ಹೆಚ್ಚುತ್ತಿರುವ ವಾಹನ ಶಬ್ಧ ಮಾಲಿನ್ಯ, ಬೈಕ್ ಸವಾರರ ಅಡ್ಡ ದಾರಿ: ಆಸ್ಪತ್ರೆ ರೋಗಿಗಳಿಗೆ, ಸಾರ್ವಜನಿಕರಿಗೆ ಕಿರಿಕಿರಿ
ಮೈಸೂರು

ಹೆಚ್ಚುತ್ತಿರುವ ವಾಹನ ಶಬ್ಧ ಮಾಲಿನ್ಯ, ಬೈಕ್ ಸವಾರರ ಅಡ್ಡ ದಾರಿ: ಆಸ್ಪತ್ರೆ ರೋಗಿಗಳಿಗೆ, ಸಾರ್ವಜನಿಕರಿಗೆ ಕಿರಿಕಿರಿ

August 18, 2018

ಮೈಸೂರು:  ಮೈಸೂರಿನಲ್ಲಿ ಶಬ್ಧ ಮಾಲಿನ್ಯ ಹೆಚ್ಚುತ್ತಿದ್ದು, ಅದರಲ್ಲೂ ಆಸ್ಪತ್ರೆ, ಚಿಕಿತ್ಸಾಲಯಗಳ ಬಳಿಯೇ ಹೆಚ್ಚಾಗಿ ಶಬ್ಧ ಮಾಲಿನ್ಯ ಉಂಟಾಗುತ್ತಿದೆ. ವಾಹನಗಳ ಕರ್ಕಶ ಹಾರನ್‍ಗಳಿಂದ ಆಸ್ಪತ್ರೆ ರೋಗಿಗಳು ಹಾಗೂ ಸಾರ್ವಜನಿಕರಿಗೆ ಕಿರಿಕಿರಿಯಾಗುತ್ತಿರುವ ಬಗ್ಗೆ ದೂರುಗಳಿವೆ.

ಮೈಸೂರಿನ ಕೆ.ಆರ್.ಆಸ್ಪತ್ರೆ, ಚೆಲುವಾಂಬ ಆಸ್ಪತ್ರೆ, ಆಯುರ್ವೇದ ಆಸ್ಪತ್ರೆ ವೃತ್ತದಲ್ಲಿ ಶಬ್ಧ ಮಾಲಿನ್ಯ ಹೆಚ್ಚಾಗಿದೆ. ಒಂದೆಡೆ ಸಯ್ಯಾಜಿರಾವ್ ರಸ್ತೆ, ಧನ್ವಂತರಿ ರಸ್ತೆ, ಇರ್ವಿನ್ ರಸ್ತೆಗಳ ಮಧ್ಯೆ ಇರುವ ಕೆ.ಆರ್.ಆಸ್ಪತ್ರೆ, ಚೆಲುವಾಂಬ ಆಸ್ಪತ್ರೆಯ ರೋಗಿಗಳಿಗೆ ಮತ್ತು ಸಾರ್ವಜನಿಕರಿಗೆ ಶಬ್ಧ ಮಾಲಿನ್ಯದಿಂದ ಹೆಚ್ಚು ತೊಂದರೆಯಾಗುತ್ತಿದೆ.

ಆಯುರ್ವೇದ ವೃತ್ತದಲ್ಲಂತೂ ವಾಹನಗಳ ಕರ್ಕಶ ಹಾರನ್ ಶಬ್ಧದಿಂದ ಹಾಗೂ ಅಡ್ಡದಾರಿ ಹಿಡಿಯುವ ವಾಹನಗಳಿಂದ ಆಸ್ಪತ್ರೆಗೆ ಭೇಟಿ ನೀಡುವ ರೋಗಿಗಳು ಹಾಗೂ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ಆಯುರ್ವೇದ ವೃತ್ತದಲ್ಲಿ ಸಿಗ್ನಲ್ ಇಲ್ಲದಿರುವುದರಿಂದ ವೃತ್ತದ ನಾಲ್ಕು ದಿಕ್ಕಿನಿಂದ ಬರುವ ವಾಹನಗಳು ನಾ ಮೊದಲು, ತಾ ಮೊದಲು ಎಂದು ಅಡ್ಡಾ ದಿಡ್ಡಿ ನುಗ್ಗಲು ಯತ್ನಿಸುವುದರಿಂದ ವೃತ್ತದಲ್ಲಿ ಅನೇಕ ಬಾರಿ ಟ್ರಾಫಿಕ್ ಜಾಮ್ ಆಗುತ್ತಿರುತ್ತವೆ.

