ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಮೈಸೂರಲ್ಲಿ ಬಿಜೆಪಿ ಭಾವಪೂರ್ಣ ನಮನ
ಮೈಸೂರು

ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಮೈಸೂರಲ್ಲಿ ಬಿಜೆಪಿ ಭಾವಪೂರ್ಣ ನಮನ

August 18, 2018

ಮೈಸೂರು: ಅಟಲ್‍ಜೀ, ಮರಳಿ ಹುಟ್ಟಿ ಬನ್ನಿ… ಅಗಲಿದ ಮಾಜಿ ಪ್ರಧಾನಿ, ಹಿರಿಯ ಮುತ್ಸದ್ಧಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಶುಕ್ರವಾರ ಮೈಸೂರಿನ ನಜರ್‍ಬಾದ್‍ನ ವಿ.ಕೆ.ಫಂಕ್ಷನ್ ಹಾಲ್‍ನಲ್ಲಿ ಬಿಜೆಪಿ ವತಿಯಿಂದ ಏರ್ಪಡಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಪಕ್ಷದ ಮುಖಂಡರು ಅವರ ಗುಣಗಾನ ಮಾಡಿದರು.

ಮೊದಲಿಗೆ ಎ.ಬಿ.ವಾಜಪೇಯಿ ಅವರ ಭಾವಚಿತ್ರಕ್ಕೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ, ಸಂಸದ ಪ್ರತಾಪ್‍ಸಿಂಹ, ಶಾಸಕ ಎಲ್.ನಾಗೇಂದ್ರ, ಮಾಜಿ ಎಂಎಲ್‍ಸಿ ತೋಂಟದಾರ್ಯ, ಬಿಜೆಪಿ ಜಿಲ್ಲಾಧ್ಯಕ್ಷ ಕೋಟೆ ಎಂ.ಶಿವಣ್ಣ, ನಗರಾಧ್ಯಕ್ಷ ಡಾ.ಬಿ.ಹೆಚ್.ಮಂಜುನಾಥ್ ಇನ್ನಿತರರು ಪುಷ್ಪಾರ್ಚನೆ ಜೊತೆಗೆ ಎರಡು ನಿಮಿಷ ಮೌನಾಚರಣೆ ಮಾಡಿ ಶ್ರದ್ಧಾಂಜಲಿ ಅರ್ಪಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ, ಅಟಲ್‍ಜೀ ಶಾರೀರಿಕವಾಗಿ ಇಲ್ಲದಿದ್ದರೂ ಅವರು ಕಟ್ಟಿ ಬೆಳೆಸಿದ ಪಕ್ಷ, ವಿಚಾರ, ಸಂಘಟನೆ ಇಷ್ಟೊಂದು ಬಲವಾಗಿದೆ. ಜನಸಂಘದ ಕಾಲದಿಂದಲೂ ಪಕ್ಷ ಕಟ್ಟಿದವರು. ಜೆಪಿ ಆಂದೋಲನದ ಕಾರಣಕ್ಕಾಗಿ ಎಲ್ಲಾ ವಿಪಕ್ಷಗಳು ಒಂದಾದ ಕಾಲವದು. ಜನಸಂಘ ವಿಲೀನಗೊಂಡು ಜನತಾಪಕ್ಷವಾಗಿತ್ತು. ಆಗ ಜನಸಂಘ ಮತ್ತು ಆರ್‍ಎಸ್‍ಎಸ್‍ನಲ್ಲಿ ನೀವು ಇರುವಂತಿಲ್ಲ ಎಂಬ ಒತ್ತಡ ವಾಜಪೇಯಿ ಅವರಿಗೆ ಬಂತು. ಆದರೆ ಅದಕ್ಕೆ ಮನ್ನಣೆ ನೀಡದ ಅಟಲ್‍ಜೀ, 80 ಸದಸ್ಯರೊಂದಿಗೆ ಹೊರಬಂದು ಭಾರತೀಯ ಜನತಾಪಕ್ಷವನ್ನು ಸ್ಥಾಪಿಸಿದ್ದನ್ನು ಸ್ಮರಿಸಿದರು.

