ಜನರ ಆರೋಗ್ಯಕ್ಕೆ ಹಾನಿಕರವಾದ ಪರಿಸ್ಥಿತಿಯತ್ತ ಪಾಲಿಕೆ ಚಿತ್ತವಿಲ್ಲ
ಮೈಸೂರು

ಜನರ ಆರೋಗ್ಯಕ್ಕೆ ಹಾನಿಕರವಾದ ಪರಿಸ್ಥಿತಿಯತ್ತ ಪಾಲಿಕೆ ಚಿತ್ತವಿಲ್ಲ

July 21, 2018

ಮೈಸೂರು: ಒಂದೆಡೆ ಮೃತಪಟ್ಟ ಜಾನುವಾರುಗಳ ಕಳೇಬರ ಸೇರಿದಂತೆ ಕೊಳೆತು ನಾರುವ ನಿರುಪಯುಕ್ತ ವಸ್ತುಗಳ ರಾಶಿ ಮತ್ತೊಂದೆಡೆ ನದಿಯಂತೆ ರಸ್ತೆ ತುಂಬೆಲ್ಲಾ ಹರಿಯುತ್ತಿರುವ ಕೊಳಚೆ ನೀರು… ಇದರಿಂದ ಸುತ್ತಮುತ್ತಲಿನ ಪರಿಸರ ಕಲುಷಿತಗೊಂಡು ಪಕ್ಷಿ ಸಂಕುಲ ಸಂಕಷ್ಟಕ್ಕೀಡಾಗಿರುವುದಲ್ಲದೆ, ಸ್ಥಳೀಯರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿದೆ.

ಬಿಎಂಶ್ರೀ ನಗರದ ರೈಲ್ವೆ ಅಂಡರ್ ಬ್ರಿಡ್ಜ್ ಸಮೀಪದ ರಿಂಗ್ ರೋಡ್‍ನ ಸರ್ವೀಸ್ ರಸ್ತೆಯು ಕೊಳೆತ ತ್ಯಾಜ್ಯಗಳಿಂದ ತುಂಬಿದ್ದು, ಕಲುಷಿತ ವಾತಾವರಣ ನಿರ್ಮಾಣವಾಗಿದೆ. ಸ್ಥಳೀಯ ನಿವಾಸಿಗಳು ತಾವು ಸಾಕಿದ ಜಾನುವಾರುಗಳು ಮೃತಪಟ್ಟ ನಂತರ ರಸ್ತೆ ಬದಿಯಲ್ಲಿ ಬಿಸಾಡುವ ಮೂಲಕ ಮಾನವೀಯತೆ ಮರೆಯುತ್ತಿದ್ದಾರೆ. ಇದರಿಂದ ಹಂದಿ, ರಣಹದ್ದುಗಳ ಹಾವಳಿ ಹೆಚ್ಚಾಗಿದೆ. ಜತೆಗೆ ಕೊಳಚೆ ನೀರು ಸರ್ವೀಸ್ ರಸ್ತೆಯಲ್ಲೇ ನದಿಯಂತೆ ಹರಿಯುವುದರಿಂದ ಜನರ ಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.

ಈ ಕುರಿತು ಯಾವೋಬ್ಬ ಸ್ಥಳೀಯರು ಆಕ್ಷೇಪಿಸದ ಹಿನ್ನೆಲೆಯಲ್ಲಿ ಕೆಲವು ತಿಂಗಳಿನಿಂದ ನಗರದ ಬೇರೆ ಬೇರೆ ಪ್ರದೇಶಗಳಲ್ಲಿ ಸತ್ತ ಪ್ರಾಣಿಗಳನ್ನು ತಂದು ಇಲ್ಲಿನ ರಸ್ತೆ ಬದಿಯಲ್ಲಿ ಬಿಸಾಡಿ ಹೋಗುತ್ತಿದ್ದಾರೆ. ಇದರಿಂದ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು, ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ.

