ಕಾರ್ಮಿಕರ ಮೇಲೆ ದೌರ್ಜನ್ಯ: ತನಿಖೆಗೆ ಜಿಲ್ಲಾಡಳಿತ ಸೂಚನೆ
ಹಾಸನ

ಕಾರ್ಮಿಕರ ಮೇಲೆ ದೌರ್ಜನ್ಯ: ತನಿಖೆಗೆ ಜಿಲ್ಲಾಡಳಿತ ಸೂಚನೆ

July 28, 2019
  • ಕಾರ್ಮಿಕರ ಹಿಂಸಾತ್ಮಕ ಪ್ರತಿಭಟನೆ: 65 ಮಂದಿಗೆ ನ್ಯಾಯಾಂಗ ಬಂಧನ
  • ಕಾರ್ಮಿಕ ಇಲಾಖೆ ಮತ್ತು ಪೊಲೀಸ್ ಅಧಿಕಾರಿಗಳ ತಂಡದಿಂದ ಸಮಗ್ರ ತನಿಖೆ

ಹಾಸನ, ಜು.27- ನಗರದ ಹೊರ ವಲಯದಲ್ಲಿರವ ಹಿಮತ್‍ಸಿಂಗ್ ಕಾ ಸಿದ್ಧ ಉಡುಪು ಕಾರ್ಖಾನೆಯಲ್ಲಿ ಕಾರ್ಮಿಕರನ್ನು ಶೋಷಣೆ ನಡೆಯುತ್ತಿದೆ ಎಂಬ ಸಾರ್ವಜನಿಕರು ಮತ್ತು ಕಾರ್ಮಿಕರ ದೂರಿನ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ಸೂಚನೆ ಮೇರೆಗೆ ತನಿಖೆ ಆರಂಭಗೊಂಡಿದೆ.

ಬಿಹಾರ, ಜಾರ್ಖಂಡ್, ಒರಿಸ್ಸಾ, ಕೊಲ್ಕತ್ತ್ತ ಸೇರಿದಂತೆ ವಿವಿಧ ರಾಜ್ಯಗಳ 5 ಸಾವಿರಕ್ಕೂ ಅಧಿಕ ಕಾರ್ಮಿಕರು ಕಾರ್ಖಾನೆಯಲ್ಲಿದ್ದು, ಆಡಳಿತ ಮಂಡಳಿ ತಮ್ಮ ಮೇಲೆ ದೌರ್ಜನ್ಯ ನಡೆಸುತ್ತಿದೆ ಎಂದು ಆರೋಪಿಸಿ ಜು.24ರಂದು ಪ್ರತಿ ಭಟನೆ ಆರಂಭಿಸಿದ್ದರು. ಈ ವೇಳೆ ಕಾರ್ಮಿಕರು ಕಲ್ಲುತೂರಾಟ ನಡೆಸಿದ್ದ ರಿಂದ ಪೆÇಲೀಸರು ಲಾಠಿ ಪ್ರಹಾರ, ಗಾಳಿಯಲ್ಲಿ ಗುಂಡು ಹಾರಿಸಿ ಪರಿಸ್ಥಿತಿ ನಿಯಂತ್ರಿಸಿದ್ದರು. ಬಳಿಕ ಪೊಲೀಸರು 65 ಕಾರ್ಮಿಕರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದರು.

ಈ ಪ್ರಕರಣದಲ್ಲಿ ಕಾರ್ಖಾನೆಯ ಆಡ ಳಿತ ಮಂಡಳಿ ವಿರುದ್ಧ ಸಾಕಷ್ಟು ದೂರು ಕೇಳಿಬಂದಿದ್ದರಿಂದ ತನಿಖೆ ನಡೆಸಿ ವರದಿ ನೀಡುವಂತೆ ಜಿಲ್ಲಾಧಿಕಾರಿಗಳು, ಪೆÇಲೀಸ್ ಮತ್ತು ಕಾರ್ಮಿಕ ಇಲಾಖೆಗೆ ಸೂಚಿಸಿ ದ್ದರು. ಈ ಹಿನ್ನೆಲೆಯಲ್ಲಿ ಎರಡೂ ಇಲಾಖೆ ಗಳ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.

ಅಮಾಯಕರಿಗೆ ಶಿಕ್ಷೆಯಾಗಬಾರದು ಎಂಬ ಕಾರಣದಿಂದ ಸಮರ್ಪಕ ಪರಿಶೀ ಲನೆ ಬಳಿಕವೇ ಆರೋಪಿಗಳನ್ನು ವಶಕ್ಕೆ ಪಡೆಯಲಾಗುತ್ತಿದೆ ಎಂದು ಹೆಚ್ಚುವರಿ ಎಸ್‍ಪಿ ನಂದಿನಿ ಸ್ಪಷ್ಟಪಡಿಸಿದ್ದಾರೆ.