ಸರಳವಾಗಿ ಬದುಕಿನ ಅಟಲ್‍ಜೀ, ಪ್ರತಿ ಹಂತದಲ್ಲೂ ನಮಗೆ ಮಾರ್ಗದರ್ಶಕರಾಗಿದ್ದರು. ದೇಶದ ಬಡಜನರ ಬಗ್ಗೆ ಅಪಾರ ಕಳಕಳಿ, ಕಾಳಜಿ. ಸದಾ ಕಾರ್ಯಕರ್ತರ ನಡುವೆಯೇ ಇರುತ್ತಿದ್ದರು. ಎಂದಿಗೂ ಸೇಡಿನ ರಾಜಕಾರಣ ಮಾಡದೆ, ಪಕ್ಷ ಬೇಧರಹಿತವಾಗಿ ಎಲ್ಲರ ಮನಸ್ಸನ್ನು ಗೆದ್ದವರು. ನಿಸ್ವಾರ್ಥ ಸೇವೆ ಮಾಡುವುದನ್ನು ಕಲಿಸಿಕೊಟ್ಟು, ಎಲ್ಲರಿಗೂ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಎಲ್ಲರೂ ಮುನ್ನಡೆಯಬೇಕಿದೆ ಎಂದು ಅಭಿಪ್ರಾಯಪಟ್ಟರು.

2009ರಲ್ಲಿ ಅನಾರೋಗ್ಯದಿಂದಾಗಿ ಯಾರನ್ನು ಭೇಟಿ ಮಾಡಲಾಗುತ್ತಿರಲಿಲ್ಲ. 2008ರಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿತ್ತು. 2009ರಲ್ಲಿ ರಾಷ್ಟ್ರೀಯ ಕಾರ್ಯಕಾರಿಣಿಗೆ ಅವರು ಬಂದಿರಲಿಲ್ಲ. ರಾಜ್ಯದ ಎಲ್ಲಾ ಸಚಿವರು ಅವರಿದ್ದಲ್ಲಿಗೇ ಹೋಗಿ ಬಂದೆವು. ಆ ಸಂದರ್ಭದಲ್ಲಿ ಅವರು ಬಿಜೆಪಿ ಸ್ವಂತ ಬಲದಿಂದ ರಾಜ್ಯದಲ್ಲಿ ಸರ್ಕಾರ ರಚಿಸಿರುವುದನ್ನು ನೋಡಿ ಬಹಳ ಸಂತೋಷ ವ್ಯಕ್ತಪಡಿಸಿದ್ದರು ಎಂದು ಸ್ಮರಿಸಿದರು.

ಸಂಸದ ಪ್ರತಾಪ್‍ಸಿಂಹ ಮಾತನಾಡಿ, 1989, 91, 96ರಲ್ಲಿ ವಾಜಪೇಯಿ ಅವರ ಭಾಷಣ ಕೇಳಲು ನಮ್ಮ ತಂದೆ ನನ್ನನ್ನು ಬೆಂಗಳೂರಿಗೆ ಕರೆದೊಯ್ದಿದ್ದನ್ನು ಸ್ಮರಿಸಿದರು. ಅವರ ಭಾಷಣದಿಂದ ತಾವು ಪ್ರಭಾವಿತರಾಗಿದ್ದನ್ನು ತಿಳಿಸಿದರು.