ಕೊಳಚೆ ನೀರಿನಿಂದ ಕೂಡಿದ ರಸ್ತೆ: ರಿಂಗ್ ರೋಡ್‍ನ ಸರ್ವಿಸ್ ರಸ್ತೆ ಪಕ್ಕದಲ್ಲಿ ಚರಂಡಿ ನಿರ್ಮಿಸಿದ್ದು, ಸುತ್ತಮುತ್ತಲಿನ ನಿವಾಸಿಗಳು ಬಾಳೆಹಣ್ಣು, ಕೋಳಿ ಅಂಗಡಿ, ಆಸ್ಪತ್ರೆ ಸೇರಿದಂತೆ ಮತ್ತಿತರೆ ತ್ಯಾಜ್ಯಗಳನ್ನು ಚರಂಡಿಯಲ್ಲಿ ಸುರಿದಿರುವುದರಿಂದ ಚರಂಡಿ ಸಂಪೂರ್ಣವಾಗಿ ಮುಚ್ಚಿ ಹೋಗಿದೆ. ಇದರಿಂದ ಬಿಎಂಶ್ರೀನಗರದಿಂದ ಬರುವ ಕೊಳಚೆ ನೀರು ರಸ್ತೆಯ ಮೇಲೇಯೇ ಹರಿಯುತ್ತಿದ್ದು, ಸುತ್ತಮುತ್ತಲಿನ ವಾತಾವರಣ ಕಲುಷಿತವಾಗಿದೆ.

ಹಂದಿಗಳ ಹಾವಳಿ: ಮೃತಪಟ್ಟ ಜಾನುವಾರು ಸೇರಿದಂತೆ ಮತ್ತಿತರೆ ಪ್ರಾಣಿಗಳನ್ನು ಆಟೋಗಳಲ್ಲಿ ತಂದು ರಸ್ತೆ ಬದಿಯಲ್ಲೇ ಬಿಸಾಡಿ ಹೋಗುತ್ತಾರೆ. ಇವುಗಳನ್ನು ಹಂದಿ, ನಾಯಿ, ರಣಹದ್ದುಗಳು ತಿಂದು ಕಳೇಬರವನ್ನು ರಸ್ತೆಯಲ್ಲೆಲ್ಲಾ ಹರಡುತ್ತಿವೆ.
ಆಸ್ಪತ್ರೆ ತ್ಯಾಜ್ಯಗಳು: ಆಸ್ಪತ್ರೆಗಳ ನಿರುಪಯುಕ್ತ ವಸ್ತುಗಳನ್ನು ರಸ್ತೆಯಲ್ಲಿ ಸುರಿದಿದ್ದು, ಕೊಳಚೆ ನೀರು ತ್ಯಾಜ್ಯಗಳ ಮೇಲೆಯೇ ಹರಿಯುತ್ತಿರುವುದರಿಂದ ಕೊಳೆತು ದುರ್ವಾಸನೆ ಬೀರುತ್ತಿದ್ದರೆ, ಮತ್ತೊಂದೆಡೆ ರಿಂಗ್ ರಸ್ತೆಯ ಎರಡೂ ಬದುಗಳಲ್ಲೂ ಹಳೇ ಕಟ್ಟಡಗಳ ಡಬ್ರಿಸ್ ಸುರಿದಿದ್ದಾರೆ.

ಗುಂಡಿ ಬಿದ್ದ ಮೋರಿ: ಕೊಳಚೆ ನೀರು ರಸ್ತೆಯಲ್ಲಿ ಹರಿದು ಸೇತುವೆಯ ಸಮೀಪದಲ್ಲಿ ಚರಂಡಿಗೆ ಬೀಳುತ್ತಿರುವುದರಿಂದ ಮೋರಿಯ ಸಮೀಪದ ಡಾಂಬರ್ ಕೊಚ್ಚಿಹೋಗಿ ಗುಂಡಿ ಬಿದ್ದಿದ್ದು, ಅಪಘಾತಕ್ಕೆ ಆಹ್ವಾನ ನೀಡುತ್ತಿದೆ.

ಒಟ್ಟಾರೆ ರಿಂಗ್‍ರಸ್ತೆ ದುರ್ವಾಸನೆ ಬೀರುತ್ತಿದ್ದು, ಸ್ಥಳೀಯ ನಿವಾಸಿಗಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಸಮಸ್ಯೆಯನ್ನು ಬಗೆಹರಿಸುವರೇ ಎಂದು ಕಾದು ನೋಡಬೇಕಿದೆ.

Translate »