ಶಾಲಾ ಮಕ್ಕಳಲ್ಲಿ ಬಲಿಷ್ಠ, ಹಸಿರು ಭಾರತ ನಿರ್ಮಾಣದ ಸಂಕಲ್ಪಕ್ಕೆ ಶಾಸಕ ರಾಮದಾಸ್ ಮುನ್ನುಡಿ
ಮೈಸೂರು

ಶಾಲಾ ಮಕ್ಕಳಲ್ಲಿ ಬಲಿಷ್ಠ, ಹಸಿರು ಭಾರತ ನಿರ್ಮಾಣದ ಸಂಕಲ್ಪಕ್ಕೆ ಶಾಸಕ ರಾಮದಾಸ್ ಮುನ್ನುಡಿ

July 1, 2018

ಮೈಸೂರು: ಬಲಿಷ್ಠ ಭಾರತ ಹಾಗೂ ಹಸಿರು ಭಾರತ ನಿರ್ಮಾಣ ಮಾಡುವ ಸಂಕಲ್ಪದೊಂದಿಗೆ ಶಾಲಾ ವಿದ್ಯಾರ್ಥಿಗಳಲ್ಲಿ ಪರಿಸರ ಪ್ರಜ್ಞೆ ಹಾಗೂ ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದಕ್ಕಾಗಿ ಪ್ರೇರಣೆ ನೀಡುವ ಕಾರ್ಯಕ್ರಮವನ್ನು ಮೈಸೂರಿನ ಕೆ.ಆರ್.ಕ್ಷೇತ್ರದಲ್ಲಿ ಕನಕಗಿರಿ ಶಾಲೆಯಲ್ಲಿ ಶಾಸಕ ಎಸ್.ಎ.ರಾಮದಾಸ್ ಚಾಲನೆ ನೀಡಿದರು.

ಸರ್ಕಾರಿ ಹಾಗೂ ಖಾಸಗಿ ಶಾಲೆಗಳ 5ರಿಂದ 10ನೇ ತರಗತಿ ವಿದ್ಯಾರ್ಥಿಗಳನ್ನು ಶಿಕ್ಷಣದೊಂದಿಗೆ ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಸಿ ಬಲಿಷ್ಠ ಹಾಗೂ ಹಸಿರು ಭಾರತ ನಿರ್ಮಾಣ ಮುನ್ನುಡಿ ಬರೆಯುವ ಕಾರ್ಯಕ್ರಮದಲ್ಲಿ ಕನಕಗಿರಿಯ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಕಾರ್ಯಕ್ರಮವನ್ನು ಶಾಸಕ ಎಸ್.ಎ.ರಾಮದಾಸ್ ಉದ್ಘಾಟಿಸಿದರಲ್ಲದೆ, 10 ಮಂದಿ ವಿದ್ಯಾರ್ಥಿಗಳಿಗೆ ಔಷಧೀಯ ಗಿಡ ವಿತರಿಸಿ ಅವರೊಂದಿಗೆ ಸಂವಾದ ನಡೆಸಿದರು.

ಕನಕಗಿರಿ ಸರ್ಕಾರಿ ಶಾಲೆಯಲ್ಲಿ ಸಮರ್ಥ, ಹಸಿರು ಭಾರತದ ಭಾರತದ ಕಲ್ಪನೆಯನ್ನು ಇಟ್ಟುಕೊಂಡು ಕೆ.ಆರ್.ಕ್ಷೇತ್ರದಾದ್ಯಂತ ವಿನೂತನ ಕಾರ್ಯಕ್ರಮ ಜಾರಿಗೊಳಿಸಲಾಗಿದೆ. ಪ್ರತಿ ಶನಿವಾರ ಸರ್ಕಾರಿ, ಖಾಸಗಿ ಶಾಲೆಗಳಲ್ಲಿ 5 ರಿಂದ 7ನೇ ತರಗತಿ ಹಾಗೂ 8ರಿಂದ 10ನೇ ತರಗತಿಯ ವಿದ್ಯಾರ್ಥಿಗಳಲ್ಲಿ ಓದುವ ಶ್ರದ್ಧೆ ಹೆಚ್ಚಿಸುವುದರೊಂದಿಗೆ ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಬೆಳೆದರೆ ಬಲಿಷ್ಠ ಭಾರತ ನಿರ್ಮಾಣಕ್ಕೆ ಸಾಧ್ಯವಾಗುತ್ತದೆ. ಭವಿಷ್ಯದ ದೃಷ್ಟಿಯಿಂದ ಮಕ್ಕಳಲ್ಲಿ ಚೈತನ್ಯ, ಸ್ಫೂರ್ತಿ ತುಂಬುವ ಕೆಲಸ ಮಾಡಬೇಕಾಗಿದೆ. ಅಲ್ಲದೆ ನೈತಿಕ ಶಿಕ್ಷಣ ಕೊಡಿಸುವ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.

