ವಿದ್ಯುನ್ಮಾನ ಮಾಧ್ಯಮಗಳು ತೀವ್ರ ಟೀಕೆಗೆ ಒಳಗಾಗಿವೆ: ಕನ್ನಡಪ್ರಭ, ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ರವಿ ಹೆಗಡೆ ವಿಷಾದ
ಮೈಸೂರು

ವಿದ್ಯುನ್ಮಾನ ಮಾಧ್ಯಮಗಳು ತೀವ್ರ ಟೀಕೆಗೆ ಒಳಗಾಗಿವೆ: ಕನ್ನಡಪ್ರಭ, ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ರವಿ ಹೆಗಡೆ ವಿಷಾದ

July 21, 2018

ಮೈಸೂರು: ಸುದ್ದಿ ವಾಹಿನಿಗಳು ಟಿ.ಆರ್.ಪಿ ವಿಧಾನಕ್ಕೆ ಬದಲಾಗಿ ಪರ್ಯಾಯ ವಿಧಾನ ಕಂಡುಕೊಳ್ಳಬೇಕಿದೆ ಎಂದು ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ರವಿಹೆಗಡೆ ಅಭಿಪ್ರಾಯಪಟ್ಟರು.

ಮೈಸೂರಿನ ರಾಮಾನುಜ ರಸ್ತೆಯಲ್ಲಿರುವ ರಾಜೇಂದ್ರ ಕಲಾಮಂದಿರದಲ್ಲಿ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆಯಲ್ಲಿ ಪ್ರಧಾನ ಭಾಷಣಕಾರರಾಗಿ ಅವರು ಮಾತನಾಡಿದರು.

ಜನಕೇಂದ್ರೀತವಾಗುವ ಬದಲು ಹೆಚ್ಚು ವಾಣಿಜ್ಯ ಕೇಂದ್ರೀತವಾದ ಹಿನ್ನೆಲೆಯಲ್ಲಿ ಸಾಂಪ್ರದಾಯಕವಾಗಿ ನಡೆದು ಬಂದ ದೂರದರ್ಶನ ಹಾಗೂ ಮುದ್ರಣ ಮಾಧ್ಯಮದಲ್ಲಿ ಇದೀಗ ವಿಶ್ವಾಸಾರ್ಹತೆಯ ಕೊರತೆ ಮೂಡಿದೆ. ಸಂಪಾದಕೀಯ ಕೇಂದ್ರೀತ ಪ್ರಸರಣ ವ್ಯವಸ್ಥೆಯ ಬದಲು ಯೋಜನೆ ಕೇಂದ್ರಿತ ವ್ಯವಸ್ಥೆ ಮನೆ ಮಾಡಿದ್ದು, ಟಿಆರ್‍ಪಿ (ಟೆಲಿವಿಷನ್ ರೇಟಿಂಗ್ ಪಾಯಿಂಟ್) ಹಿಂದೆ ಬಿದ್ದು ಮೌಲ್ಯಗಳು ಕುಸಿಯುವಂತಾಗಿದೆ. ಹೆಚ್ಚಿನ ಟಿಆರ್‍ಪಿ ಇದ್ದರೆ ಹೆಚ್ಚು ಜಾಹೀರಾತು ದೊರೆಯುತ್ತವೆ ಎಂಬ ಕಾರಣಕ್ಕೆ ಈ ಟಿಆರ್‍ಪಿ ವಿಧಾನದಿಂದ ಹೊರಬರಲಾಗುತ್ತಿಲ್ಲ ಎಂದು ವಿಷಾದಿಸಿದರು.

ಮನರಂಜನಾ ವಾಹಿನಿಗಳಿಗೆ ಬೇಕಿದ್ದರೆ, ಈ ಟಿಆರ್‍ಪಿ ವಿಧಾನ ಇರಲಿ. ಆದರೆ ಸುದ್ದಿ ವಾಹಿನಿಗಳು ಇದರಿಂದ ಹೊರಬಂದು ಪರ್ಯಾಯ ವಿಧಾನ ಅಳವಡಿಸಿಕೊಳ್ಳಬೇಕಿದೆ. ನಿಮ್ಮ ಸುದ್ದಿ ಸಂಸ್ಥೆಯಿಂದಲೇ ಈ ಪ್ರಯತ್ನ ಮಾಡಬಹುದಲ್ಲವೇ? ಎಂಬ ಪ್ರಶ್ನೆ ನಿಮ್ಮನ್ನು ಕಾಡಬಹುದು. ಆದರೆ ನಮ್ಮ ಒಂದೇ ಸಂಸ್ಥೆ ಅನುಸರಿಸಿದರೆ ಅವನತಿಯ ಹಾದಿ ಹಿಡಿಯಬೇಕಾಗುತ್ತದೆ. ಹೀಗಾಗಿ ನಿರ್ಣಾಯಕ ಹಂತದಲ್ಲಿರುವ ಸುದ್ದಿ ವಾಹಿನಿಗಳು ಒಟ್ಟಾಗಿ ಟಿಆರ್‍ಪಿಗೆ ಬದಲಿ ಮಾರ್ಗ ಕಂಡುಕೊಳ್ಳಲು ಮುಂದಾಗಬೇಕಿದೆ ಎಂದು ನುಡಿದರು.

