ನಾಳೆ `ಅಂಬಿ ನಮನ- ಕಲ್ಯಾಣ ಗಾನ ಲಹರಿ’
ಮೈಸೂರು

ನಾಳೆ `ಅಂಬಿ ನಮನ- ಕಲ್ಯಾಣ ಗಾನ ಲಹರಿ’

November 30, 2018

ಮೈಸೂರು: ನಟ, ಮಾಜಿ ಸಚಿವ ಅಂಬರೀಶ್ ಅವರ ಸಾಧನೆ ಯನ್ನು ಸ್ಮರಿಸಿ, ಹಳೇ ಹಾಡುಗಳ ಮೂಲಕ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸುವ ನಿಟ್ಟಿನಲ್ಲಿ ಪರಿವರ್ತನಂ ಟ್ರಸ್ಟ್ ಡಿ.1ರಂದು ಸಂಜೆ 5.30 ಗಂಟೆಗೆ ಮೈಸೂರಿನ ಶಾರದಾವಿಲಾಸ ಶತಮಾನೋತ್ಸವ ಭವನದಲ್ಲಿ `ಅಂಬಿ ನಮನ – ಕಲ್ಯಾಣ ಗಾನ ಲಹರಿ’ ಕಾರ್ಯಕ್ರಮ ಆಯೋಜಿಸಿದೆ.

ಟ್ರಸ್ಟ್ ಉಪಾಧ್ಯಕ್ಷ ಅಜಯ್ ಶಾಸ್ತ್ರಿ ಗುರುವಾರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಟಿ ಯಲ್ಲಿ ಮಾತನಾಡಿ, ಸಂಗೀತ ನಿರ್ದೇಶಕ ಕೆ.ಕಲ್ಯಾಣ್ ಚಿತ್ರ ಸಾಹಿತ್ಯ ಹಾಡುಗಳ ಮೂಲಕ ಮತ್ತು ಅಂಬರೀಶ್ ಅವರ ಆಯ್ದ ಜನಪ್ರಿಯ ಚಿತ್ರಗೀತೆಗಳನ್ನು ಕೆ.ಕಲ್ಯಾಣ್ ನೇತೃತ್ವದಲ್ಲಿ ಗಣೇಶ್‍ಭಟ್, ಷಣ್ಮುಖ ಸಜ್ಜಾ (ಕೀ ಬೋರ್ಡ್), ರಾಘವೇಂದ್ರ ಪ್ರಸಾದ್ (ಡ್ರಮ್ಸ್), ಆರ್.ರಘುನಾಥ್ (ತಬಲ), ನೀತು ನೀನಾದ್ (ಕೊಳಲು), ವಿನಯ್ ರಂಗದೋಳ್ (ರಿದಂ ಪ್ಯಾಡ್), ರವಿಕಿರಣ್ (ಡೋಲಕ್)ನಲ್ಲಿ ಗಾಯಕಿ ರಶ್ಮಿ ಚಿಕ್ಕಮಗಳೂರು, ನಿತಿನ್ ರಾಜಾರಾಮ್ ಶಾಸ್ತ್ರಿ, ಮಹೇಂದ್ರ, ಸಿಂಚನ, ಮಹೇಶ್ ಸಂಗಡಿಗರು ಕಾರ್ಯಕ್ರಮವನ್ನು ಪ್ರಸ್ತುತ ಪಡಿಸಲಿದ್ದಾರೆ ಎಂದರು.

ಸಂಜೆ 5.30ಕ್ಕೆ ಸಮಾಜ ಸೇವಕ ಕೆ.ರಘುರಾಂ ವಾಜಪೇಯಿ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಸಹಕಾರ ಯೂನಿಯರ್ ಅಧ್ಯಕ್ಷ ಎಚ್.ವಿ.ರಾಜೀವ್ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿದೆ. ಭಾಗವಹಿಸುವ ಪ್ರೇಕ್ಷಕರಿಗೆ ಅಂಬರೀಶ್ ಚಿತ್ರಗಳ ಬಗ್ಗೆ, ಕೆ.ಕಲ್ಯಾಣ ಚಿತ್ರ ಸಾಹಿತ್ಯದ ಹಾಡುಗಳ ರಸಪ್ರಶ್ನೆಯೂ ಇರುತ್ತದೆ ಎಂದರು. ಸುದ್ದಿಗೋಷ್ಟಿಯಲ್ಲಿ ಟ್ರಸ್ಟ್ ಅಧ್ಯಕ್ಷ ವಿನಯ್ ಕಣಗಾಲ್, ಕಲಾವಿದ ಮಂಡ್ಯ ಶಶಿ, ಕೃಷ್ಣರಾಜ ಸಹಕಾರ ಬ್ಯಾಂಕ್ ಉಪಾಧ್ಯಕ್ಷ ಚಕ್ರಪಾಣಿ ಉಪಸ್ಥಿತರಿದ್ದರು.

Translate »