ಸಾರ್ವಜನಿಕರೊಂದಿಗೆ ಬಾಂಧವ್ಯ ಬೆಸೆಯಲು ಮೈಸೂರು ಸಂಚಾರ ಪೊಲೀಸರು `ನಮ್ಮ MYTRA’ `ಒಂದಾಗಿ ಎಲ್ಲರೂ ಕಟ್ಟೋಣ ನಮ್ಮೂರು, ಸುಭದ್ರ ಮೈಸೂರು’ ಸಂದೇಶದ ಲಾಂಛನ ಶೀಘ್ರ ಬಿಡುಗಡೆ
ಮೈಸೂರು

ಸಾರ್ವಜನಿಕರೊಂದಿಗೆ ಬಾಂಧವ್ಯ ಬೆಸೆಯಲು ಮೈಸೂರು ಸಂಚಾರ ಪೊಲೀಸರು `ನಮ್ಮ MYTRA’ `ಒಂದಾಗಿ ಎಲ್ಲರೂ ಕಟ್ಟೋಣ ನಮ್ಮೂರು, ಸುಭದ್ರ ಮೈಸೂರು’ ಸಂದೇಶದ ಲಾಂಛನ ಶೀಘ್ರ ಬಿಡುಗಡೆ

August 18, 2018

ಮೈಸೂರು: ಕರ್ನಾಟಕ ಪೊಲೀಸರು ಜನ ಸ್ನೇಹಿಗಳಾಗುತ್ತಿದ್ದಾರೆ. ಧರಿಸುವ ಸಮವಸ್ತ್ರ, ಭಾರವಾದ ಶೂಗಳು, ಟೋಪಿ, ಹಿಡಿಯುವ ಲಾಠಿ, ಬಳಸುವ ರೈಫಲ್, ಪಿಸ್ತೂಲ್‍ಗಳಲ್ಲಿ ಬಲಾವಣೆಯಾಗದಿದ್ದರೂ, ವರುಷಗಳುರುಳಿದಂತೆ ನಡೆ, ನುಡಿ, ಭಾವನೆ, ಕಲ್ಪನೆಗಳಲ್ಲಿ ಒಂದಷ್ಟು ಪರಿವರ್ತನೆಯನ್ನು ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳಲ್ಲಿ ಕಾಣಬಹುದಾಗಿದೆ.

ಪದವಿ, ಸ್ನಾತಕೋತ್ತರ ಪದವಿಯಂತಹ ಉನ್ನತ ಶಿಕ್ಷಣ ಪಡೆದವರೂ ಪೊಲೀಸ್ ಇಲಾಖೆಗೆ ಸೇರುತ್ತಿರುವುದು ಈ ಬಗೆಯ ಪರಿವರ್ತನೆಗೆ ಕಾರಣವಿರಬಹುದು. ಪೊಲೀಸರೆಂದರೆ ಬೆಚ್ಚಿ ಬೀಳುವ ಕಾಲವೊಂದಿತ್ತು. ಆದರೀಗ ಅವರೂ ಮನುಷ್ಯರೇ, ನಮ್ಮವರೇ ಪೊಲೀಸರು, ಅವರಿಗೂ ಹೃದಯವಿದೆ, ಭಾವನೆಗಳಿವೆ ಎಂಬುದು ಈಗ ಮನವರಿಕೆಯಾಗುತ್ತಿದೆ.
ಒಂದಿಷ್ಟು ಪೊಲೀಸರ ವರ್ತನೆ ಬದಲಾಗದಿದ್ದರೂ, ಬಹುತೇಕ ಪೊಲೀಸರು ಜನ ಸ್ನೇಹಿಗಳಾಗುತ್ತಿದ್ದಾರೆಂಬುದನ್ನು ಅಲ್ಲಗಳೆಯುವಂತಿಲ್ಲ. ಪ್ರತೀ ಠಾಣೆಗಳಲ್ಲಿ ಸ್ವಾಗತಕಾರರಿದ್ದು, ತಮ್ಮಲ್ಲಿಗೆ ಬರುವ ಜನರನ್ನು ನಗು ಮುಖದಿಂದ ಬರಮಾಡಿಕೊಂಡು, ಅವರ ಅಹವಾಲು ವಿಚಾರಿಸುವಷ್ಟು ಸುಧಾರಣೆಯಾಗುತ್ತಿದೆ.