ಪ್ರಸ್ತುತ ಮಾಧ್ಯಮ ಎಂದಾಕ್ಷಣ ಟೀಕಿಸುವುದೇ ಹೆಚ್ಚಾಗುತ್ತಿದ್ದು, ಮಾಡಿದ ಒಳ್ಳೆಯ ಕೆಲಸಗಳಿಗೆ ಶ್ರೇಯಸ್ಸು ಸಿಗುತ್ತಿಲ್ಲ. ಪತ್ರಿಕಾರಂಗ ಸಮಾಜದ 4ನೇ ಸ್ತಂಭ ಎಂಬುದು ವಾಸ್ತವವಾದರೂ ನಮ್ಮಲ್ಲಿ ಆತ್ಮ ವಿಮರ್ಶೆಯಾಗಬೇಕಿದೆ. ಇಂದು ಮುದ್ರಣ ಮಾಧ್ಯಮ ದೊಡ್ಡ ಪ್ರಮಾಣದ ಟೀಕೆಗೆ ತುತ್ತಾಗಿಲ್ಲ. ಆದರೆ ವಿದ್ಯುನ್ಮಾನ ಮಾಧ್ಯಮಗಳ ಬಗ್ಗೆ ಟೀಕೆಗಳು ವ್ಯಾಪಕವಾಗಿದ್ದು, ಇದಕ್ಕಿಂತಲೂ ಸಾಮಾಜಿಕ ಜಾಲತಾಣಗಳು ವ್ಯಾಪಕ ಟೀಕೆಗೆ ಒಳಗಾಗಿದೆ. ಇದಕ್ಕೆ ಕಾರಣ ಅದರಲ್ಲಿ ಬಿತ್ತರವಾಗುವ ಸುಳ್ಳು ಸಂಗತಿಗಳೇ ಆಗಿವೆ. ಇದರ ಪರಿಣಾಮ ಒಮ್ಮೊಮ್ಮೆ ಅನಾಹುತ ಆಗಿದ್ದೂ ಆಗಿದೆ. ಇಂತಹ ಸನ್ನಿವೇಶದಲ್ಲಿ ತಂತ್ರಜ್ಞಾನದಿಂದ ಹೊರಹೊಮ್ಮಿರುವ ಸಾಮಾಜಿಕ ಜಾಲತಾಣಗಳನ್ನು ಬೇಕಿದ್ದರೆ ಅದೇ ತಂತ್ರಜ್ಞಾನದಿಂದ ಸರಿಪಡಿಸಲು ಅವಕಾಶವಿದೆ. ಆದರೆ ಅಂತಹ ಪ್ರಯತ್ನ ಆಗುತ್ತಿಲ್ಲ ಎಂದು ವಿಷಾದಿಸಿದರು.

ಮೈಸೂರಿನಲ್ಲಿ ಕನ್ನಡ ಮೊದಲ ಪತ್ರಿಕೆ?: ಮೈಸೂರು ಪತ್ರಿಕಾರಂಗ ಉನ್ನತ ಇತಿಹಾಸ ಹೊಂದಿದೆ. ಹೀಗಾಗಿ ಕನ್ನಡ ಮೊದಲ ಪತ್ರಿಕೆ ಎಂಬ ಹೆಗ್ಗಳಿಕೆಗೆ ಭಾಜನವಾಗಿರುವ ಮಂಗಳೂರಿನಿಂದ ಪ್ರಸಾರಗೊಂಡ `ಮಂಗಳೂರು ಸಮಾಚಾರ’ ಪತ್ರಿಕೆಗೆ ಮೊದಲೇ ಮೈಸೂರಿನಲ್ಲಿ ಪತ್ರಿಕೆಯೊಂದು ಜತ್ಮ ತಾಳಿರುವ ಸಾಧ್ಯತೆ ಇರಬಹುದು. ಇತಿಹಾಸಕಾರರು ಈ ನಿಟ್ಟಿನಲ್ಲಿ ಸಂಶೋಧನೆಗೆ ಮುಂದಾಗಬೇಕು. ರಾಜ್ಯದ ಇನ್ನಿತರ ವಿವಿಗಳ ಪತ್ರಿಕೋದ್ಯಮ ವಿಭಾಗಗಳಿಗಿಂತ ಮೈಸೂರು ವಿವಿ ಪತ್ರಿಕೋದ್ಯಮ ವಿಭಾಗದಲ್ಲಿ ತಯಾರಾಗುವ ಪತ್ರಕರ್ತರ ಸಂಖ್ಯೆ ಅಗಾಧವಾದದು. ಹೀಗಾಗಿ ಮೈಸೂರು ಪತ್ರಕರ್ತರ ಗರಡಿ ಮನೆಯಾದರೆ ಬೆಂಗಳೂರು ಕುಸ್ತಿ ಅಖಾಡ ಎಂದು ಬಣ್ಣಿಸಬಹುದು. ಆಕಾಶವಾಣಿಯ ಉಗಮ ಸ್ಥಾನ ಮೈಸೂರು ಆಗಿದ್ದು, ಇಲ್ಲಿನ ಸಣ್ಣ ಪತ್ರಿಕೆಗಳು ರಾಜ್ಯ ಮಟ್ಟದಲ್ಲಿ ವಿಸ್ತರವಾಗಿ ಬೆಳೆಯುವ ಅವಕಾಶಗಳಿವೆ ಎಂದು ನುಡಿದರು.

Translate »