ಪತ್ರಕರ್ತರಿಗೆ ಜೀವ ವಿಮೆ, ತಾಲೂಕು ಮಟ್ಟದಲ್ಲಿ ಪತ್ರಿಕಾ ಭವನ ನಿರ್ಮಾಣಕ್ಕೆ ಪ್ರಾಮಾಣಿಕ ಪ್ರಯತ್ನ
ಮೈಸೂರು

ಪತ್ರಕರ್ತರಿಗೆ ಜೀವ ವಿಮೆ, ತಾಲೂಕು ಮಟ್ಟದಲ್ಲಿ ಪತ್ರಿಕಾ ಭವನ ನಿರ್ಮಾಣಕ್ಕೆ ಪ್ರಾಮಾಣಿಕ ಪ್ರಯತ್ನ

July 21, 2018
  •  ಉನ್ನತ ಶಿಕ್ಷಣ ಸಚಿವ ಜಿಟಿಡಿ ಭರವಸೆ
  • ಮೈಸೂರಲ್ಲಿ ಪತ್ರಿಕಾ ದಿನಾಚರಣೆ
  • ಎಂಟು ಮಂದಿ ಪತ್ರಕರ್ತರಿಗೆ ಸನ್ಮಾನ

ಮೈಸೂರು: ಮಾಧ್ಯಮ ಕ್ಷೇತ್ರ ಸಮಾಜವನ್ನು ತಿದ್ದುವಂತಹ ಮಹತ್ವದ ಜವಾಬ್ದಾರಿ ಹೊಂದಿದ್ದು, ಈ ಕ್ಷೇತ್ರದಲ್ಲಿ ದುಡಿಯುವ ಪತ್ರಕರ್ತರಿಗೆ ಸರ್ಕಾರದಿಂದ ಜೀವ ವಿಮೆ ಜಾರಿಗೊಳಿಸಲು ಹಾಗೂ ಮೈಸೂರು ಜಿಲ್ಲೆಯ ತಾಲೂಕುಗಳಲ್ಲಿ ಪತ್ರಿಕಾ ಭವನ ನಿರ್ಮಾಣಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ (ಜಿಟಿಡಿ) ಹೇಳಿದರು.

ಮೈಸೂರಿನ ರಾಮಾನುಜ ರಸ್ತೆಯಲ್ಲಿರುವ ರಾಜೇಂದ್ರ ಕಲಾಮಂದಿರದಲ್ಲಿ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆಯಲ್ಲಿ ಜಿಲ್ಲೆಯ ಸಾಧಕ ಪತ್ರಕರ್ತರಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಅವರು ಮಾತನಾಡಿದರು.

ರಾಜ್ಯ ಹೋಟೆಲ್ ಮಾಲೀಕರ ಸಂಘ ನಿಕಟಪೂರ್ವ ಅಧ್ಯಕ್ಷ ಎಂ.ರಾಜೇಂದ್ರ ತಮ್ಮ ಭಾಷಣದಲ್ಲಿ ಪತ್ರಕರ್ತರು ಅನೇಕ ಸಂದರ್ಭದಲ್ಲಿ ಪ್ರಾಣ ಪಣಕ್ಕಿಟ್ಟು ಕರ್ತವ್ಯ ನಿರ್ವಹಿಸುತ್ತಾರೆ. ಹೀಗಾಗಿ ಸರ್ಕಾರದಿಂದ 50 ಲಕ್ಷ ರೂ. ಜೀವವಿಮೆ ನೀಡಲು ಕಾರ್ಯಕ್ರಮ ರೂಪಿಸಬೇಕೆಂದು ಮನವಿ ಮಾಡಿದನ್ನು ಪ್ರಸ್ತಾಪಿಸಿದ ಜಿ.ಟಿ.ದೇವೇಗೌಡರು, ರಾಜೇಂದ್ರ ಅವರು ಪತ್ರಕರ್ತರ ಪರವಾಗಿ ಮಾಡಿರುವ ಮನವಿಗೆ ಅವರನ್ನು ಅಭಿನಂದಿಸುತ್ತೇನೆ. ಜೊತೆಗೆ ಈ ಸಂಬಂಧ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಜಿಲ್ಲೆಯ ತಾಲೂಕು ಕೇಂದ್ರಗಳಲ್ಲಿ ಸರ್ಕಾರದಿಂದ ಪತ್ರಿಕಾ ಭವನ ನಿರ್ಮಾಣ ಮಾಡಿಕೊಡಬೇಕೆಂಬ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದಿಂದ ಸಲ್ಲಿಸಿದ ಮನವಿಗೆ ಸ್ಪಂದಿಸಿದ ಜಿಟಿಡಿ, ಮನವಿ ಸಲ್ಲಿಸುವ ಜೊತೆಗೆ ಈ ಬಗ್ಗೆ ಆಗಾಗ್ಗೆ ನಮ್ಮ ಗಮನ ಸೆಳೆದರೆ, ಅದು ಕಾರ್ಯಗತವಾಗಲು ಸಾಧ್ಯ. ಸಹಕಾರ ನೀಡುವವರು ಇದ್ದೇವೆ. ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕಷ್ಟೆ ಎಂದ ಜಿಟಿಡಿ, ಎಂ.ರಾಜೇಂದ್ರ ತಮ್ಮ 6 ಕೋಟಿ ರೂ. ವೆಚ್ಚದ ನೂತನ ಕಟ್ಟಡವನ್ನು ಕೊಡುಗೆಯಾಗಿ ತಮ್ಮ ಪಕ್ಷಕ್ಕೆ (ಬಿಜೆಪಿ) ನೀಡಿದ್ದಾರೆ. ಹೀಗಿರುವಾಗ ಪತ್ರಕರ್ತರ ಸಂಘಕ್ಕೆ ಒಂದು ನಿವೇಶನದ ದುಡ್ಡು ಕೊಡಿ ಎಂದರೆ ಇಲ್ಲ ಎನ್ನುತ್ತಾರೆಯೇ ಎಂದು ನಯವಾಗಿಯೇ ವೇದಿಕೆಯಲ್ಲಿದ್ದ ಎಂ.ರಾಜೇಂದ್ರ ಅವರನ್ನು ಪೇಚಿಗೆ ಸಿಲುಕಿಸಿದರು.

