ಹೆಚ್.ಡಿ.ಕೋಟೆ: ಪತ್ನಿ ಶ್ರೀಮತಿ ಅನಿತಾ ಅವರೊಂದಿಗೆ ಕಬಿನಿಗೆ ನಿಗಧಿತ ಸಮಯಕ್ಕಿಂತ ತಡವಾಗಿ ಬಂದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ತುಂತುರು ಮಳೆ ನಡುವೆ ತುಂಬಿದ ಕಪಿಲಾ ಜಲಾಶಯಕ್ಕೆ ಬಾಗಿನ ಅರ್ಪಿಸಿದರು.
ಸುಮಾರು ಎರಡೂವರೆ ಗಂಟೆ ತಡವಾಗಿ ಬಂದ ಮುಖ್ಯಮಂತ್ರಿಗಳು, ಬಾಗಿನ ಅರ್ಪಿಸಿದ ನಂತರ ಜಲಾಶಯದಲ್ಲಿ ಕೆಲಸ ಮಾಡುವ ನೌಕರರಿಗೆ ಸಮವಸ್ತ್ರಗಳನ್ನು ನೀಡಿದರು. ಪತ್ರಕರ್ತರು ಮಾತನಾಡಿಸಲು ಮುಂದಾದಾಗ ಕೈಸನ್ನೆಯಲ್ಲಿ “ಏನೂ ಇಲ್ಲ” ಎಂದು ಹೇಳಿ ಸ್ವಲ್ಪ ಹೊತ್ತಿನಲ್ಲೇ ನಿರ್ಗಮಿಸಿದರು.
ಜಲಸಂಪನ್ಮೂಲ ಸಚಿವ ಡಿ.ಕೆ.ಶಿವ ಕುಮಾರ್, ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇ ಗೌಡ, ಪ್ರವಾಸೋದ್ಯಮ ಮತ್ತು ರೇಷ್ಮೆ ಖಾತೆ ಸಚಿವ ಸಾ.ರಾ.ಮಹೇಶ್, ಹಿಂದುಳಿದ ವರ್ಗಗಳ ಅಭಿವೃದ್ಧಿ ಸಚಿವ ಸಿ.ಪುಟ್ಟರಂಗ ಶೆಟ್ಟಿ, ಪ್ರಾಥಮಿಕ ಪ್ರೌಢ ಶಿಕ್ಷಣ ಸಚಿವ ಎನ್.ಮಹೇಶ್, ಹೆಚ್.ಡಿ.ಕೋಟೆ ಶಾಸಕ ಅನಿಲ್ ಚಿಕ್ಕಮಾದು, ನಂಜನಗೂಡು ಶಾಸಕ ಹರ್ಷವರ್ಧನ್, ಜಿ.ಪಂ.ಸದಸ್ಯರಾದ ವೆಂಕಟ ಸ್ವಾಮಿ, ಎಂ.ಪಿ.ನಾಗರಾಜು ಪರಿಮಳ ಶ್ಯಾಂ, ಮುಖಂಡ ಎಸ್.ವಿ.ವೆಂಕಟೇಶ್, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಜಲ ಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಕೇಶ್ ಸಿಂಗ್ ಹಾಗೂ ಕಾರ್ಯದರ್ಶಿ ಜಯಪ್ರಕಾಶ್, ಕಾವೇರಿ ನೀರಾವರಿ ನಿಗಮದ ಎಚ್.ಎಲ್. ಪ್ರಸನ್ನ, ಮೈಸೂರು ದಕ್ಷಿಣ ಮುಖ್ಯ ಇಂಜಿನಿಯರ್ ತ್ರಿಯಂಬಕ, ಕಬಿನಿ ಇಇ ಜಗದೀಶ್ ಇತರರು ಹಾಜರಿದ್ದರು. ಜಿಲ್ಲಾ ಎಸ್ಪಿ ಅಮಿತ್ ಸಿಂಗ್, ಹೆಚ್ಚುವರಿ ಎಸ್ಪಿ ಅಯ್ಯಪ್ಪ, ಡಿವೈಎಸ್‍ಪಿ ಅರುಣಾಂಶ ಗಿರಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋ ಬಸ್ತ್ ಮಾಡಲಾಗಿತ್ತು.
ಅಧಿಕಾರಿ ತಡೆ, ಮಾತಿನ ಚಕಮಕಿ: ಜಲಾಶಯದ ಬಾಗಿನ ಅರ್ಪಿಸುವ ಸ್ಥಳಕ್ಕೆ ಬಳಿ ಹೋಗುವ ವಿಚಾರದಲ್ಲಿ ಕೆಲ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಅವಕಾಶ ನೀಡದೇ ಪೊಲೀಸರು ಕಿರಿ-ಕಿರಿ ಉಂಟು ಮಾಡಿದರು. ಕಬಿನಿ ಜಲಾಶಯದ ಕಾರ್ಯಪಾಲಕ ಅಭಿಯಂತರ ಶೇಷಗಿರಿ ಅವರು, ಅರ್ಧಗಂಟೆ ಕಾಲ ಮಾತಿನ ಚಕಮಕಿ ನಡೆಸಿದರೂ ಬಿಡದಿದ್ದರಿಂದ ಬೇಸರಗೊಂಡು ಅವರು, ಕಾರ್ಯಕ್ರಮದಿಂದ ದೂರ ಉಳಿದರು.