ಜನಸ್ನೇಹಿ ಪೊಲೀಸ್ (People Friendly Police), ನಿಮ್ಮೊಂದಿಗೆ ನಾವಿದ್ದೇವೆ ಎನ್ನುವ, ಒಬ್ಬಂಟಿಯಾಗಿ ವಾಸಿಸುವ ವೃದ್ಧರಿಗೆ ಧೈರ್ಯ ತುಂಬುವ `ಅಭಯ’ ಯೋಜನೆ, ಮಹಿಳೆಯರಿಗಾಗಿ ವನಿತಾ ಸಹಾಯವಾಣಿ, ಮಕ್ಕಳ ರಕ್ಷಣೆಗೆ ಮಕ್ಕಳ ಸಹಾಯ ವಾಣಿ, ಪಿಂಕ್ ಹೊಯ್ಸಳ ಸೇರಿದಂತೆ ಅನೇಕ ಯೋಜನೆಗಳನ್ನು ಮೈಸೂರು ನಗರ ಪೊಲೀಸರು ಜಾರಿಗೆ ತಂದಿರುವುದು ಒಂದಷ್ಟು ಸುಧಾರಣೆಯಾಗುತ್ತಿದೆ ಎನ್ನುವುದಕ್ಕೆ ನಿದರ್ಶನ.

ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಜನರೊಂದಿಗೆ ನಿತ್ಯ ಸಂಪರ್ಕದಲ್ಲಿರಬೇಕಾದ ಸಂಚಾರ ಪೊಲೀಸರೀಗ `MYTRA’ ರಾಗುತ್ತಿದ್ದು, `ಒಂದಾಗಿ ಎಲ್ಲರೂ ಕಟ್ಟೋಣ ನಮ್ಮೂರು-ಸುಭದ್ರ ಮೈಸೂರು’ ಎಂಬ ಸಂದೇಶದೊಂದಿಗೆ ವಿನೂತನ ಲಾಂಛನವನ್ನು ಹೊರತರುತ್ತಿದ್ದಾರೆ.

ಈ ಲಾಂಛನ (Mascot) ದಲ್ಲಿ ಮುದ್ದಾದ ಆನೆ ಮುಖ, ಪೊಲೀಸ್ ಹ್ಯಾಟ್, ಬಿಳಿ ಶರ್ಟ್, ಖಾಕಿ ಪ್ಯಾಂಟ್ ಹಾಗೂ ಕೆಂಪು ಶೂ ಧರಿಸಿರುವ ಚಿತ್ರವನ್ನು ಒಳಗೊಂಡಿದ್ದು, ಚಿಕ್ಕ ಮಕ್ಕಳಿಂದ ವೃದ್ಧರವರೆಗೂ ಪ್ರತಿಯೊಬ್ಬರಿಗೂ ಆಕರ್ಷಣೀಯವಾಗಿದೆ.

`ನಮ್ಮ ಮಿತ್ರ’ ಹೆಸರಿನ ಈ ಲಾಂಛನವಿರುವ ಬ್ಯಾಡ್ಜ್ ಅನ್ನು ಸಂಚಾರ ಪೊಲೀಸರು ತಮ್ಮ ಸಮವಸ್ತ್ರಕ್ಕೆ ಅಳವಡಿಸಿಕೊಂಡು ಕರ್ತವ್ಯ ನಿರ್ವಹಿಸುತ್ತಾರೆ. ಸಂಚಾರ ನಿಯಮ ಪಾಲಿಸುವಂತೆ ಸಾರ್ವಜನಿಕರ ನಡುವೆ ಕೆಲಸ ಮಾಡುವಾಗ ಕೆಲವೊಮ್ಮೆ ತಾಳ್ಮೆ ಕಳೆದುಕೊಳ್ಳುವ ಸಂದರ್ಭ ಬಂದರೆ, ತಕ್ಷಣ ಆ ಸಿಬ್ಬಂದಿಗೆ ಈ ಲೋಗೋ ಜ್ಞಾಪಕಕ್ಕೆ ಬಂದು `ನಾನು ನಿಮ್ಮ ಮಿತ್ರ’, `ನೀವು ನಮ್ಮ ಮಿತ್ರರು’ ಎಂಬ ಪರಿಕಲ್ಪನೆ ಬರಲಿ ಎಂಬುದೇ ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಇನ್ನೊಂದು ವಾರದಲ್ಲಿ ಈ ಮಹತ್ವದ `ನಮ್ಮ ಮಿತ್ರ’ ಯೋಜನೆಯ ಲಾಂಛನವನ್ನು ಮೈಸೂರು ನಗರ ಪೊಲೀಸರು ಬಿಡುಗಡೆ ಮಾಡಲಿದ್ದಾರೆ.

