ಭವಿಷ್ಯದ ಅಂಬಾರಿ ಆನೆ ಭರವಸೆ ಮೂಡಿಸಿರುವ `ಧನಂಜಯ’
ಮೈಸೂರು

ಭವಿಷ್ಯದ ಅಂಬಾರಿ ಆನೆ ಭರವಸೆ ಮೂಡಿಸಿರುವ `ಧನಂಜಯ’

August 18, 2018

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಇದೇ ಮೊದಲ ಬಾರಿಗೆ ದುಬಾರೆ ಆನೆ ಶಿಬಿರದಿಂದ ಆಗಮಿಸುತ್ತಿರುವ ಧನಂಜಯ, ಭವಿಷ್ಯದಲ್ಲಿ ಅಂಬಾರಿ ಹೊರುವ ಭರವಸೆ ಮೂಡಿಸಿದ್ದಾನೆ.

ಈ ದಸರಾ ಮಹೋತ್ಸವದಲ್ಲಿ 37 ವರ್ಷದ ಧನಂಜಯ ಹೊಸ ಅತಿಥಿ. ಸೆರೆ ಹಿಡಿದಾಗ ಪುಂಡ, ಆದರೆ ಈಗ ಫುಲ್ ಸೈಲೆಂಟ್ ಬಾಯ್. ಭವಿಷ್ಯದಲ್ಲಿ ಅಂಬಾರಿ ಪ್ರಮುಖ ಪಾತ್ರ ನಿರ್ವಹಿಸುವ ಹೊಣೆಗಾರಿಕೆಗೆ ಹೆಗಲು ಕೊಡುವ ಸಾಮಥ್ರ್ಯ ಈತನಿಗಿರುವುದನ್ನು ಮನಗಂಡಿರುವ ಅರಣ್ಯ ಇಲಾಖೆಯ ಅಧಿಕಾರಿಗಳು ಈ ಬಾರಿ ದಸರಾಕ್ಕೆ ಕರೆತರುತ್ತಿದ್ದಾರೆ.

ಸೆರೆ ಸಿಕ್ಕಿದ್ದು ಎಲ್ಲಿ: ಹಾಸನ ಜಿಲ್ಲೆಯ ವಿವಿಧೆಡೆ ಕಾಡಾನೆಗಳ ಹಾವಳಿ ಹೆಚ್ಚಾಗಿತ್ತು. ರೈತರು ಬೆಳೆದ ಫಸಲನ್ನು ಹಾಳು ಮಾಡುತ್ತಿದ್ದಲ್ಲದೆ, ಅಮಾಯಕರ ಮೇಲೆ ದಾಳಿ ನಡೆಸಿ ಹಲವರನ್ನು ಬಲಿ ಪಡೆದಿದ್ದವು. ಹಾಗಾಗಿ ಕಾಡಾನೆಗಳ ಹಾವಳಿ ತಡೆಗೆ ಕ್ರಮ ಕೈಗೊಳ್ಳುವಂತೆ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆದಿತ್ತು. ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಸ್ಥಳೀಯ ಗ್ರಾಮಸ್ಥರು ದಾಳಿ ನಡೆಸಿದ್ದರು. ಪರಿಸ್ಥಿತಿ ಕೈಮೀರುತ್ತಿದ್ದುದ್ದನ್ನು ಗಮನಿಸಿದ ಅಂದಿನ ಸರ್ಕಾರ (2014ರಲ್ಲಿ) ಉಪಟಳ ನೀಡುವ ಕಾಡಾನೆಗಳನ್ನು ಸೆರೆ ಹಿಡಿಯಲು ಆದೇಶಿಸಿತ್ತು.