ಭಾರತದಲ್ಲಿ ಬದಲಾವಣೆ ಕಾಣಬಹುದು ಎಂಬುದನ್ನು ತೋರಿಸಿಕೊಟ್ಟವರು. ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಬುನಾದಿ ಹಾಕಿದರು. ಹೌಸಿಂಗ್ ಸೆಕ್ಟರ್‍ನಲ್ಲಿ ಸಾಲ ಪಡೆದು ಸ್ವಂತ ಮನೆ ಹೊಂದಲು ಅವಕಾಶ ನೀಡಿದರು. ಪ್ರಧಾನ ಮಂತ್ರಿ ಗ್ರಾಮಸಡಕ್ ಯೋಜನೆಯಡಿ ಗ್ರಾಮ ಗ್ರಾಮಗಳಿಗೆ ರಸೆ ಸಂಪರ್ಕ ಕಲ್ಪಿಸಿದರು. ಸೌಮ್ಯವಾದಿ, 1998ರಲ್ಲಿ ದೇಶ ರಕ್ಷಣೆಗಾಗಿ ನ್ಯೂಕ್ಲಿಯರ್ ಪರೀಕ್ಷೆ ನಡೆಸಿದರು. ಸಾಫ್ಟ್‍ವೇರ್ ಇಂಡಸ್ಟ್ರಿ ಬರೀ ರಾಜಧಾನಿಗಳಿಗಷ್ಟೇ ಸೀಮಿತವಾಗಿದ್ದ ಸಾಫ್ಟ್‍ವೇರ್ ಉದ್ಯಮವನ್ನು ರಾಜಧಾನಿಯೇತರ ನಗರಗಳಿಗೆ ಕೊಂಡೊಯ್ದರು. ಅದರ ಪರಿಣಾಮವಾಗಿಯೇ ಮೈಸೂರಿನಲ್ಲಿ ಸಾಫ್ಟ್‍ವೇರ್ ಟೆಕ್ನಾಲಜಿ ಪಾರ್ಕ್ ಆಫ್ ಇಂಡಿಯಾ (ಎಸ್‍ಟಿಪಿಟಿ) ಆಯಿತು. ಇವೆಲ್ಲಕ್ಕೂ ಬುನಾದಿ ಹಾಕಿದವರು. ಅಂತಹ ಮಹಾನ್ ನಾಯಕ ಮತ್ತೇ ಹುಟ್ಟಿ ಬರಲಿ, ಅವರ ಸ್ವಾರ್ಥರಹಿತ ದೇಶಪ್ರೇಮ ನಮಗೆಲ್ಲರಿಗೂ ಮಾದರಿಯಾಗಲಿ ಎಂದು ಆಶಿಸಿದರು.

ಮೈಸೂರು ಜಿಲ್ಲಾ ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಕೋಟೆ ಎಂ.ಶಿವಣ್ಣ, ನಗರಾಧ್ಯಕ್ಷ ಡಾ.ಬಿ.ಹೆಚ್.ಮಂಜುನಾಥ್, ಮಾಜಿ ಎಂಎಲ್‍ಸಿ ತೋಂಟದಾರ್ಯ ವಾಜಪೇಯಿ ಅವರು ದೇಶಕ್ಕೆ ಮತ್ತು ಪಕ್ಷಕ್ಕೆ ನೀಡಿದ ವಿಶಿಷ್ಟ ಕೊಡುಗೆಗಳನ್ನು ಸ್ಮರಿಸಿಕೊಂಡರು. ಶಾಸಕರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ವಿಭಾಗ ಸಹ ಪ್ರಭಾರಿ ಎನ್.ವಿ.ಫಣೀಶ್, ಪ್ರಧಾನ ಕಾರ್ಯದರ್ಶಿ ಸತೀಶ್, ರಾಜೇಶ್, ಮುಖಂಡರಾದ ಸಂದೇಶ್ ಸ್ವಾಮಿ, ನಂದೀಶ್ ಪ್ರೀತಂ, ಅಪ್ಪಣ್ಣ, ಎಸ್.ಮಹದೇವಯ್ಯ, ಬಿ.ಪಿ.ಬೋರೇಗೌಡ, ಮಲ್ಲಪ್ಪಗೌಡ, ಹೆಚ್.ಜಿ.ಗಿರಿಧರ್ ಇನ್ನಿತರರು ಶ್ರದ್ಧಾಂಜಲಿ ಸಭೆಯಲ್ಲಿ ಪಾಲ್ಗೊಂಡಿದ್ದರು.

Translate »