ಬೆಂಗಳೂರಿನ ಮೀಸೆ ತಿಮ್ಮಯ್ಯ ಸ್ಫೂರ್ತಿ

ಮೈಸೂರು ನಗರದಲ್ಲಿ `ನಮ್ಮ ಮಿತ್ರ’ ಲಾಂಛನ ಹೊರ ತರಲು ಬೆಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂಚಾರ ಹೆಡ್ ಕಾನ್ಸ್‍ಟೇಬಲ್ ಮೀಸೆ ತಿಮ್ಮಯ್ಯ ಅವರೇ ಸ್ಫೂರ್ತಿ ಎಂಬುದು ನಗರ ಪೊಲೀಸ್ ಕಮೀಷ್ನರ್ ಡಾ.ಎ.ಸುಬ್ರಹ್ಮಣ್ಯೇಶ್ವರ ರಾವ್ ಅಭಿಪ್ರಾಯ.

ನಾನು ಚಿಕ್ಕವನಿದ್ದಾಗ ಬೆಂಗಳೂರು ವಿಧಾನಸೌಧದೆದುರು ಕಬ್ಬನ್ ಪಾರ್ಕ್ ಬಳಿಯ ಜನರಲ್ ಪೋಸ್ಟ್ ಆಫೀಸ್ ಸರ್ಕಲ್ ಬಳಿ ಹೆಡ್ ಕಾನ್ಸ್‍ಟೇಬಲ್ ಮೀಸೆ ತಿಮ್ಮಯ್ಯ ಅವರು ಪ್ರತೀ ದಿನ ನಿಂತು ಸಂಚಾರ ನಿಯಂತ್ರಿಸುತ್ತಿದ್ದುದನ್ನು ನಾನು ಗಮನಿಸಿದ್ದೆ. ಅವರು ವರ್ಷದ 365 ದಿನವೂ ಅದೇ ಉತ್ಸಾಹದಿಂದ ಕಾರ್ಯ ನಿರ್ವಹಿಸುತ್ತಿದ್ದರು. ಒಂದು ದಿನ ಯಾವುದೋ ವಾಹನ ಡಿಕ್ಕಿ ಹೊಡೆದ ಪರಿಣಾಮ ಮೀಸೆ ತಿಮ್ಮಯ್ಯ ಸಾವನ್ನಪ್ಪಿದರು.

ಅವರ ನಿಷ್ಠೆ, ಶಿಸ್ತು, ಸಮಯ ಪಾಲನೆಯಿಂದಾಗಿ ಬೆಂಗಳೂರು ನಗರದ ಸಂಚಾರ ಪೊಲೀಸರಿಗೆ `ನಮ್ಮ ಮಿತ್ರ’ ಲಾಂಛನವನ್ನು ಮೀಸೆ ತಿಮ್ಮಯ್ಯರ ಭಾವಚಿತ್ರ ಬಳಸಿ ಪರಿಚಯಿಸಿದ್ದರು. ಆದರೆ ಅವರ ಕುಟುಂಬದವರು ಆಕ್ಷೇಪಿಸಿದರೆಂಬ ಕಾರಣಕ್ಕೆ ಲಾಂಛನವನ್ನು ಸ್ಥಗಿತಗೊಳಿಸಲಾಗಿತ್ತು.

ಜನರೊಂದಿಗೆ ಸ್ನೇಹ, ವಿಶ್ವಾಸ ಬೆಸೆಯಬೇಕೆಂಬ ಉದ್ದೇಶದಿಂದ `ನಾವು ನಿಮ್ಮವರು, ನೀವು ನಮ್ಮವರು’ ಸಂದೇಶ ಸಾರುವ ಸಲುವಾಗಿ `ನಮ್ಮ ಒಙಖಿಖಂ’ ಯೋಜನೆಯ ಲಾಂಛನವನ್ನು ಬಿಡುಗಡೆ ಮಾಡುತ್ತಿದ್ದೇವೆ ಎಂದೂ ಡಾ.ಸುಬ್ರಹ್ಮಣ್ಯೇಶ್ವರ ರಾವ್ `ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ.

Translate »