ಬಲಿಷ್ಠ ಹಾಗೂ ಹಸಿರು ಭಾರತ ಯೋಜನೆಯಡಿ ಪ್ರತಿ ಶನಿವಾರ ವಿಶೇಷ ಕಾರ್ಯಕ್ರಮ ಏರ್ಪಡಿಸಿ, ವರ್ಷದ ಎಲ್ಲಾ ಶನಿವಾರವೂ ಪೂರ್ಣ ಪ್ರಮಾಣದಲ್ಲಿ ಇದರಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳನ್ನು ಬಲಿಷ್ಠ ವಿದ್ಯಾರ್ಥಿ ಎಂದು ಘೋಷಿಸಿ ಬಹುಮಾನ ನೀಡಲಾಗುತ್ತದೆ. ಅಲ್ಲದೆ ಪ್ರತಿವಾರ ವಿವಿಧ ಪರೀಕ್ಷೆ ನಡೆಸಿ, ವಿಜೇತರಿಗೆ ಬಹುಮಾನ ವಿತರಿಸಲಾಗುತ್ತದೆ. ವರ್ಷದಿಂದ ವರ್ಷಕ್ಕೆ ಎಸ್‍ಎಸ್‍ಎಲ್‍ಸಿ ಫಲಿತಾಂಶ ಕುಸಿಯುತ್ತಿದೆ. ಹೆಚ್ಚು ಅವಧಿಯಲ್ಲಿ ಬೋಧಿಸುವ ಮೂಲಕ ಫಲಿತಾಂಶ ಸುಧಾರಿಸಲು ಕ್ರಮ ಕೈಗೊಳ್ಳುವ ಅವಶ್ಯಕತೆಯಿದೆ. ಕಳೆದ ಸಾಲಿನಲ್ಲಿ ಕನಕಗಿರಿ ಶಾಲೆಯಲ್ಲಿ ಎಸ್‍ಎಸ್‍ಎಲ್‍ಸಿಯಲ್ಲಿ 20 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದರೆ, 15 ಮಕ್ಕಳು ಫೇಲ್ ಆಗಿದ್ದಾರೆ. ಫೇಲಾದ ವಿದ್ಯಾರ್ಥಿಗಳಿಗೆ ಅಗತ್ಯ ಮಾರ್ಗದರ್ಶನ ಹಾಗೂ ಅಭ್ಯಾಸ ಮಾಡಿಸುವುದಕ್ಕೆ ಸಾಧ್ಯವಾಗದೆ ಇದ್ದರೆ, ಅಂತಹ ಮಕ್ಕಳು ಸಮಾಜಕ್ಕೆ ಮಾರಕವಾಗುವ ಸಂಭವವಿದೆ ಎಂದು ವಿಷಾಧಿಸಿದರು.

ಪ್ರತಿ ಶನಿವಾರ ಕ್ಷೇತ್ರದಲ್ಲಿರುವ ಶಾಲೆಗಳ ವಿದ್ಯಾರ್ಥಿಗಳ ಬುದ್ಧಿಮತ್ತೆ ಹಾಗೂ ಕಲಿಕಾ ಸಾಮಥ್ರ್ಯ ಹೆಚ್ಚಿಸುವುದಕ್ಕೆ ವಿವಿಧ ಕಾರ್ಯಕ್ರಮ ರೂಪಿಸಲಾಗುತ್ತದೆ. ಅಲ್ಲದೆ ಕಾನೂನಿನ ಬಗ್ಗೆ ಅರಿವು ಮೂಡಿಸುವ, ಪೊಲೀಸ್ ಠಾಣೆಗಳ ಕಾರ್ಯವೈಖರಿ, ಕಾನೂನು ಸುವ್ಯವಸ್ಥೆ ಕಾಪಾಡುವ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಆರೋಗ್ಯ ಕಾಪಾಡಿಕೊಳ್ಳುವುದಕ್ಕೆ, ಆಹಾರ ಪದ್ದತಿ, ಆತ್ಮಸ್ಥೈರ್ಯ ಬೆಳೆಸುವುದಕ್ಕೆ ಹಾಗೂ ಕೌಶಲ್ಯಾಭಿವೃದ್ಧಿಗೆ ಪರಿಣಿತರಿಂದ ಬೋಧಿಸಲಾಗುತ್ತದೆ. ವರ್ಷದೊಳಗೆ ವಿದ್ಯಾರ್ಥಿಗಳ ಕಲಿಕ ಸಾಮಥ್ರ್ಯ ವೃದ್ಧಿಸುವುದಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.

