ಇಬ್ಬರು ಖದೀಮರ ಸೆರೆ: 12.80 ಲಕ್ಷ ಮೌಲ್ಯದ ಚಿನ್ನಾಭರಣ ವಶ
ಮೈಸೂರು

ಇಬ್ಬರು ಖದೀಮರ ಸೆರೆ: 12.80 ಲಕ್ಷ ಮೌಲ್ಯದ ಚಿನ್ನಾಭರಣ ವಶ

June 17, 2018

ಮೈಸೂರು: ಮೈಸೂರು ನಗರದಲ್ಲಿ ನಡೆದಿದ್ದ 9 ಮನೆ ಕಳ್ಳತನ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಸಿಸಿಬಿ ಪೊಲೀಸರು, 12,80,000 ರೂ. ಮೌಲ್ಯದ 427 ಗ್ರಾಂ ಚಿನ್ನದ ಆಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಮಂಡ್ಯ ಜಿಲ್ಲೆ, ಚಿಕ್ಕೇಗೌಡನದೊಡ್ಡಿ ಗ್ರಾಮದ ಸೈಯ್ಯದ್ ಅಹಮದ್ ಮಗ ಸೈಯ್ಯದ್ ಇಮ್ರಾನ್(24) ಹಾಗೂ ರಾಮನಗರ ಜಿಲ್ಲೆ, ಚನ್ನಪಟ್ಟಣದ ನವಾಜ್ ಮಗ ಸೈಯ್ಯದ್ ಖಾಲೀದ್(30) ಬಂಧಿತ ಆರೋಪಿಗಳು. ಜೂನ್ 14 ರಂದು ಮೈಸೂರಿನ ಅಶೋಕ ರಸ್ತೆಯ ಆಭರಣ ಅಂಗಡಿಗಳಲ್ಲಿ ಕಳವು ಮಾಲನ್ನು ಮಾರಾಟ ಮಾಡಲು ಹೊಂಚು ಹಾಕುತ್ತಿದ್ದಾಗ ಸುಳಿವಿನ ಜಾಡು ಹಿಡಿದ ಸಿಸಿಬಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು.

ಅವರನ್ನು ವಿಚಾರಣೆಗೊಳಪಡಿಸಿದಾಗ ಹುಬ್ಬಳ್ಳಿಯಲ್ಲಿ ಕಳವು ಮಾಡಿದ್ದಲ್ಲದೆ, ಮೈಸೂರಿನ ಕುವೆಂಪುನಗರ ಠಾಣಾ ವ್ಯಾಪ್ತಿಯಲ್ಲಿ 3, ಅಶೋಕಪುರಂ, ವಿದ್ಯಾರಣ್ಯಪುರಂ, ಉದಯಗಿರಿ, ವಿಜಯನಗರ ಹಾಗೂ ಹುಬ್ಬಳ್ಳಿಯ ಘಂಟಕೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಲಾ ಒಂದೊಂದು ಮನೆ ಕಳ್ಳತನ ನಡೆಸಿರುವುದಾಗಿ ಆರೋಪಿಗಳು ಒಪ್ಪಿಕೊಂಡರು.

ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು. ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಮಹಾನಂದ ಬಿ. ನಂದಗಾವಿ ಅವರ ಮಾರ್ಗದರ್ಶನ ಹಾಗೂ ಸಿಸಿಬಿ ಎಸಿಪಿ ಬಿ.ಆರ್. ಲಿಂಗಪ್ಪ ನೇತೃತ್ವದಲ್ಲಿ ನಡೆದ ಪತ್ತೆ ಕಾರ್ಯಾಚರಣೆಯಲ್ಲಿ ಸಿಸಿಬಿ ಇನ್ಸ್‍ಪೆಕ್ಟರ್ ಶಿವಸ್ವಾಮಿ, ಎಎಸ್‍ಐ ಚಂದ್ರೇಗೌಡ, ಸಿಬ್ಬಂದಿಗಳಾದ ಎಂ.ಆರ್. ಗಣೇಶ, ಚಿಕ್ಕಣ್ಣ, ಲಕ್ಷ್ಮೀಕಾಂತ, ರಾಮಸ್ವಾಮಿ, ಶಿವರಾಜು, ಯಾಕುಬ್ ಷರೀಫ್, ಅಸ್ಗರ್‍ಖಾನ್, ರಾಜೇಂದ್ರ, ನಿರಂಜನ, ಪ್ರಕಾಶ, ಆನಂದ್, ಚಾಮುಂಡಮ್ಮ ಹಾಗೂ ಗೌತಮ್ಮ ಅವರು ಪಾಲ್ಗೊಂಡಿದ್ದರು.

Translate »