ಬಲ್ಲಾಳ್ ಸರ್ಕಲ್ ಬಳಿ ಸೆಪ್ಟೆಂಬರ್ ಮೊದಲ ವಾರ ಫುಡ್ ಜೋನ್ ಆರಂಭ
ಮೈಸೂರು

ಬಲ್ಲಾಳ್ ಸರ್ಕಲ್ ಬಳಿ ಸೆಪ್ಟೆಂಬರ್ ಮೊದಲ ವಾರ ಫುಡ್ ಜೋನ್ ಆರಂಭ

August 18, 2018

ಮೈಸೂರು: ರಸ್ತೆ ಬದಿ ಆಹಾರ ಪದಾರ್ಥ ವ್ಯಾಪಾರಿಗಳಿಗಾಗಿ ಮೈಸೂರಿನ ಬಲ್ಲಾಳ್ ಸರ್ಕಲ್ ಬಳಿ ಪಾಲಿಕೆ ನಿರ್ಮಿಸಿರುವ ಫುಡ್ ಜೋನ್ ಸೆಪ್ಟೆಂಬರ್ ಮೊದಲ ವಾರ ಆರಂಭವಾಗಲಿದೆ ಎಂದು ಪಾಲಿಕೆ ಅಪರ ಆಯುಕ್ತ ರವೀಂದ್ರ ತಿಳಿಸಿದ್ದಾರೆ.

ಮೈಸೂರು ನಗರದಾದ್ಯಂತ ಬಹುತೇಕ ಎಲ್ಲಾ ರಸ್ತೆಗಳ ಫುಟ್‍ಪಾತ್‍ಗಳ ಮೇಲೆ ಪಾನಿಪೂರಿ, ಗೋಬಿ ಮಂಚೂರಿ, ಫಾಸ್ಟ್ ಫುಡ್ ಅಂಗಡಿಗಳನ್ನು ನಡೆಸುತ್ತಿದ್ದು, ತ್ಯಾಜ್ಯ ವಸ್ತುಗಳನ್ನು ಅಲ್ಲಿಯೇ ಬಿಟ್ಟು ಹೋಗುತ್ತಿರುವುದರಿಂದ ಸ್ವಚ್ಛ ನಗರಿಯಲ್ಲಿ ಅಶುಚಿತ್ವಗೊಳ್ಳುತ್ತಿದೆಯಲ್ಲದೇ, ಫುಟ್‍ಪಾತ್‍ಗೆ ಅಳವಡಿಸಿರುವ ಟೈಲ್ಸ್ ಮೇಲೆ ಎಣ್ಣೆ ಮತ್ತಿತರ ಪದಾರ್ಥಗಳು ಚೆಲ್ಲಿ ಹಾಳಾಗುತ್ತಿರುವುದು ಕಂಡು ಬಂದಿದೆ ಎಂದು ತಿಳಿಸಿದ್ದಾರೆ.

ಪಾದಚಾರಿಗಳು ಓಡಾಡಲು ಇರುವ ಫುಟ್‍ಪಾತ್ ಒತ್ತುವರಿ ಮಾಡಿ ಆಹಾರ ಪದಾರ್ಥ ಅಂಗಡಿಗಳನ್ನು ನಡೆಸುತ್ತಿರುವುದರಿಂದ ಸಾರ್ವಜನಿಕರು ರಸ್ತೆಯಲ್ಲಿ ಓಡಾಡುತ್ತಿದ್ದು, ಅಪಘಾತಗಳಿಗೆ ಕಾರಣವಾಗುತ್ತಿದೆ ಎಂದು ರವೀಂದ್ರ ತಿಳಿಸಿದರು.

ಫುಟ್‍ಪಾತ್ ತೆರವು ಕಾರ್ಯಾಚರಣೆ ಈಗಾಗಲೇ ಆರಂಭವಾಗಿದ್ದು, ಅಭಯ ಟೀಂ ಜೊತೆಗೆ ಆಯಾಯ ವಲಯ ಕಚೇರಿ ಅಧಿಕಾರಿಗಳು ಫುಟ್‍ಪಾತ್ ಮೇಲಿನ ಅಂಗಡಿ-ಮುಂಗಟ್ಟುಗಳನ್ನು ತೆರವುಗೊಳಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗುವುದು ಎಂದು ಅವರು ನುಡಿದರು.

ರಸ್ತೆ ಬದಿ ವ್ಯಾಪಾರಿಗಳಿಗಾಗಿಯೇ ಮೈಸೂರಿನ ಇನ್ನೂ 12 ಕಡೆ ಫುಡ್‍ಜೋನ್ ಮಾಡಲು ಸ್ಥಳ ಗುರ್ತಿಸಲಾಗಿದೆ. ಮುಂದಿನ ತಿಂಗಳು ಪಾಲಿಕೆಯ ಸ್ಟ್ರೀಟ್ ವೆಂಡಿಂಗ್ ಕಮಿಟಿ ಮುಂದಿಟ್ಟು ಅನುಮೋದನೆ ಪಡೆದುಕೊಂಡು ಆಹಾರ ವಲಯ ಸ್ಥಾಪಿಸಲಾಗುವುದು ಎಂದೂ ತಿಳಿಸಿದರು.

ಈಗಾಗಲೇ ನಿರ್ಮಿಸಿರುವ ಬಲ್ಲಾಳ್ ಸರ್ಕಲ್ ಬಳಿಯ ಫುಡ್ ಜೋನ್‍ನಲ್ಲಿ ಆಹಾರ ಮಾರಾಟ ಮಾಡಲು 20 ಮಂದಿಗೆ ಗುರುತಿನ ಚೀಟಿ ನೀಡಲಾಗಿದೆ. ಅವರು ಸೆಪ್ಟೆಂಬರ್ ಮೊದಲ ವಾರದಿಂದ ಅಲ್ಲಿಗೆ ಸ್ಥಳಾಂತರಗೊಳ್ಳುವರು ಎಂದೂ ರವೀಂದ್ರ ತಿಳಿಸಿದರು.

Translate »