ವಿದ್ಯಾರ್ಥಿಗಳು ಆರೋಗ್ಯದಿಂದ ಇರಬೇಕಾದರೆ ಶಾಲೆಯ ಆವರಣದಲ್ಲಿ ಆಯುರ್ವೇಧ ಗಿಡ ನೆಡುವ ಅಗತ್ಯವಿದೆ. ಇದಕ್ಕಾಗಿ ಎಲ್ಲಾ ಶಾಲೆಗಳಲ್ಲಿಯೂ ಔಷಧೀಯ ಫಲ ಪುಷ್ಪದ ಗಿಡ ಬೆಳೆಸಲಾಗುತ್ತದೆ. ಮನೆಗಳಲ್ಲಿ ಔಷಧೀಯ ಗಿಡ ಬೆಳೆಸುವುದಕ್ಕೆ ಇಚ್ಛಿಸುವ ವಿದ್ಯಾರ್ಥಿಗಳ ಪೋಷಕರಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿ ಎರಡು ಗಿಡಗಳನ್ನು ನೀಡಲಾಗುತ್ತದೆ. ಇಂದು ಸಾಂಕೇತಿಕವಾಗಿ 10 ವಿದ್ಯಾರ್ಥಿಗಳಿಗೆ ಗಿಡ ನೀಡಲಾಗಿದೆ. ಮೂರು ತಿಂಗಳಿಗೊಮ್ಮೆ ಗಿಡದ ಬೆಳವಣಿಗೆಯ ಮಾಹಿತಿಯನ್ನು ವಾಟ್ಸಾಪ್‍ನಲ್ಲಿ ನೀಡುವಂತೆ ಸೂಚನೆ ನೀಡಲಾಗಿದೆ. ಗ್ರೀನ್ ಇಂಡಿಯಾ ಮೂಲಕ ಸಸ್ಯ ಬೆಳೆಸುವ ಗುಣ ಮೂಡಿಸಲಾಗಿತ್ತದೆ ಎಂದು ಹೇಳಿದರು.

ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳ ಕಲಿಕಾ ಸಾಮಥ್ರ್ಯಕ್ಕೆ ಉತ್ತೇಜನ ನೀಡುವುದಕ್ಕೆ ಅರ್ಧ ವರ್ಷದ ಸಾಧನೆ ಅವಲೋಕಿಸಲಾಗುತ್ತದೆ. ದಸರೆಯ ಒಳಗೆ ವಿದ್ಯಾರ್ಥಿಗಳ ಕಲಿಕೆಯ ಪ್ರಮಾಣ ಪರಿಶೀಲಿಸಲಾಗುತ್ತದೆ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಹೆಚ್ಚುವರಿ ಅವಧಿಯಲ್ಲಿ ಕಲಿಸುವುದರೊಂದಿಗೆ ಪಹಾರದ ವ್ಯವಸ್ಥೆ ಮಾಡಿ ಮನೆ ಪಾಠದ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಅಲ್ಲದೆ ಮನೆಯಲ್ಲಿ ತಂದೆ-ತಾಯಿ, ಹಿರಿಯರನ್ನು ಗೌರವಿಸುವ ಕೌಟುಂಬಿಕ ವ್ಯವಸ್ಥೆಯಲ್ಲಿ ಬೆಳೆಸುವುದು. ಶಾಲೆಯಲ್ಲಿ ಆಟಪಾಠದೊಂದಿಗೆ ಲವಲವಿಕೆಯಿಂದ ಇರುವುದಕ್ಕೆ ಕಾರ್ಯಕ್ರಮ ರೂಪಿಸುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಜಿಎಸ್‍ಎಸ್ ಪೌಂಡೇಶನ್‍ನ ಸಂಸ್ಥಾಪಕ ಶ್ರೀಹರಿ, ಮೈಸೂರು ಟ್ರಾವೆಲ್ಸ್ ಅಸೋಸಿಯೇಷನ್ ಅಧ್ಯಕ್ಷ ಬಿ.ಎಸ್. ಪ್ರಶಾಂತ್, ಆರ್ಯುವೇದ ಕಾಲೇಜಿನ ಪ್ರಾಂಶುಪಾಲ ಗಜಾನನ ಹೆಗ್ಡೆ, ಬಿಇಒ ಶಿವಕುಮಾರ್, ಬಿಆರ್‍ಸಿ ನಾಗೇಶ್, ಮುಖ್ಯೋಪಾಧ್ಯರಾದ ಮಲ್ಲಿಕಾರ್ಜುನ್, ಎಸ್‍ಡಿಎಂಸಿ ಅಧ್ಯಕ್ಷ ನಾರಾಯಣ್ ಹಾಗೂ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳ ಪೋಷಕರು ಪಾಲ್ಗೊಂಡಿದ್ದರು.

Translate »