 ಕಾರ್ಮಿಕರ ಪ್ರತಿಭಟನೆ: ಗಾಯಗೊಂಡ ಪೊಲೀಸರು, ಪತ್ರಕರ್ತರಿಗೆ ಪರಿಹಾರಕ್ಕೆ ಆಗ್ರಹ
ಅರಸೀಕೆರೆ,ಜು.27- ಹಾಸನದ ಹಿಮತ್ ಸಿಂಗ್ ಕಾ ಸಿದ್ಧ ಉಡುಪು ಕಾರ್ಖಾನೆ ಕಾರ್ಮಿಕರು ಬುಧವಾರ ನಡೆಸಿದ ಹಿಂಸಾತ್ಮಕ ಪ್ರತಿಭಟನೆ ವೇಳೆ ಪತ್ರಕರ್ತರ ಮೇಲೂ ಹಲ್ಲೆ ಮಾಡಿದ್ದಾರೆ. ಪತ್ರಕರ್ತರ ವಾಹನಗಳನ್ನು ಜಖಂಗೊಳಿಸಿದ್ದಾರೆ. ಜತೆಗೆ ಕರ್ತವ್ಯನಿರತ ಪೊಲೀಸರ ಮೇಲೆಯೂ ತೀವ್ರವಾಗಿ ಹಲ್ಲೆ ಮಾಡಿ ಗಾಯ ಗೊಳಿಸಿದ್ದಾರೆ. ಹಲ್ಲೆ ನಡೆಸಿದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಇಂಥ ಘಟನೆಗಳು ಮರುಕಳಿಸದಂತೆ ನಿಗಾ ಇಡಬೇಕು ಮತ್ತು ಪತ್ರಕರ್ತರಿಗೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಅರಸೀಕೆರೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಒತ್ತಾಯಿಸಿದೆ.

ಪತ್ರಕರ್ತ ಹೆಚ್.ಡಿ.ಸೀತಾರಾಮ್ ಅವರ ನೇತೃತ್ವದಲ್ಲಿ ತಾಲೂಕಿನ ಪತ್ರಕರ್ತರು ತಹಸೀಲ್ದಾರ್ ಗ್ರೇಡ್-2 ಪಾಲಾಕ್ಷ ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭ ಮಾತನಾಡಿದ ಸಂಘದ ಪ್ರಧಾನ ಕಾರ್ಯದರ್ಶಿ ಎಲ್. ಮಂಜುನಾಥ್, ಹೊರರಾಜ್ಯದಿಂದ ಬಂದ ಕಾರ್ಮಿಕರಿಂದಲೇ ಈ ಹಿಂಸೆ ನಡೆದಿದೆ. ಕಾರ್ಖಾನೆ ಮಾಲೀಕರು ಮೊದಲೇ ಎಚ್ಚೆತ್ತಿದ್ದರೆ ಇಂಥ ಘಟನೆ ನಡೆಯುತ್ತಿರಲಿಲ್ಲ ಎಂದು ಅಭಿಪ್ರಾಯಪಟ್ಟರು.

ಸ್ಥಳೀಯರಿಗೆ ಕೆಲಸ ನೀಡಬೇಕೆಂದು ಜಿಲ್ಲೆಯ ವಿವಿಧ ಸಂಘ-ಸಂಸ್ಥೆಗಳ ಒತ್ತಾಯಿಸಿದರೂ ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಪರಿಣಾಮ ಬೆರಳೆಣಿಕೆಯಷ್ಟಿರುವ ಸ್ಥಳೀಯ ಕಾರ್ಮಿಕರು ಬೇರೆ ರಾಜ್ಯದ ಕಾರ್ಮಿಕರಿಂದ ಶೋಷಣೆಗೆ ಒಳಗಾಗು ವಂತಾಗಿದೆ. ಹೊರರಾಜ್ಯದ ಕಾರ್ಮಿಕರ ಪುಂಡಾಟ ಮತ್ತು ಕಾರ್ಖಾನೆ ಮಾಲಿಕರ ನಿರ್ಲಕ್ಷ್ಯ ಖಂಡನಾರ್ಹ. ಈಗ ಪೊಲೀಸರು ಮತ್ತು ಪತ್ರಕರ್ತರ ಚಿಕಿತ್ಸೆ ಮತ್ತು ಜಖಂಗೊಂಡ ವಾಹನಗಳ ದುರಸ್ತಿ ವೆಚ್ಚಗಳನ್ನು ಕಾರ್ಖಾನೆ ಮಾಲೀಕರಿಂದಲೇ ಕೊಡಿಸಿಕೊಡಬೇಕು. ಇಲ್ಲವಾದರೆ ಹಾಸನ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸಂಘದ ಮಾಜಿ ಅಧ್ಯಕ್ಷ ರಾಮಚಂದ್ರ, ಪತ್ರಕರ್ತರಾದ ಶಾಂತಕುಮಾರ್, ಕಣಕಟ್ಟೆ ಕುಮಾರ್, ಆನಂದ್ ಕೌಶಿಕ್, ಮುರುಂಡಿ ಪ್ರಸಾದ್, ರಂಗನಾಥ್, ರಾಮ್‍ಪ್ರಸಾದ್, ಜೀವನ್‍ಕುಮಾರ್, ಹರಿಪ್ರಸಾದ್, ಧೀರೇಂದ್ರ ಮತ್ತಿತರರಿದ್ದರು.