ಶಾಸಕಾಂಗ, ನ್ಯಾಯಾಂಗ ಹಾಗೂ ಕಾರ್ಯಾಂಗವನ್ನು ತಿದ್ದುವ ಶಕ್ತಿ ಪತ್ರಿಕಾರಂಗಕ್ಕೆ ಇದ್ದು, ಹೀಗಾಗಿ ಈ ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸುವವರು ಮಹತ್ವದ ಜವಾಬ್ದಾರಿ ಹೊಂದಿರುತ್ತಾರೆ. ಮೈಸೂರಿನ ಕುಡಿಯುವ ನೀರಿನ ಬವಣೆ ನಿವಾರಿಸಲು 545 ಕೋಟಿ ರೂ. ವೆಚ್ಚದ ಹಳೆ ಉಂಡವಾಡಿ ಯೋಜನೆ ಕಾರ್ಯಗತಗೊಳಿಸಲು ರಾಜ್ಯ ಬಜೆಟ್‍ನಲ್ಲಿ ಅವಕಾಶ ಮಾಡಿಕೊಡಲಾಗಿದೆ. ಇಡೀ ದೇಶದ ಸಾಂಸ್ಕøತಿಕ ನಗರವಾಗಿರುವ ಮೈಸೂರನ್ನು ಉಳಿಸಿ, ಬೆಳೆಸಲು ಮಾಧ್ಯಮ ಮಿತ್ರರು ತಮ್ಮ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಮಳೆ ಹಿನ್ನೆಲೆಯಲ್ಲಿ ಸಿಎಂ ಗೈರು: ಇಂದಿನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪಾಲ್ಗೊಳ್ಳಬೇಕಿತ್ತು. ಆದರೆ ಈಗ ಅವರು ಭಾಗಮಂಡಲದಲ್ಲಿ ಇದ್ದು, ಮಳೆಯ ಕಾರಣ ಅಲ್ಲಿಂದ ಹೊರಡುವುದು ತಡವಾಗುವ ಮಾಹಿತಿ ನೀಡಿ ನನಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ತಿಳಿಸಿದ್ದಾರೆ ಎಂದ ಜಿಟಿಡಿ, ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪರವಾಗಿ ಪತ್ರಿಕಾ ದಿನಾಚರಣೆಯ ಶುಭಾಷಯ ತಿಳಿಸಿದರು.

ಮಾಜಿ ಸಚಿವ, ಸಂಸದ ಹಾಗೂ ಹಾಲಿ ಶಾಸಕ ಎ.ಹೆಚ್.ವಿಶ್ವನಾಥ್ ಮಾತನಾಡಿ, ರಾಜ್ಯ ಸರ್ಕಾರದ ಹಣಕಾಸಿನ ಸ್ಥಿತಿಯ ಮೇಲೆ ಮಾಧ್ಯಮಗಳು ಬೆಳಕು ಚೆಲ್ಲಬೇಕು. ಆ ಮೂಲಕ ರಾಜ್ಯದ ಜನತೆಗೆ ವಾಸ್ತವ ಸ್ಥಿತಿ ಮನವರಿಕೆ ಮಾಡಿಕೊಡಬೇಕು. ಬಜೆಟ್‍ನ ಹಣದಲ್ಲಿ ಶಿಕ್ಷಣ, ರಸ್ತೆ, ಆರೋಗ್ಯ ಎಲ್ಲದಕ್ಕೂ ಬಳಸಬೇಕಿದೆ. ಹೀಗಾಗಿ ಹಣಕಾಸಿನ ಸ್ಥಿತಿಯ ಬಗ್ಗೆ ಮಾಧ್ಯಮಗಳು ಜನರಿಗೆ ತಿಳಿಸಬೇಕು ಎಂದು ಕೋರಿದರು.