ಪ್ರತ್ಯೇಕ ಬಾಗಿನ: ಜಿ.ಪಂ. ಅಧ್ಯಕ್ಷೆ ನಯಿಮಾ ಸುಲ್ತಾನ್, ತಾ.ಪಂ. ಅಧ್ಯಕ್ಷೆ ಮಂಜುಳಾ ದೇವಣ್ಣ ಹಾಗೂ ತಾ.ಪಂ. ಉಪಾಧ್ಯಕ್ಷೆ ಮಂಜುಳಾ ಚಂದ್ರೇಗೌಡ ಅವರನ್ನು ಪೊಲೀಸರು ತಡೆದಿದ್ದರಿಂದ ಆಕ್ರೋಶಗೊಂಡ ಅವರು ಮಾತಿನ ಚಕ ಮಕಿ ನಡೆಸಿದರು. ಮುಖ್ಯಮಂತ್ರಿಯವರು ಬಾಗಿನ ಅರ್ಪಿಸಿದ ನಂತರ, ಈ ಮೂವರು ಮಹಿಳಾ ಜನಪ್ರತಿ ನಿಧಿಗಳು ಪ್ರತ್ಯೇಕವಾಗಿ ತೆರಳಿ ಬಾಗಿನ ಅರ್ಪಿಸಿದರು.
ಸ್ವಾಗತ: ಇದಕ್ಕೂ ಮುನ್ನ ಹೆಲಿಕಾಪ್ಟರ್ ನಲ್ಲಿ ಆಗಮಿಸಿದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಮಾಜಿ ಶಾಸಕ ಚಿಕ್ಕಣ್ಣ ನೇತೃತ್ವದಲ್ಲಿ ಜೆಡಿಎಸ್ ಕಾರ್ಯಕರ್ತರು ಸ್ವಾಗತಿಸಿದರು.
ಸೆಲ್ಫಿ ಕಿರಿಕಿರಿ: ಜಲ ಸಂಪನ್ಮೂಲ ಸಚಿವ ಡಿಕೆಶಿಯಿಂದ ಯುವಕನಿಗೆ ಕಪಾಳ ಮೋಕ್ಷ !
ಬಾಗಿನ ಅರ್ಪಿಸಲು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಇಂದು ಕಬಿನಿ ಜಲಾಶಯಕ್ಕೆ ಬಂದಿದ್ದ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್, ಅವರಿಂದ ಯುವಕನೊಬ್ಬ ಕಪಾಳ ಮೋಕ್ಷಕ್ಕೊಳಗಾಗ ಬೇಕಾಯಿತು. ಬಾಗಿನ ಅರ್ಪಿಸುವ ಸ್ಥಳದಲ್ಲಿ ಯುವಕನೊಬ್ಬ ಸಚಿವ ಶಿವಕುಮಾರ್ ರವರ ಹೆಗಲ ಮೇಲೆ ಕೈ ಇಟ್ಟು ಸೆಲ್ಫಿ ತೆಗೆದುಕೊಳ್ಳಲು ಮುಂದಾದ.
ಇದರಿಂದ ಸಿಡಿಮಿಡಿಗೊಂಡ ಸಚಿವರು, ಆ ಯುವಕನ ಕಪಾಳಕ್ಕೆ ಒಂದು ಬಿಗಿದರು. ಆಗ ಅಲ್ಲಿ ಕ್ಷಣ ಕಾಲ ಗಡಿಬಿಡಿ ವಾತಾ ವರಣ ಉಂಟಾಗಿ, ತತ್‍ಕ್ಷಣವೇ ಪೊಲೀಸರು, ಯುವಕನನ್ನು ಎಳೆದೊಯ್ದರು.
ಕಬಿನಿ ಅಣೆಕಟ್ಟೆ ಮುಂಭಾಗ 22 ಕೋಟಿ ರೂ. ವೆಚ್ಚದ ಹೊಸ ಸೇತುವೆ
ಕಬಿನಿ ಜಲಾಶಯದ ಅಣೆಕಟ್ಟು ಮುಂಭಾಗದಲ್ಲಿರುವ ಬೀಚನಹಳ್ಳಿ-ಬಿದರಹಳ್ಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಇರುವ ಸ್ಥಳದಲ್ಲಿ ಹೊಸ ಸೇತುವೆ ನಿರ್ಮಾಣಕ್ಕೆ ಸರ್ಕಾರ 22 ಕೋಟಿ ರೂ. ಮಂಜೂರು ಮಾಡಿದೆ ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದ್ದಾರೆ.
ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಕಬಿನಿ ಜಲಾಶಯಕ್ಕೆ ಬಾಗಿನ ಅರ್ಪಿಸಲು ಸಂದರ್ಭದಲ್ಲಿ ಜೊತೆಯಲ್ಲಿದ್ದ ಶಾಸಕರು ಸುದ್ದಿಗಾರರೊಂದಿಗೆ ಮಾತ ನಾಡಿ, ಜಲಾಶಯ ಭರ್ತಿಯಾಗಿ ಹೆಚ್ಚು ನೀರು ಬಿಟ್ಟಾಗ ಸೇತುವೆ ಮುಳುಗಡೆಯಾಗಿ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದ್ದ ಹಿನ್ನೆಲೆಯಲ್ಲಿ ಹೊಸ ಸೇತುವೆ ನಿರ್ಮಾಣಕ್ಕೆ ಕ್ರಮಗೊಳ್ಳಲಾಗಿದೆ. ಟೆಂಡರ್ ಪ್ರಕ್ರಿಯೆ ಮುಗಿದ ನಂತರ ಕಾಮಗಾರಿ ಪ್ರಾರಂಭ ವಾಗಲಿದೆ ಎಂದು ಹೇಳಿದರು.