ಸರ್ಕಾರದ ಆದೇಶಾನುಸಾರ ಪುಂಡಾನೆಗಳ ಸೆರೆ ಹಿಡಿಯುವ ಕಾರ್ಯಾಚರಣೆ ಆರಂಭಿಸಿದ್ದ ಅರಣ್ಯ ಸಿಬ್ಬಂದಿ, 2014ರಿಂದ 2015ರವರೆಗೆ ಹಾಸನ ಜಿಲ್ಲೆಯ ವಿವಿಧೆಡೆ ಒಟ್ಟು 22 ಆನೆಗಳನ್ನು ಖೆಡ್ಡಾಗೆ ಕೆಡವಿದ್ದಾರೆ. ಈ 22 ಆನೆಗಳಲ್ಲಿ ಸೆರೆ ಸಿಕ್ಕ ಮೂರನೇ ಆನೆಯೇ ಧನಂಜಯ. ಸಕಲೇಶಪುರದ ಯಸಳೂರು ಬಳಿ ದಾಳಿ ನಡೆಸಿ ರೈತನೊಬ್ಬನ ಹತ್ಯೆಗೈಯ್ದಿದ್ದ. ಸುತ್ತಮುತ್ತಲಿರುವ ಗ್ರಾಮಗಳಲ್ಲಿ ಆತಂಕ ಮೂಡಿಸಿದ್ದ. ಈ ಹಿನ್ನೆಲೆಯಲ್ಲಿ ಪುಂಡಾನೆ ಸೆರೆ ಹಿಡಿಯುವ ಕಾರ್ಯಾಚರಣೆಯನ್ನು 2014ರ ಮಾರ್ಚ್ 1ರಂದು ಆರಂಭಿಸಿದ್ದ ಅರಣ್ಯ ಸಿಬ್ಬಂದಿ, ಮಾರ್ಚ್ 3ರಂದು ಪಶುವೈದ್ಯ ಡಾ. ಡಿ.ಎನ್.ನಾಗರಾಜು ನೇತೃತ್ವದಲ್ಲಿ ಸೆರೆ ಹಿಡಿಯಲಾಯಿತು. ಲಾರಿಯ ಮೂಲಕ ದುಬಾರೆ ಆನೆ ಶಿಬಿರಕ್ಕೆ ಕರೆತರಲಾಗಿತ್ತು.

ಶಿಬಿರದಲ್ಲಿ ಇದಕ್ಕೆ ಧನಂಜಯ ಎಂದು ನಾಮಕರಣ ಮಾಡಿ, ಜೆ.ಸಿ.ಭಾಸ್ಕರ್ ಎಂಬುವವರನ್ನು ಮಾವುತನನ್ನಾಗಿ, ಜೆ.ಬಿ.ಶೊನ್ಯ ಎಂಬಾತನನ್ನು ಕಾವಾಡಿಯಾಗಿ ನಿಯೋಜಿಸಲಾಯಿತು. ಕ್ರಾಲ್‍ನಲ್ಲಿ ಸುಮಾರು ಆರು ತಿಂಗಳು ಇದ್ದ ಧನಂಜಯ ಮಾವುತ, ಕಾವಾಡಿ ಹಾಗೂ ಸಿಬ್ಬಂದಿ ತೋರಿಸಿದ ಪ್ರೀತಿಗೆ ಶರಣಾಗಿ ಮೃದು ಸ್ವರೂಪಿಯಾಗಿದ್ದಾನೆ. ಇದರಿಂದ ದಸರೆ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಅವಕಾಶ ಗಿಟ್ಟಿಸಿಕೊಂಡಿದ್ದಾನೆ.

ಯಾವುದೇ ಶಬ್ದಕ್ಕೂ ಬೆದರದವ: ಧನಂಜಯ ಶಬ್ದಕ್ಕೆ ಹೆದರುವ ಆನೆಯಲ್ಲ. ಕಳೆದ ನಾಲ್ಕು ವರ್ಷಗಳಿಂದಲೂ ದುಬಾರೆ ಶಿಬಿರದಲ್ಲಿರುವ ಈತ ಸುತ್ತಮುತ್ತಲಿನ ಗ್ರಾಮಗಳಲ್ಲಿ ನಡೆಯುವ ಗ್ರಾಮ ದೇವರ ಜಾತ್ರೆ, ಹಬ್ಬ ಹರಿದಿನಗಳಂದು ಬಾರಿಸುವ ತಮಟೆ ಶಬ್ದಕ್ಕೆ ಒಗ್ಗಿಕೊಂಡಿದ್ದಾನೆ. ಇದರಿಂದ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವುದಕ್ಕೆ ಕರೆತರಲಾಗುತ್ತಿದೆ.

