ಶಾಸಕ ವಿಶ್ವನಾಥರ ಮೇಲೆ  ಮಹಿಳಾ ಜನಪ್ರತಿನಿಧಿಗಳ ಆರೋಪ
ಮೈಸೂರು

ಶಾಸಕ ವಿಶ್ವನಾಥರ ಮೇಲೆ  ಮಹಿಳಾ ಜನಪ್ರತಿನಿಧಿಗಳ ಆರೋಪ

June 30, 2018

ಮೈಸೂರು:  ಶಾಸಕ ಅಡಗೂರು ಹೆಚ್.ವಿಶ್ವನಾಥ್ ಅವರು ಇತ್ತೀಚೆಗೆ ನಡೆಸಿದ ಹುಣಸೂರು ತಾಲೂಕು ಕೆಡಿಪಿ ಸಭೆಯಲ್ಲಿ ಏರು ಧ್ವನಿಯಲ್ಲಿ ಗದರಿಸುವ ಮೂಲಕ ಅವಮಾನಿಸಿದ್ದಾರೆ ಎಂದು ತಾ.ಪಂ ಅಧ್ಯಕ್ಷೆ ಪದ್ಮಮ್ಮ ಆರೋಪಿಸಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಯಮಗಳನ್ನು ಗಾಳಿಗೆ ತೂರಿ ಬೇಕಾಬಿಟ್ಟಿಯಾಗಿ ಶಾಸಕ ಎ.ಹೆಚ್.ವಿಶ್ವನಾಥ್ ಅವರು ಸಭೆ ನಡೆಸಿದರು. ಕೆಡಿಪಿ ಸಭೆಯಲ್ಲಿ ಪಾಲ್ಗೊಂಡಿದ್ದ ಕೆಲವು ಮಹಿಳಾ ಸದಸ್ಯರ ಪತಿಯಂದಿರು ಸೋಮನಹಳ್ಳಿ ಕೆರೆಗೆ ನೀರು ತುಂಬಿಸಿರುವ ಸಂಬಂಧÉ ತಪ್ಪು ಮಾಹಿತಿ ನೀಡುತ್ತಿದ್ದರು. ಇದಕ್ಕೆ ಸರಿಯಾದ ಮಾಹಿತಿ ನೀಡಲು ಮುಂದಾದಾಗ ಶಾಸಕರು ಏರು ಧ್ವನಿಯಲ್ಲಿ ಸುಮ್ಮನೆ ಕುಳಿತುಕೊಳ್ಳಮ್ಮ, ನಿಮಗೆ ಮಾತಾಡಲು ಬರಲ್ಲ. ನಿಮ್ಮ ಗಂಡನಿಂದ ಮಾಹಿತಿ ಪಡೆಯುತ್ತೇನೆ ಎಂದು ಗದರುವ ಮೂಲಕ ಅಪಮಾನಿಸಿದ್ದಾರೆ ಎಂದು ದೂರಿದರು.

ಇದೇ ವೇಳೆ ಜಿ.ಪಂ ಸದಸ್ಯೆ ಜಯಲಕ್ಷ್ಮೀ ರಾಜಣ್ಣ ಮಾತನಾಡಿ, ಕೆಡಿಪಿ ಸಭೆಯಲ್ಲಿ ಗ್ರಾ.ಪಂ, ತಾ.ಪಂ ಮಹಿಳಾ ಸದಸ್ಯರಿಗೆ ಮಾತನಾಡಲು ಅವಕಾಶ ನೀಡದೆ ಸಭೆ ನಡೆಸಲಾಗಿದೆ. ಶಾಸಕರು ಸಭೆಗೆ ತಮ್ಮ ತಮ್ಮ ಪತಿಯೊಂದಿಗೆ ಬರುವಂತೆ ಮಹಿಳಾ ಸದಸ್ಯೆಯರಿಗೆ ಹೇಳುತ್ತಾರೆ. ಮಹಿಳಾ ಸದಸ್ಯರನ್ನು ಹತ್ತಿಕ್ಕುವ ಸಂಚು ನಡೆಯುತ್ತಿದೆ ಎಂಬ ಅನುಮಾನವಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಜಿಪಂ ಸದಸ್ಯರಾದ ಸಾವಿತ್ರಮ್ಮ, ಡಾ.ಪುಷ್ಪಾ ಅಮರನಾಥ್ ಇದ್ದರು.

Translate »