ಎಂಜಿ ರಸ್ತೆ ಮಾರುಕಟ್ಟೆ ಬಳಿ ದುರ್ವಾಸನೆಯಿಂದ ಮುಕ್ತಿ `ಮಿತ್ರ’ನ ವರದಿ ಫಲಶ್ರುತಿ
ಮೈಸೂರು

ಎಂಜಿ ರಸ್ತೆ ಮಾರುಕಟ್ಟೆ ಬಳಿ ದುರ್ವಾಸನೆಯಿಂದ ಮುಕ್ತಿ `ಮಿತ್ರ’ನ ವರದಿ ಫಲಶ್ರುತಿ

July 21, 2018

ಮೈಸೂರು:  `ಮೈಸೂರು ಮಿತ್ರ’ನ ಆಶಯ ಫಲಪ್ರದವಾಗಿದ್ದು, ಎಂ.ಜಿ.ರಸ್ತೆಯ ಮಾರುಕಟ್ಟೆಯಲ್ಲಿದ್ದ ತ್ಯಾಜ್ಯವನ್ನು ನಗರಪಾಲಿಕೆ ವಿಲೇವಾರಿ ಮಾಡಿ ಸ್ವಚ್ಛಗೊಳಿಸುವ ಮೂಲಕ ಸಾರ್ವಜನಿಕರನ್ನು ದುರ್ವಾಸನೆ ಕಿರಿಕಿರಿಯಿಂದ ಪಾರು ಮಾಡಿದೆ.

ಅಗ್ರಹಾರದಿಂದ ಮಾಲ್ ಆಫ್ ಮೈಸೂರು ಕಡೆಗೆ ಹೋಗುವ ಎಂ.ಜಿ.ರಸ್ತೆಯಲ್ಲಿರುವ ಮಾರುಕಟ್ಟೆಯ ಬಳಿ ಕೊಳೆತ ತರಕಾರಿಗಳು, ಬಾಳೆ ಎಲೆಗಳು ಹಾಗೂ ಪ್ಲಾಸ್ಟಿಕ್ ಸೇರಿದಂತೆ ಕಸದ ರಾಶಿ ಮುಕ್ತವಾಗಿ ಎಲ್ಲರನ್ನು ಸ್ವಾಗತಿಸಿದರೆ, ಮತ್ತೊಂದೆಡೆ ಚರಂಡಿಯಲ್ಲಿ ಪ್ಲಾಸ್ಟಿಕ್, ಕೊಳೆತ ತರಕಾರಿ ತ್ಯಾಜ್ಯಗಳಿಂದ ತುಂಬಿ ಹೋಗಿದ್ದು, ಮಳೆ ಬಂತೆಂದರೆ ದುರ್ವಾಸನೆ ಬೀರುತ್ತಿತ್ತು. ಈ ಕುರಿತು `ಮೈಸೂರು ಮಿತ್ರ’ ಜು.9ರಂದು `ಗಬ್ಬೆದ್ದು ನಾರುತ್ತಿದೆ ಎಂ.ಜಿ.ರಸ್ತೆ ಮಾರುಕಟ್ಟೆ’ ಶೀರ್ಷಿಕೆಯಡಿ ಸುದ್ದಿ ಪ್ರಕಟಿಸಿತ್ತು. ಇದರಿಂದ ಎಚ್ಚೆತ್ತುಕೊಂಡ ನಗರಪಾಲಿಕೆ, ಮಾರುಕಟ್ಟೆಯಲ್ಲಿದ್ದ ತ್ಯಾಜ್ಯವನ್ನು ವಿಲೇವಾರಿ ಮಾಡುವ ಮೂಲಕ ದುರ್ವಾಸನೆ ಕಿರಿಕಿರಿಯನ್ನು ತಪ್ಪಿಸಿದ್ದಾರೆ.

`ಮೈಸೂರು ಮಿತ್ರ’ನಲ್ಲಿ ಸುದ್ದಿ ಪ್ರಕಟಗೊಂಡ ಮರುದಿನವೇ ಪಾಲಿಕೆ ಸದಸ್ಯರಾದ ಚೆಲುವೇಗೌಡರು, ಪುರುಷೋತ್ತಮ್ ಮತ್ತು ಪಾಲಿಕೆ ಅಧಿಕಾರಿಗಳು ಮಾರುಕಟ್ಟೆ ಭೇಟಿ ನೀಡಿ ಪರಿಶೀಲಿಸಿ, ಅಂದೇ ಮಾರುಕಟ್ಟೆಯಲ್ಲಿದ್ದ ತ್ಯಾಜ್ಯವನ್ನು ವಿಲೇವಾರಿ ಮಾಡಿ ಸ್ವಚ್ಛಗೊಳಿಸಿದರು. ಅಂದಿನಿಂದ ಯಾವುದೇ ದುರ್ವಾಸನೆ ಇಲ್ಲ. ನೆಮ್ಮದಿಯಿಂದ ವ್ಯಾಪಾರ ಮಾಡುತ್ತಿದ್ದೇವೆ. -ಲಕ್ಷ್ಮಣ್, ಟೀ ವ್ಯಾಪಾರಿ.

 

ಮೊದಲು ಮಳೆ ಬಂದರೆ ಚರಂಡಿಯಲ್ಲಿದ್ದ ತ್ಯಾಜ್ಯ ಕೊಳೆತು ಗಬ್ಬೆದ್ದು ದುರ್ವಾಸನೆ ಬೀರುತ್ತಿತ್ತು. ಇದರಿಂದ ವ್ಯಾಪಾರ ಮಾಡಲು ಕಷ್ಟವಾಗುತ್ತಿತ್ತು. ಪತ್ರಿಕೆಯಲ್ಲಿ ಸುದ್ದಿ ಪ್ರಕಟವಾದ ಮರು ದಿನವೇ ಮಾರುಕಟ್ಟೆ, ರಸ್ತೆಯ ಬದಿಯಲ್ಲಿದ್ದ ತ್ಯಾಜ್ಯವನ್ನು ಸ್ವಚ್ಛಗೊಳಿಸಿದರು. ಈಗ ಯಾವುದೇ ದುರ್ವಾಸನೆ ಇಲ್ಲ. ಪ್ರತಿ ದಿನ ಸ್ವಚ್ಛಗೊಳಿಸುತ್ತಿದ್ದಾರೆ. -ಹೆಸರೇಳಲಿಚ್ಚಿಸದ ತರಕಾರಿ ವ್ಯಾಪಾರಿ.

Translate »