ತರಬೇತಿ ನೀಡಲಾಗುವುದು…

ದುಬಾರೆ ಶಿಬಿರದಲ್ಲಿರುವ ಧನಂಜಯನನ್ನು ಇದೇ ಮೊದಲ ಬಾರಿ ದಸರಾ ಮಹೋತ್ಸವಕ್ಕೆ ಕರೆತರಲಾಗುತ್ತಿದೆ. 37 ವರ್ಷದ ಧನಂಜಯನಿಗೆ ಕೆಲ ವರ್ಷದ ನಂತರ ಹೆಚ್ಚಿನ ಜವಾಬ್ದಾರಿ ನೀಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಈಗಿನಿಂದಲೇ ಜಂಬೂ ಸವಾರಿಯಲ್ಲಿ ತರಬೇತಿ ನೀಡಿದರೆ ಮುಂದಿನ ದಿನಗಳಲ್ಲಿ ಜವಬ್ದಾರಿ ಸಮರ್ಥವಾಗಿ ನಿರ್ವಹಿಸಲಿದ್ದಾನೆ. ಆತನ ಸ್ವಭಾವವೂ ಉತ್ತಮವಾಗಿರುವುದರಿಂದ ದಸರೆಗೆ ಕರೆತರಲಾಗುತ್ತಿದೆ. – ಸಿದ್ರಾಮಪ್ಪ ಚಳ್ಕಾಪುರೆ, ಡಿಸಿಎಫ್

ಅಂಬಾರಿ ಹೊರುವ ಸಾಮಾಥ್ರ್ಯವಿದೆ…

ಧನಂಜಯ ದಷ್ಟಪುಷ್ಟವಾಗಿದ್ದಾನೆ. ಆತನಿಗೆ 45 ವರ್ಷ ದಾಟಿದ ಮೇಲೆ ಅಂಬಾರಿ ಕಟ್ಟಬಹುದು. ಈ ಹಿನ್ನೆಲೆಯಲ್ಲಿ ಕಳೆದ ವರ್ಷವೇ ಆತನನ್ನು ಕರೆತರಲು ಉದ್ದೇಶಿಸಲಾಗಿತ್ತು. ಆದರೆ 16 ಆನೆಗಳನ್ನು ಆಯ್ಕೆ ಮಾಡಿದ್ದರಿಂದ ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿ ಕರೆತಂದು, ಗಾದಿ ಕಟ್ಟಿ ತರಬೇತಿ ನೀಡಲಾಗುತ್ತದೆ. ಸುಮಾರು ಐದಾರು ವರ್ಷ ತರಬೇತಿ ನೀಡಿದರೆ ಅಂಬಾರಿ ಹೊರುವುದಕ್ಕೆ ಸಾಧ್ಯವಾಗುತ್ತದೆ. – ಡಾ. ಡಿ.ಎನ್.ನಾಗಾರಾಜು, ಪಶುವೈದ್ಯ

ಒಡನಾಟವಿದೆ…

ಧನಂಜಯನೊಂದಿಗೆ ಉತ್ತಮ ಒಡನಾಟವಿದೆ. ಹೇಳಿದಂತೆ ಕೇಳುತ್ತಾನೆ. ದಸರಾ ಮಹೋತ್ಸವದಲ್ಲಿ ಇದೇ ಮೊದಲ ಬಾರಿಗೆ ಪಾಲ್ಗೊಳ್ಳುತ್ತಿರುವುದಕ್ಕೆ ಸಂತೋಷವಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳ ಭರವಸೆಯನ್ನು ನಮ್ಮ ಆನೆ ಉಳಿಸಿಕೊಳ್ಳುತ್ತಾನೆ. ಶಿಬಿರದಲ್ಲಿ ಉತ್ತಮ ನಡವಳಿಕೆ ಹೊಂದಿದ್ದಾನೆ. – ಜೆ.ಸಿ.ಭಾಸ್ಕರ, ಮಾವುತ

Translate »