ಮೈಸೂರು: ಮಾನವೀಯ ದೌರ್ಬಲ್ಯಗಳಿಂದ ಮನುಷ್ಯನನ್ನು ಮುಕ್ತಗೊಳಿಸಿ, ದೇಹ ಮತ್ತು ಆತ್ಮವನ್ನು ಪವಿತ್ರಗೊಳಿಸುವಂತಹ ರಂಜಾನ್ ಹಬ್ಬ ಎಂದೇ ಜನಪ್ರಿಯವಾಗಿರುವ ಈದ್-ಉಲ್-ಫಿತರ್ ನಗರದ ಕೌಟಿಲ್ಯ ವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಂದಲೇ ಆಚರಿಸಲ್ಪಟ್ಟಿತು. ಪವಿತ್ರ ಕುರಾನಿನ ಪಠಣೆ ಮಾಡಿ ರಂಜಾನ್ ಆಚರಣೆಯ ಅರಿವು ಮತ್ತು ಆಚರಣೆಯ ಉದ್ದೇಶದ ಬಗ್ಗೆ ತಿಳಿಸಲಾಯಿತು.
ವಿದ್ಯಾಲಯದ ಅಧ್ಯಕ್ಷರಾದ ಆರ್.ರಘು ಮಾತನಾಡುತ್ತ ‘ಮನುಷ್ಯ ಮನುಷ್ಯನನ್ನು ಪ್ರೀತಿಸುವ, ಒಬ್ಬರ ವಿಚಾರವನ್ನು ಇನ್ನೊಬ್ಬರ ಜೊತೆ ಹಂಚಿಕೊಂಡು ಎಲ್ಲರೂ ಸಹಬಾಳ್ವೆ ನಡೆಸಬೇಕು. ಇಂತಹ ಸಂದೇಶ ಸಾರುವ ಪವಿತ್ರ ಹಬ್ಬವೇ ರಂಜಾನ್’ ಎಂದು ತಿಳಿಸಿದರು.
ಮಕ್ಕಳೆಲ್ಲರೂ ಸೇರಿ ಭಗವಂತನನ್ನು ಸ್ಮರಿಸುವ ಗೀತೆ ಗಾಯನ ಮಾಡಿದರು. ಅಹಿಂಸೆಯನ್ನು ಪಾಲಿಸುವುದಾಗಿ ವಾಗ್ದಾನ ಮಾಡಿದರು. ಪ್ರಾಂಶುಪಾಲರಾದ ಡಾ.ಎಲ್.ಸವಿತಾ ಮಾತನಾಡಿ, ಎಲ್ಲ ಧರ್ಮಗಳು ಬಹಳ ಮುಖ್ಯ. ನಮ್ಮ ದೇಶದಲ್ಲಿರುವ ಎಲ್ಲ ಧರ್ಮಗಳನ್ನು ಸಮಾನವಾಗಿ ಸ್ವೀಕರಿಸಿ, ಗೌರವಿಸಬೇಕು. ಏಕೆಂದರೆ ದೇವರು ಸರ್ವವ್ಯಾಪಿ, ಪ್ರಕೃತಿಯ ಪ್ರತಿಯೊಂದು ಅಂಶದಲ್ಲೂ ಇದ್ದಾನೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಉಪಪ್ರಾಂಶುಪಾಲಗಳಾದ ಶ್ರೀಮತಿ ರಾಧಿಕ.ಬಿ.ಬಿ, ಶ್ರೀಮತಿ ಪೂಜ ಉಪಸ್ಥಿತರಿದ್ದರು. ಶಿಕ್ಷಕರಾದ ಮಹಮದ್‍ಗೌಸ್ ಹಾಗೂ ಶ್ರೀಮತಿ ರೋಷನ್ ಬಾನು ಮಕ್ಕಳಿಗೆ ಶುಭಾಶಯ ಕೋರಿದರು.