ಅದರಲ್ಲೂ ಆಯುರ್ವೇದ ವೃತ್ತದಿಂದ ದೇವರಾಜ ಮಾರುಕಟ್ಟೆ ಕಡೆಗೆ ಹಾಗೂ ಧನ್ವಂತರಿ ರಸ್ತೆ ಕಡೆಗೆ ಹೋಗಲು ಬೈಕ್ ಸವಾರರು ಮತ್ತು ಇನ್ನಿತರ ವಾಹನಗಳು ಅಡ್ಡದಾರಿ ಹಿಡಿದು ರಸ್ತೆಯ ಬಲಭಾಗದಲ್ಲಿಯೇ ವೇಗವಾಗಿ ತೆರಳಲು ಪ್ರಯತ್ನಿಸುತ್ತಾರೆ. ಇದರಿಂದ ಅಪಘಾತಕ್ಕೆ ಅವಕಾಶವಾಗುತ್ತಿದೆ. ಈ ಮದ್ಯೆ ಸಯ್ಯಾಜಿರಾವ್ ರಸ್ತೆಯ ರಸ್ತೆ ವಿಭಜಕವಾಗಿ ಹಾಕಲಾಗಿರುವ ಬ್ಯಾರಿಕೇಡ್‍ಗಳನ್ನು ಬೈಕ್ ಸವಾರರು ಪಕ್ಕಕ್ಕೆ ಸರಿಸಿ ಅಡ್ಡದಾರಿ ಹಿಡಿಯುವುದು ಸಾಮಾನ್ಯವಾಗಿದ್ದು, ಅಲ್ಲಿ ಆಗಾಗ್ಗೆ ಟ್ರಾಫಿಕ್ ಜಾಮ್ ಕೂಡ ಆಗುತ್ತಿದೆ. ಇವೆಲ್ಲವನ್ನೂ ಗಮನಿಸಿದ್ದರೂ ಪೊಲೀಸರು, ವಾಹನ ಸವಾರರ ಈ ಅಡ್ಡದಾರಿಗೆ ಕಡಿವಾಣ ಹಾಕಲು ಮುಂದಾಗುತ್ತಿಲ್ಲದಿರುವ ಬಗ್ಗೆ ಹಿರಿಯ ನಾಗರಿಕರೊಬ್ಬರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ನಿವೃತ್ತ ಅಂಚೆ ನೌಕರ ರಂಗಸ್ವಾಮಿ ಅವರ ಪ್ರಕಾರ, ಒಮ್ಮೆ ಅವರು ತಮ್ಮ ಸ್ಕೂಟರ್‍ನಲ್ಲಿ ತೆರಳುತ್ತಿದ್ದಾಗ, ಬೈಕ್ ಸವಾರನೊಬ್ಬ ಬ್ಯಾರಿಕೇಡ್ ಸರಿಸಿದ ಸಂದಿಯಿಂದ ತನ್ನ ವಾಹನ ಚಲಿಸಲು ಹೋಗಿ ನನಗೆ ಗುದ್ದಿ ಕಾಲಿಗೆ ಪೆಟ್ಟಾಯಿತು. ಇದಕ್ಕೆ ಈಗಲಾದರೂ ಪೊಲೀಸರು ಕಡಿವಾಣ ಹಾಕಬೇಕು ಎಂದು ಆಗ್ರಹಿಸುತ್ತಾರೆ.

ತಮ್ಮ ಸಂಬಂಧಿಯೊಬ್ಬರ ಹೆರಿಗೆಗೆಂದು ಕೆ.ಆರ್.ಆಸ್ಪತ್ರೆಗೆ ಆಗಮಿಸಿದ್ದ ನಂಜನಗೂಡಿನ ಪರಿಮಳಾ ಎಂಬ ಹಿರಿಯ ಮಹಿಳೆ ಆಯುರ್ವೇದ ಆಸ್ಪತ್ರೆ ವೃತ್ತದಲ್ಲಿ ರಸ್ತೆ ದಾಟಲು ಪರದಾಡಿ, ಬೈಕೊಂದು ಡಿಕ್ಕಿ ಹೊಡೆದು ಕಾಲಿಗೆ ಪೆಟ್ಟಾಗಿದ್ದ ಬಗ್ಗೆ `ಮೈಸೂರು ಮಿತ್ರ’ನಲ್ಲಿ ದೂರಿದರು.

ಇಂತಹ ಅನೇಕ ಸಣ್ಣಪುಟ್ಟ ಘಟನೆಗಳು ಪೊಲೀಸರ ಗಮನಕ್ಕೆ ಹೊಗದೇ ಆಗಾಗ್ಗೆ ನಡೆಯುತ್ತಲೇ ಇರುತ್ತವೆ. ಇದಕ್ಕೆ ಕಡಿವಾಣ ಹಾಕಲು ಪೊಲೀಸರು ಮುಂದಾಗಬೇಕು. ಸಯ್ಯಾಜಿರಾವ್ ರಸ್ತೆಯಲ್ಲಿ ಬ್ಯಾರಿಕೇಡ್ ಸರಿಸಿ ಅಡ್ಡದಾರಿ ಹಿಡಿಯುವ ಬೈಕ್ ಸವಾರರಿಗೆ ಕಡಿವಾಣ ಹಾಕಬೇಕು. ಆಯುರ್ವೇದ ವೃತ್ತದಲ್ಲಿ ಪದೇ ಪದೆ ಆಗುವ ಟ್ರಾಫಿಕ್ ಜಾಮ್ ತಪ್ಪಿಸಬೇಕು. ಇಲ್ಲಿ ವಾಹನಗಳ ಕರ್ಕಶ ಶಬ್ಧ ಮಾಲಿನ್ಯ ತಪ್ಪಿಸಿ ಆಸ್ಪತ್ರೆಯ ರೋಗಿಗಳು, ಸಾರ್ವಜನಿಕರಿಗೆ ಆಗುತ್ತಿರುವ ಕಿರಿಕಿರಿ ತಪ್ಪಿಸಬೇಕು. ಆಯುರ್ವೇದ ವೃತ್ತದಿಂದ ಸಯ್ಯಾಜಿರಾವ್ ರಸ್ತೆಯ ಎಡಭಾಗದಲ್ಲಿ ಅಡ್ಡ ದಾರಿ ಹಿಡಿಯುವ ವಾಹನಗಳಿಗೆ ದಂಡ ವಿಧಿಸುವಂತಾಗಬೇಕು ಎಂದು ಪಾದಚಾರಿಗಳು ಪೊಲೀಸರಲ್ಲಿ ಮನವಿ ಮಾಡಿದ್ದಾರೆ.

Translate »