ಭಾರೀ ಮಳೆಯಿಂದ ಕೊಡಗು, ಕೇರಳ ಕಂಗಾಲು
ಮೈಸೂರು

ಭಾರೀ ಮಳೆಯಿಂದ ಕೊಡಗು, ಕೇರಳ ಕಂಗಾಲು

August 18, 2018
  • ಕವಿತೆ ಮೂಲಕ ಸಹಾಯ ಹಸ್ತ ಕೋರಿದ ಬಸ್ ಚಾಲಕ
  • ಮೈಸೂರಲ್ಲಿ ಕೇರಳ ವಿದ್ಯಾರ್ಥಿಗಳಿಂದ ನೆರವು ಯಾಚನೆ

ಮೈಸೂರು:  ಮಳೆಯ ಅಬ್ಬರದಿಂದ ತತ್ತರಿಸಿರುವ ಕೊಡಗು ಹಾಗೂ ಕೇರಳದ ನೆರೆ ಸಂತ್ರಸ್ಥರಿಗೆ ಸಹಾಯ ಹಸ್ತ ಚಾಚುವಂತೆ ಕೊಡಗಿನ ಬಸ್ ಚಾಲಕರೊಬ್ಬರು ನೆರವು ನೀಡುವಂತೆ ಕವಿತೆಯ ಮೂಲಕ ಮೊರೆ ಇಟ್ಟಿದ್ದರೆ, ಇತ್ತ ಮೈಸೂರು ವಿವಿಯ ಕೇರಳ ವಿದ್ಯಾರ್ಥಿಗಳು ಬೀದಿಗಿಳಿದು ನೆರವು ಯಾಚಿಸುತ್ತಿದ್ದಾರೆ.

ಕೊಡಗಿನಲ್ಲಿ ಹಿಂದೆಂದೂ ಕಂಡರಿಯದ ಮಳೆ ಅನಾಹುತ ಸಂಭವಿಸಿದ್ದು, ಭೂ ಕುಸಿತ, ಉಕ್ಕಿ ಹರಿಯುತ್ತಿರುವ ನದಿಗಳು, ಸುಂಟರಗಾಳಿ, ಬಿರುಗಾಳಿಯಿಂದಾಗಿ ಜನ ಜೀವನ ತತ್ತರಿಸಿದೆ. ಇದರೊಂದಿಗೆ ಎಲ್ಲೆಲ್ಲೂ ಜಲಾವೃತವಾಗಿರುವುದರಿಂದ ಮನೆಯಲ್ಲಿದ್ದ ದಿನ ಬಳಕೆಯ ವಸ್ತುಗಳೆಲ್ಲಾ ನೀರು ಪಾಲಾಗಿವೆ. ಇದರಿಂದ ಸಂಕಷ್ಟಕ್ಕೆ ಸಿಲುಕಿರುವ ಕೊಡಗಿನ ಜನತೆ ನೆರವಿಗೆ ಮೊರೆ ಇಡುತ್ತಿದ್ದಾರೆ. ಈ ನಡುವೆ ಕೊಡಗಿನ ನಿವಾಸಿ ಹಾಗೂ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ ಚಾಲಕರಾಗಿರುವ ಪಿ.ಎಸ್.ವೈಲೇಶ್ ಎಂಬುವವರು ಕವನದ ಮೂಲಕ ಕೊಡಗಿನ ಹಾಲಿ ದುಸ್ಥಿತಿಯನ್ನು ಕಣ್ಣಿಗೆ ಕಟ್ಟುವಂತೆ ವರ್ಣಿಸಿದ್ದಾರೆ. ಅಲ್ಲದೆ ಕವನ ಆರಂಭಕ್ಕೂ ಮುನ್ನ ಐದು ಸಾಲುಗಳಲ್ಲಿ ನೆರವು ಕೋರಿದ್ದಾರೆ. ವಾರಾಂತ್ಯದ ಮೋಜಿಗೆಂದು, ಮಳೆ ಬಾರದೇ ಕೆ.ಆರ್.ಎಸ್ ತುಂಬಲ್ಲಿಲ್ಲವೆಂದು, ತಮಿಳುನಾಡಿಗೆ ನೀರು ತಲುಪಲಿಲ್ಲವೆಂದು ಕೊಡಗಿಗೆ ಓಡಿ ಬರುವ ಎಲ್ಲರಿಗೂ ನನ್ನ ಪುಟ್ಟ ಮನವಿ. ದಯಮಾಡಿ ಕರ ಜೋಡಿಸಿ ಕೇಳಿಕೊಳ್ಳುತ್ತೇನೆ. ಕೊಡಗಿನ ಜನರಾದ ನಾವು ಯಾರಲ್ಲೂ ಏನನ್ನೂ ಕೇಳಿದವರಲ್ಲ. ಅತಿಥಿ ಸತ್ಕಾರಕ್ಕೆ ಹೆಸರು ನಮ್ಮ ನಾಡು. ನಲುಗುತಿದೆ ನಮ್ಮ ನಾಡು, ಒಮ್ಮೆ ಬಂದು ಸಹಾಯಹಸ್ತ ನೀಡಿ ಎಂದು ಕೋರಿ ಕೊಂಡಿದ್ದಾರೆ.

