ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದ ಫುಟ್‍ಬಾಲ್ ಮೈದಾನದಲ್ಲಿ ಶನಿವಾರ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದಿಂದ 2 ದಿನಗಳ ಪತ್ರಕರ್ತರ ಕ್ರೀಡಾಕೂಟಕ್ಕೆ ರಾಷ್ಟ್ರೀಯ ಕ್ರೀಡಾಪಟುಗಳಾದ ಶೂಟರ್ ರಕ್ಷಿತಶಾಸ್ತ್ರಿ, ವಾಲಿಬಾಲ್ ಆಟಗಾರ್ತಿ ಕುಮಾರಿ ಹನಿ, ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಸದಾ ಒತ್ತಡದಲ್ಲಿ ಕೆಲಸ ಮಾಡುವ ಪತ್ರಕರ್ತರಿಗೆ ಕ್ರೀಡಾಕೂಟ ಆಯೋಜಿಸಿರುವುದು ಉತ್ತಮವಾಗಿದೆ. ಪತ್ರಕರ್ತರು ಆರೋಗ್ಯದ ಕಡೆಗೆ ಗಮನಹರಿಸಬೇಕು. ಬೆಳಿಗ್ಗೆ ಸಮಯದಲ್ಲಿ ವಾಯುವಿಹಾರ, ವ್ಯಾಯಾಮ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಮೈಸೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಪಿ.ಕೃಷ್ಣಯ್ಯ ಮಾತನಾಡಿ, ಈ ಹಿಂದೆ ಪತ್ರಕರ್ತರು ಸೈಕಲ್ ಮೂಲಕ ಸಂಚಾರ ಮಾಡಿ ಸುದ್ದಿ ಹುಡುಕುತ್ತಿದ್ದರು. ಆದರೆ, ಈಗ ಎಲ್ಲವೂ ಬದಲಾಗಿದೆ. ಒಂದು ದೂರವಾಣಿ ಕರೆ ಅಥವಾ ಇ-ಮೇಲ್, ವಾಟ್ಸ್‍ಆ್ಯಪ್ ಸೇರಿದಂತೆ ಇಂಟರ್‍ನೆಟ್ ವ್ಯವಸ್ಥೆ ಬಳಸಿ ಕುಳಿತಲಿಯೇ ಸುದ್ದಿ ಸಂಗ್ರಹಿಸುತ್ತಿದ್ದಾರೆ. ಇದರಿಂದ ಪತ್ರಕರ್ತರಿಗೆ ದೈಹಿಕ ಕಸರತ್ತು ಇಲ್ಲದಂತಾಗಿದೆ ಎಂದರು.
ಆರೋಗ್ಯದ ದೃಷ್ಟಿಯಿಂದ ಪತ್ರಕರ್ತರಿಗೆ ಕ್ರೀಡಾಕೂಟ ಆಯೋಜಿಸಿರುವುದು ಅಗತ್ಯವಾಗಿದೆ. ಪತ್ರಕರ್ತರು ಯೋಗ, ವ್ಯಾಯಾಮದಂತಹ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು. ಇದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ಉತ್ತಮವಾಗಿರಲು ಸಹಕಾರಿಯಾಗಲಿದೆ. ಜತೆಗೆ, ವರ್ಷಕ್ಕೊಮ್ಮೆ ಎಲ್ಲ ಪತ್ರಕರ್ತರು ಸೇರಿ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವುದರಿಂದ ಬಾಂಧವ್ಯವೂ ವೃದ್ಧಿಯಾಗಲಿದೆ ಎಂದು ತಿಳಿಸಿದರು.
ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ ಅಧ್ಯಕ್ಷತೆ ವಹಿಸಿದ್ದರು. ಕ್ರೀಡಾಕೂಟದಲ್ಲಿ ಉಪಾಧ್ಯಕ್ಷ ಎಂ.ಸುಬ್ರಹ್ಮಣ್ಯ, ಪ್ರಧಾನ ಕಾರ್ಯದರ್ಶಿ ಕೆ.ಜೆ.ಲೋಕೇಶ್‍ಬಾಬು, ಕಾರ್ಯದರ್ಶಿ ಬಿ.ರಾಘವೇಂದ್ರ, ಖಜಾಂಚಿ ದಕ್ಷಿಣಮೂರ್ತಿ, ಗ್ರಾಮಾಂತರ ಕಾರ್ಯದರ್ಶಿ ಧರ್ಮಾಪುರ ನಾರಾಯಣ ಹಾಗೂ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಬಳಿಕ ಕ್ರಿಕೆಟ್ ಪಂದ್ಯಾವಳಿ ನಡೆಯಿತು. ಅವಿನಾಶ ಪಾಂಡವಪುರ, ರವಿ, ಸಿ.ದಿನೇಶ್, ಚಂದ್ರಶೇಖರ್, ಆರ್.ಕೃಷ್ಣ ಅವರ ನೇತೃತ್ವದ ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದವು. ಆಟಗಾರರು ಉತ್ತಮ ಪ್ರದರ್ಶನ ನೀಡಿದರು.