ಮೈಸೂರು: ಮೈಸೂರಿನ ಕೆಆರ್ ಆಸ್ಪತ್ರೆ ಪ್ರಭಾರ ವೈದ್ಯಕೀಯ ಅಧೀಕ್ಷಕರಾಗಿ ಚರ್ಮರೋಗ ವಿಭಾಗದ ಮುಖ್ಯಸ್ಥ ಡಾ.ಎಂ. ನಂಜುಂಡಸ್ವಾಮಿ ಅವರನ್ನು ಸರ್ಕಾರ ನಿಯೋಜಿಸಿದೆ.
ಆಸ್ಪತ್ರೆಯ ವೈದ್ಯಕೀಯ ಅಧೀ ಕ್ಷಕ ಡಾ.ಎಂ.ಶ್ರೀನಿವಾಸ್ ಅವರು ಶನಿವಾರ ಸೇವೆಯಿಂದ ನಿವೃತ್ತಿ ಹೊಂದಿರುವುದರಿಂದ ತೆರವಾದ ಸ್ಥಾನಕ್ಕೆ ಡಾ.ನಂಜುಂಡಸ್ವಾಮಿ ಅವರನ್ನು ಪ್ರಭಾರ ಹುದ್ದೆಗೆ ನಿಯೋ ಜನೆ ಮಾಡಿದ್ದು, ಅವರು ಇಂದು ಅಧಿಕಾರ ವಹಿಸಿಕೊಂಡರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ನಂಜುಂಡಸ್ವಾಮಿ ಅವರು, ಬಡವರು ಬರುವ ಕೆ.ಆರ್ ಆಸ್ಪತ್ರೆಯಲ್ಲಿ ಗುಣಮಟ್ಟದ ಚಿಕಿತ್ಸೆ, ಜೀವರಕ್ಷಕ ಔಷಧಗಳ ಪೂರೈಕೆ, ಸ್ವಚ್ಛತೆಗೆ ಪ್ರಾಧಾನ್ಯತೆ ನೀಡುವ ಮೂಲಕ ರೋಗಿಗಳಿಗೆ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲು ಪ್ರಯತ್ನಿಸುತ್ತೇನೆ ಎಂದರು. ಹೊರರೋಗಿ ವಿಭಾಗ, ಲ್ಯಾಬೊರೇಟರಿ, ಅಪಘಾತ ತುರ್ತು ಚಿಕಿತ್ಸಾ ವಿಭಾಗ, ರೇಡಿಯಾಲಜಿ ವಿಭಾಗಗಳನ್ನು ಸದೃಢಗೊಳಿಸುವುದಲ್ಲದೆ, ಒಳರೋಗಿ ವಿಭಾಗ ಹಾಗೂ ಶಸ್ತ್ರ ಚಿಕಿತ್ಸೆಗೆ ಬೇಕಾದ ಅಗತ್ಯ ಸವಲತ್ತು ನೀಡಲು ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಡೀನ್ ಅಂಡ್ ಡೈರಕ್ಟರ್ ಡಾ.ಸಿ.ಪಿ.ನಂಜರಾಜ್ ಅವರ ಸಲಹೆ ಯಂತೆ ಕೆಆರ್ ಆಸ್ಪತ್ರೆ ಸ್ಥಾನಿಕ ವೈದ್ಯಾಧಿಕಾರಿ ಡಾ.ರಾಜೇಶ್ ಹಾಗೂ ಎಲ್ಲಾ ವಿಭಾಗ ಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ನರ್ಸಿಂಗ್ ಸೂಪರಿಂಟೆಂಡೆಂಟ್‍ಗಳು ಹಾಗೂ ಎಲ್ಲಾ ಸಿಬ್ಬಂದಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಆರ್ ಆಸ್ಪತ್ರೆಯ ಸಮಗ್ರ ಅಭಿವೃದ್ಧಿ ಮತ್ತು ವೈದ್ಯಕೀಯ ಸೇವೆ ಉತ್ತಮಪಡಿಸಲು ಪ್ರಯತ್ನಿಸುತ್ತೇನೆ ಎಂದು ತಿಳಿಸಿದರು.