ರಸ್ತೆ ದರೋಡೆಗೆ ಮುಂದಾಗಿದ್ದ ಇಬ್ಬರು ಖದೀಮರ ಬಂಧನ
ಮೈಸೂರು

ರಸ್ತೆ ದರೋಡೆಗೆ ಮುಂದಾಗಿದ್ದ ಇಬ್ಬರು ಖದೀಮರ ಬಂಧನ

November 21, 2018

ಉತ್ತರ ಭಾರತದ ವಾಹನಗಳು, ಪ್ರೇಮಿಗಳೇ ಇವರ ಟಾರ್ಗೆಟ್
ಮೈಸೂರು: ಹೊರ ರಾಜ್ಯಗಳಿಂದ ಬರುವ ಟ್ರಕ್‍ಗಳು, ಪ್ರೇಮಿಗಳ ವಾಹನಗಳನ್ನೇ ಟಾರ್ಗೆಟ್ ಮಾಡಿ ತಡೆದು ದರೋಡೆ ಮಾಡಲು ಯತ್ನಿಸುತ್ತಿದ್ದ ಇಬ್ಬರು ಖತರ್ನಾಕ್ ಖದೀಮರನ್ನು ಉದಯಗಿರಿ ಪೊಲೀಸರು ಬಂಧಿಸಿದ್ದಾರೆ.

ಮೈಸೂರಿನ ರಾಜೀವ್‍ನಗರ ನಿವಾಸಿ ಅಬ್ದುಲ್ ರಹೀಂ(21) ಮತ್ತು ಗೌಸಿಯಾನಗರದ ತೌಸುಫ್‍ಬೇಗ್(23) ಬಂಧಿತರು.
ರಾಜೀವ್‍ನಗರದ ರಿಂಗ್ ರಸ್ತೆಯಲ್ಲಿ ಈ ಇಬ್ಬರು ಕೈಯ್ಯಲ್ಲಿ ಆಯುಧಗಳನ್ನು ಹಿಡಿದುಕೊಂಡು ರಸ್ತೆಯಲ್ಲಿ ಓಡಾಡುವ ಕಾರು, ಬೈಕ್, ಲಾರಿಗಳನ್ನು ತಡೆದು ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಉದಯಗಿರಿ ಪೊಲೀಸರು ಸೋಮವಾರ ಸಂಜೆ ಸ್ಥಳಕ್ಕೆ ಧಾವಿಸಿದ್ದಾರೆ.

ಈ ವೇಳೆ ಖದೀಮರು ಮುಖಕ್ಕೆ ಮಂಕಿಕ್ಯಾಪ್ ಧರಿಸಿ ಕೈಯಲ್ಲಿ ರಾಡು, ದೊಣ್ಣೆ ಮತ್ತಿತರೆ ಆಯುಧಗಳನ್ನು ಹಿಡಿದುಕೊಂಡಿದ್ದು, ಪೊಲೀಸರನ್ನು ನೋಡಿದ ಕೂಡಲೇ ಓಡಿ ಹೋಗಲು ಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ಸುತ್ತುವರಿದು ಇಬ್ಬರನ್ನೂ ವಶಕ್ಕೆ ಪಡೆದು ಪರಿಶೀಲಿಸಿದಾಗ ಖಾರದಪುಡಿ ಇರುವುದು ಗೊತ್ತಾಗಿದೆ.

ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ನಾವಿಬ್ಬರೂ ಮಂಕಿಕ್ಯಾಪ್ ಧರಿಸಿಕೊಂಡು ರಿಂಗ್‍ರಸ್ತೆಯಲ್ಲಿ ಸಂಚರಿಸುವ ಉತ್ತರ ಭಾರತದ ಟ್ರಕ್‍ಗಳು, ಪ್ರೇಮಿಗಳ ಕಾರು, ಬೈಕ್, ಸ್ಕೂಟರ್‍ಗಳನ್ನು ಟಾರ್ಗೆಟ್ ಮಾಡಿಕೊಂಡು ಚಾಲಕರಿಗೆ ಚಾಕು, ರಾಡು, ವೈರ್, ದೊಣ್ಣೆಯನ್ನು ತೋರಿಸಿ ಬೆದರಿಸಿ ಹಣ ವಸೂಲಿ ಮಾಡಲು ಯತ್ನಿಸುತ್ತಿದ್ದೆವು. ಹಣ ನೀಡಲು ತಕರಾರು ಮಾಡುವವರ ಕಣ್ಣಿಗೆ ಖಾರದಪುಡಿ ಎರಚಿ ಬಲವಂತವಾಗಿ ಹಣ, ಒಡವೆಗಳನ್ನು ಕಿತ್ತುಕೊಳ್ಳಲು ಯತ್ನಿಸುತ್ತಿದ್ದೆವು ಎಂದು ಒಪ್ಪಿಕೊಂಡಿದ್ದು, ಬಂಧಿತರಿಂದ ಕೇಬಲ್, ಖಾರದಪುಡಿ, ರಾಡು, ಚಾಕುಗಳನ್ನು ವಶಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಉದಯಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Translate »