ಮಾಡಲು ಟೆಂಡರ್ ಕರೆಯುವ ಪ್ರಕ್ರಿಯೆ ನಡೆದಿದ್ದು, ಆಸ್ಪತ್ರೆಯ ಡೀನ್ ಮತ್ತು ಡೈರೆಕ್ಟರ್ ಮೂಲಕ ಅವಶ್ಯವಿರುವ ಮಂಚಗಳ ಪ್ರಸ್ತಾವನೆ ಹೋಗಿದೆ. ಅದು ಮಂಜೂರಾಗಿ ಬರಬೇಕಿದೆ ಎಂದು ತಿಳಿಸಿದರು.

Translate »