ಕೈ ಕೊಟ್ಟಿದ್ದ ಸರ್ವರ್ ಸರಿಯಾಯ್ತು: ಅರ್ಜಿ ವಿಲೇವಾರಿ ಆರಂಭವಾಯ್ತು
ಮೈಸೂರು

ಕೈ ಕೊಟ್ಟಿದ್ದ ಸರ್ವರ್ ಸರಿಯಾಯ್ತು: ಅರ್ಜಿ ವಿಲೇವಾರಿ ಆರಂಭವಾಯ್ತು

June 30, 2018
  • ‘ಮೈಸೂರು ಮಿತ್ರ’ ವರದಿ ಫಲಶೃತಿ

ಮೈಸೂರು: ಮೈಸೂರಿನ ಮಿನಿ ವಿಧಾನಸೌಧದಲ್ಲಿರುವ ನಾಡಕಚೇರಿಯಲ್ಲಿ ಕಳೆದ 20 ದಿನಗಳಿಂದ ಕೈಕೊಟ್ಟಿದ್ದ ಸರ್ವರ್ ಸರಿಯಾಯ್ತು. ಸೇವೆ ಆರಂಭವಾಯ್ತು. ಜೂ.28ರ `ಮೈಸೂರು ಮಿತ್ರ’ ‘ಸರ್ವರ್ ವೈಫಲ್ಯ: ವಿವಿಧ ಫಲಾನುಭವಿಗಳ ಪರದಾಟ’ ವರದಿ ಮಾಡಿತ್ತು. ಕೊನೆಗೂ ಎಚ್ಚೆತ್ತ ಅಧಿಕಾರಿಗಳು, ಶುಕ್ರವಾರ ಸರ್ವರ್ ಸರಿಪಡಿಸಿ ಸ್ಥಗಿತಗೊಂಡಿದ್ದ ಸೇವೆ ಪುನರಾರಂಭಿಸಿದ್ದಾರೆ.

ಮಿನಿ ವಿಧಾನಸೌಧದ ಕಚೇರಿಯಲ್ಲಿರುವ ನಾಡಕಚೇರಿ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿರುವ ನಾಡಕಚೇರಿಯಲ್ಲಿ ಜೂ.8ರಿಂದ ಸರ್ವರ್ ಕೈಕೊಟ್ಟಿತ್ತು. ಇದರಿಂದ ವಂಶವೃಕ್ಷ, ಗೇಣಿ ಪತ್ರ, ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ಮರಣ ದೃಡೀಕರಣ ಪತ್ರ ಸೇರಿದಂತೆ ಒಟ್ಟು 38 ಬಗೆಯ ಸೇವೆಗಳು ಸ್ಥಗಿತಗೊಂಡಿದ್ದವು. ಜೂ.8ರಿಂದ ಜೂ.27ರವರೆಗೆ ವಿವಿಧ ಪ್ರಮಾಣ ಪತ್ರಕ್ಕಾಗಿ ಸುಮಾರು 2300 ಮಂದಿ ಅರ್ಜಿ ಸಲ್ಲಿಸಿದ್ದರು. ಸರ್ವರ್ ತೊಂದರೆಯಿಂದಾಗಿ ಉಪತಹಶೀಲ್ದಾರ್ ಲಾಗಿನ್‍ನಲ್ಲಿ ಸಂಗ್ರಹವಾಗಿದ್ದ ಅರ್ಜಿಗಳು ವಿಲೇವಾರಿಯಾಗಿರಲಿಲ್ಲ. ಈ ಸಂಬಂಧ ಜೂ.28ರ `ಮೈಸೂರು ಮಿತ್ರ’ನಲ್ಲಿ ವರದಿ ಪ್ರಕಟವಾಗಿತ್ತು.

ಈ ವರದಿಯನ್ನು ಗಂಭೀರವಾಗಿ ಪರಿಗಣಿಸಿದ ಅಧಿಕಾರಿಗಳು ಶುಕ್ರವಾರ ಬೆಳಗಿನಿಂದಲೇ ತಂತ್ರಜ್ಞರನ್ನು ಕರೆಸಿ, ಕೆಟ್ಟಿದ್ದ ಸರ್ವರ್ ಅನ್ನು ದುರಸ್ತಿ ಮಾಡಿಸುವುದಕ್ಕೆ ಮುಂದಾದರು. ಮಧ್ಯಾಹ್ನದ ವೇಳೆಗೆ ಅರ್ಜಿಗಳು ವಿಲೇವಾರಿ ಮಾಡುವ ಕಾರ್ಯ ಆರಂಭಿಸಲಾಯಿತು. ಇದರಿಂದ ಕಳೆದ 21 ದಿನಗಳಿಂದ ವಿವಿಧ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಿ ಕಾಯುತ್ತಿದ್ದ ರೈತರು ನಿಟ್ಟುಸಿರು ಬಿಟ್ಟರು.

Translate »