ರಸ್ತೆಗಿಳಿದ ಕೇರಳ ವಿದ್ಯಾರ್ಥಿಗಳು: ಭೀಕರ ಮಳೆಗೆ ಅರ್ಧ ಭಾಗದಷ್ಟು ಕೇರಳ ನೀರಿನಲ್ಲಿ ಮುಳುಗಿರುವುದರಿಂದ ಸಂತ್ರಸ್ಥರಿಗೆ ಅಗತ್ಯ ವಸ್ತುಗಳು ಸೇರಿದಂತೆ ವಿವಿಧ ಸೌಲಭ್ಯ ಕಲ್ಪಿಸಲು ನೆರವಾಗುವಂತೆ ಮೈಸೂರು ವಿಶ್ವವಿದ್ಯಾನಿಲಯದ ಕೇರಳ ವಿದ್ಯಾರ್ಥಿಗಳ ಸಂಘದ ಸದಸ್ಯರು ಮೈಸೂರಿನಲ್ಲಿ ಶುಕ್ರವಾರ ಬೀದಿಗಿಳಿದು ಸಾರ್ವಜನಿಕರಿಂದ ನೆರವು ಯಾಚಿಸುತ್ತಿದ್ದಾರೆ. ಮೈಸೂರು ವಿವಿಯ ಆವರಣದಿಂದ ಏಳು ತಂಡಗಳಾಗಿ ವಿಂಗಡಣೆಗೊಂಡ ಕೇರಳದ ವಿದ್ಯಾರ್ಥಿಗಳು ರಟ್ಟಿನ ಡಬ್ಬದ ಮೇಲೆ ‘ಸಂತ್ರಸ್ಥ ಕೇರಳಿಗರಿಗೆ ನೆರವು ನೀಡಿ’ ಎಂದು ಬರೆದುಕೊಂಡು ನಗರದ ವಿವಿಧ ರಸ್ತೆಗಳು, ಅಂಗಡಿಗಳಲ್ಲಿ ನೆರವು ಕೋರುತ್ತಿದ್ದಾರೆ. ಯಾರಿಂದಲೂ ಬಲವಂತದಿಂದ ಹಣ ಕೇಳದೆ ಪರಿಸ್ಥಿತಿಯನ್ನು ವಿವರಿಸಿ ಮಾನವೀಯತೆಯ ನೆಲೆಗಟ್ಟಿನಲ್ಲಿ ನೆರವು ಕೇಳುತ್ತಿದ್ದಾರೆ. ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ರಸ್ತೆಗಿಳಿದು ನೆರವು ಕೋರುತ್ತಿದ್ದ ಹಿನ್ನೆಲೆಯಲ್ಲಿ ವಾಹನ ಸವಾರರು, ದಾರಿ ಹೋಕರು, ಅಂಗಡಿಗಳ ಮಾಲೀಕರು ಹಾಗೂ ಇನ್ನಿತರರು ಆರ್ಥಿಕ ನೆರವು ನೀಡಿ ಸಂತ್ರಸ್ಥರ ನೋವಿಗೆ ಸ್ಪಂದಿಸಿದರು.ಈ ಸಂದರ್ಭದಲ್ಲಿ ಮೈಸೂರು ವಿವಿಯ ಕೇರಳದ ವಿದ್ಯಾರ್ಥಿಗಳಾದ ವಿ.ಜೆ.ಮಣಿ, ಡವ್ಲಿನ್, ಜರಿನ್ ಸೇರಿದಂತೆ ಹಲವಾರು ಮಂದಿ ಪಾಲ್ಗೊಂಡಿದ್ದರು.

Translate »