ಪ್ರಶಸ್ತಿ ಪುರಸ್ಕøತರು: ಈ ಬಾರಿಯ ಪತ್ರಿಕಾ ದಿನಾಚರಣೆಯ ಅಂಗವಾಗಿ ಪತ್ರಕರ್ತರ ಸಂಘದಿಂದ ಕೊಡಮಾಡುವ ಪ್ರಶಸ್ತಿಗಳಿಗೆ ಭಾಜನರಾದ 8 ಮಂದಿ ಪತ್ರಕರ್ತರಿಗೆ ಸಮಾರಂಭದಲ್ಲಿ ಪ್ರಶಸ್ತಿಗಳನ್ನು ಜಿಟಿಡಿ ಪ್ರದಾನ ಮಾಡಿದರು.

ಜೀವಮಾನ ಸಾಧನೆ ಪ್ರಶಸ್ತಿಗೆ ರಾಜ್‍ಕುಮಾರ್ ಭಾವಸಾರ್ (ಮೈಸೂರು ಮಿತ್ರ ಹಿರಿಯ ವರದಿಗಾರ), ವರ್ಷದ ಹಿರಿಯ ಉಪಸಂಪಾದಕ ಪ್ರಶಸ್ತಿಗೆ ದೊಡ್ಡಹುಂಡಿ ರಾಜಣ್ಣ (ವಿಜಯವಾಣಿ ), ವರ್ಷದ ವರದಿಗಾರ ಪ್ರಶಸ್ತಿಗೆ ಹರೀಶ್ ಎಲ್. ತಲಕಾಡು (ವಿಜಯ ಕರ್ನಾಟಕ), ವರ್ಷದ ಗ್ರಾಮಾಂತರ ಪತ್ರಕರ್ತ ಪ್ರಶಸ್ತಿಗೆ ಹನಗೋಡು ನಟರಾಜು (ವಿಜಯ ಕರ್ನಾಟಕ, ಹುಣಸೂರು), ವರ್ಷದ ಛಾಯಾಗ್ರಾಹಕ ಪ್ರಶಸ್ತಿಗೆ ಉದಯಶಂಕರ್ (ದಿ ನ್ಯೂ ಇಂಡಿಯನ್ ಎಕ್ಸ್‍ಪ್ರೆಸ್), ವರ್ಷದ ಹಿರಿಯ ಗ್ರಾಮಾಂತರ ಛಾಯಾಗ್ರಾಹಕ ಪ್ರಶಸ್ತಿಗೆ ಕನ್ನಡ ಪ್ರಮೋದ್ (ಹವ್ಯಾಸಿ ಛಾಯಾಗ್ರಾಹಕ, ಹೆಚ್.ಡಿ. ಕೋಟೆ), ವರ್ಷದ ಹಿರಿಯ ವರದಿಗಾರ (ದೃಶ್ಯ ಮಾಧ್ಯಮ) ಪ್ರಶಸ್ತಿಗೆ ರಂಗಸ್ವಾಮಿ (ಹಿರಿಯ ವರದಿಗಾರ, ಸಿರಿ ವಾಹಿನಿ), ವರ್ಷದ ಹಿರಿಯ ಕ್ಯಾಮರಾಮನ್ (ದೃಶ್ಯ ಮಾಧ್ಯಮ) ಪ್ರಶಸ್ತಿಗೆ ನಿತಿನ್‍ರಾವ್ (ಪಬ್ಲಿಕ್ ಟಿವಿ) ಭಾಜನರಾದರು.

ಕನ್ನಡ ಪ್ರಭ ಮತ್ತು ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ರವಿ ಹೆಗಡೆ ಪ್ರಧಾನ ಭಾಷಣ ಮಾಡಿದರು. ರಾಜ್ಯ ಹೋಟೆಲ್ ಮಾಲೀಕರ ಸಂಘ ನಿಕಟಪೂರ್ವ ಅಧ್ಯಕ್ಷ ಎಂ.ರಾಜೇಂದ್ರ ಅತಿಥಿಯಾಗಿ ಪಾಲ್ಗೊಂಡಿದ್ದರು. ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಂಘದ ಉಪಾಧ್ಯಕ್ಷರಾದ ಎಂ.ಸುಬ್ರಹ್ಮಣ್ಯ (ನಗರ), ಮಂಜು ಕೋಟೆ (ಗ್ರಾಮಾಂತರ), ಪ್ರಧಾನ ಕಾರ್ಯದರ್ಶಿ ಕೆ.ಜೆ.ಲೋಕೇಶ್‍ಬಾಬು, ಕಾರ್ಯದರ್ಶಿಗಳಾದ ಬಿ.ರಾಘವೇಂದ್ರ (ನಗರ), ಧರ್ಮಾಪುರ ನಾರಾಯಣ (ಗ್ರಾಮಾಂತರ) ಮತ್ತಿತರರು ಹಾಜರಿದ್ದರು.

 

Translate »