ಸಭೆಯಲ್ಲಿ ಚೆಲುವಾಂಬ ಆಸ್ಪತ್ರೆ ಬೆಡ್ ಕೊರತೆ ಪ್ರಸ್ತಾಪ – ಪ್ರಸ್ತಾವನೆ ಸಲ್ಲಿಸಿದರೆ ಸಮಸ್ಯೆಗೆ ಶೀಘ್ರ ಪರಿಹಾರ: ಸಂಸದ
ಮೈಸೂರು

ಸಭೆಯಲ್ಲಿ ಚೆಲುವಾಂಬ ಆಸ್ಪತ್ರೆ ಬೆಡ್ ಕೊರತೆ ಪ್ರಸ್ತಾಪ – ಪ್ರಸ್ತಾವನೆ ಸಲ್ಲಿಸಿದರೆ ಸಮಸ್ಯೆಗೆ ಶೀಘ್ರ ಪರಿಹಾರ: ಸಂಸದ

June 30, 2018

ಮೈಸೂರು: ಮೈಸೂರಿನ ಪ್ರತಿಷ್ಠಿತ ಚೆಲುವಾಂಬ ಆಸ್ಪತ್ರೆಯಲ್ಲಿ ಗರ್ಭಿಣಿಯರು, ಬಾಣಂತಿಯರಿಗೆ ಬೆಡ್‍ಗಳ ಕೊರತೆ ಇರುವ ವಿಚಾರ ಶುಕ್ರವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಉಸ್ತುವಾರಿ ಸಮಿತಿ ಸಭೆಯಲ್ಲಿ ಪ್ರಸ್ತಾಪವಾಯಿತು.

ಗರ್ಭಿಣಿಯರು, ಮಕ್ಕಳು ಮತ್ತು ಬಾಣಂತಿಯರನ್ನು ನೆಲದ ಮೇಲೆ ಹಾಸಿಗೆ ಹಾಕಿ ಮಲಗಿಸಲಾಗುತ್ತಿರುವ ಬಗ್ಗೆ ಸಂಸದ ಆರ್.ಧ್ರುವನಾರಾಯಣ್ ಕೆ.ಆರ್.ಆಸ್ಪತ್ರೆ ಅಧೀಕ್ಷಕರನ್ನು ಪ್ರಶ್ನಿಸಿದರು. ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಿದರೆ ಈ ಸಮಸ್ಯೆಯನ್ನು ಆದಷ್ಟು ಶೀಘ್ರ ಪರಿಹರಿಸಲು ಸಾಧ್ಯವಾಗುತ್ತದೆ ಎಂದು ಅವರಿಗೆ ನಿರ್ದೇಶನ ನೀಡಿದರು.

ಅಲ್ಲದೆ ಕೆ.ಆರ್.ಆಸ್ಪತ್ರೆಯಲ್ಲಿ ಕಟ್ಟಡದ ಸಮಸ್ಯೆ ಇದ್ದರೆ ಅದನ್ನು ಸಿಎಸ್‍ಆರ್ ಅನುದಾನದಲ್ಲಿ ಮಾಡಲು ಅವಕಾಶವಿದ್ದು, ಈ ಕುರಿತು ಯೋಜನೆಯೊಂದನ್ನು ತಯಾರಿಸಿ, ಪ್ರಸ್ತಾವನೆ ಸಲ್ಲಿಸುವಂತೆಯೂ ಸೂಚಿಸಿದರು. ಚೆಲುವಾಂಬ ಆಸ್ಪತ್ರೆಯಲ್ಲಿ ಬೆಡ್‍ಗಳ ಕೊರತೆ ಕುರಿತು `ಮೈಸೂರು ಮಿತ್ರ’ದಲ್ಲಿ ವರದಿಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

ಹೋಬಳಿ ಕೇಂದ್ರವಾದ ವರುಣಾದಲ್ಲಿ ತಾಲೂಕು ಆಸ್ಪತ್ರೆಯೊಂದನ್ನು ಆರಂಭಿಸುವ ಕುರಿತಂತೆ ಪ್ರಸ್ತಾವನೆ ಸಲ್ಲಿಸುವಂತೆ ಇದೇ ಸಂದರ್ಭದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಡಿಹೆಚ್‍ಓ ಡಾ.ಬಸವರಾಜು ಅವರಿಗೆ ಸಂಸದ ಧ್ರುವನಾರಾಯಣ್ ಸಲಹೆ ಮಾಡಿದರು.

108 ಆಂಬುಲೆನ್ಸ್ ರೋಗಿಗಳನ್ನು ಸರ್ಕಾರಿ ಆಸ್ಪತ್ರೆಗಳಿಗೆ ಕರೆದೊಯ್ಯದೇ ಖಾಸಗಿ ಆಸ್ಪತ್ರೆಗಳಿಗೆ ಕರೆದೊಯ್ಯಲಾಗುತ್ತಿರುವ ಬಗ್ಗೆ ಪ್ರಸ್ತಾಪಸಿದ ಸಂಸದರು, ಅಂತಹ ವೈದ್ಯರು ಮತ್ತು ಚಾಲಕರ ವಿರುದ್ಧ ಕ್ರಮ ಕೈಗೊಳ್ಳುವ ಜೊತೆಗೆ ಈ ಬಗ್ಗೆ ಚಾಲಕರಿಗೆ ಸ್ಪಷ್ಪ ಆದೇಶವನ್ನು ನೀಡಬೇಕು ಎಂದು ಡಿಹೆಚ್‍ಓಗೆ ತಾಕೀತು ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಹೆಚ್‍ಓ ಡಾ.ಬಸವರಾಜು, ಇಂತಹ ಪ್ರಕರಣಗಳಿಗೆ ಸಂಬಂಧಿಸಿದಂತೆ 108 ಆಂಬುಲೆನ್ಸ್‍ನ ಇಬ್ಬರು ಚಾಲಕರನ್ನು ಅಮಾನತು ಮಾಡಲಾಗಿದೆ. ಈ ಬಗ್ಗೆ ಸ್ಪಷ್ಟ ಸೂಚನೆಯನ್ನೂ ನೀಡಿರುವುದಾಗಿ ತಿಳಿಸಿದರು.

ಮೈಸೂರು ಜಿಲ್ಲೆಯಲ್ಲಿನ ತಾಲೂಕು ಆಸ್ಪತ್ರೆಗಳಲ್ಲಿ ವೈದ್ಯರು ಮತ್ತು ಸಿಬ್ಬಂದಿ, ಕಟ್ಟಡದ ಕೊರತೆ ಸೇರಿದಂತೆ ಸಾಕಷ್ಟು ದೂರುಗಳಿದ್ದು, ತಿಂಗಳಲ್ಲಿ 15 ದಿನ ಜಿಲ್ಲಾ ಪ್ರವಾಸ ಮಾಡಿ ತಾಲೂಕಿನ ಆಸ್ಪತ್ರೆಗಳಿಗೆ ಭೇಟಿ ನೀಡಿ. ಅಲ್ಲಿನ ಕಟ್ಟಡ, ವೈದ್ಯರ ಕೊರತೆ, ನೀರು, ಶೌಚಾಲಯ ಮತ್ತಿತರ ಸಮಸ್ಯೆಗಳ ಬಗ್ಗೆ ತಿಳಿಯುತ್ತದೆ. ಹಾಗಾದರೆ ಮಾತ್ರ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯ ಎಂದ ಅವರು, ಖಾಸಗಿ ಆಸ್ಪತ್ರೆಗಳ ರೀತಿ ಸೌಲಭ್ಯಗಳನ್ನು ನೀಡುವ ಪ್ರಯತ್ನ ಮಾಡಬೇಕು ಎಂದು ತಿಳಿಸಿದರು.

Translate »