ಕೋಟೆಯಲ್ಲಿ ವಿಷ್ಣುವರ್ಧನ್ ಹುಟ್ಟುಹಬ್ಬ ಆಚರಣೆ
ಮೈಸೂರು

ಕೋಟೆಯಲ್ಲಿ ವಿಷ್ಣುವರ್ಧನ್ ಹುಟ್ಟುಹಬ್ಬ ಆಚರಣೆ

September 19, 2018

ಹೆಚ್.ಡಿ.ಕೋಟೆ: ಸಾಹಸಸಿಂಹ ವಿಷ್ಣುವರ್ಧನ್ ತಮ್ಮ ಮನೋಜ್ಞ ಅಭಿನಯದ ಮೂಲಕ ಸದಾ ಕನ್ನಡಿಗರ ಮನಸ್ಸಿನಲ್ಲಿ ಹಸಿರಾಗಿದ್ದಾರೆ ಎಂದು ಪುರಸಭೆ ಮುಖ್ಯಾಧಿಕಾರಿ ಡಿ.ಎನ್.ವಿಜಯಕುಮಾರ್ ತಿಳಿಸಿದರು.

ಪಟ್ಟಣದ ಬಾಪೂಜಿ ವೃತ್ತದಲ್ಲಿ ಡಾ.ವಿಷ್ಣುವರ್ಧನ್ ಸೇವಾ ಸಮಿತಿಯಿಂದ ಏರ್ಪಡಿಸಿದ್ದ 69ನೇ ಹುಟ್ಟು ಹಬ್ಬವನ್ನು ವಿಷ್ಟು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು. ಡಾ. ವಿಷ್ಣುವರ್ಧನ್ ಅಭಿನಯಿಸಿದ ನಾಗರಹಾವು, ಬಂಧನ, ಮುತ್ತಿನಹಾರ, ಸುಪ್ರಭಾತ ಸೇರಿದಂತೆ ನೂರಾರು ಉತ್ತಮ ಚಿತ್ರಗಳನ್ನು ಕನ್ನಡ ಚಿತ್ರ ರಸಿಕರಿಗೆ ನೀಡಿದ್ದಾರೆ. ತಮ್ಮ ಜೀವನದಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡಿದ್ದರು, ಅಭಿಮಾನಿಗಳಾದ ತಾವು ಕೂಡ ಅವರ ಆದರ್ಶಗಳನ್ನು ಪಾಲಿಸುವಂತೆ ತಿಳಿಸಿದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕನ್ನಡಪ್ರಮೋದ ಮಾತನಾಡಿ ಡಾ.ವಿಷ್ಣುವರ್ಧನ್ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸುವ ಜೊತೆಗೆ ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳ ಚಿತ್ರಗಳಲ್ಲೂ ಅಭಿನಯಿಸಿ ಪಂಚಭಾಷಾ ಕಲಾವಿದರಾಗಿದ್ದರು. ಕನ್ನಡ ನಾಡು ನುಡಿ, ನೆಲ ಜಲದ ವಿಚಾರದಲ್ಲಿ ಅನ್ಯಾಯವಾದ ಸಂದರ್ಭದಲ್ಲಿ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದರು. ಗಂಧದಗುಡಿ ಚಿತ್ರದ ನಿರ್ಮಾಣ ಹಂತದಲ್ಲಿ ತಾಲೂಕಿನ ಕಾರಾಪುರ ಅರಣ್ಯ ಪ್ರದೇಶಕ್ಕೆ ಆಗಮಿಸಿದ್ದನ್ನು ಸ್ಮರಿಸಿಕೊಂಡರು. ವಿಷ್ಣುವರ್ಧನ್ ಅವರು ನಿಧನರಾಗಿ 9 ವರ್ಷಗಳಾಗಿದ್ದು ಅವರ ನೆನಪಿನಲ್ಲಿ ಸ್ಮಾರಕ ನಿರ್ಮಾಣಕ್ಕೆ ಸರ್ಕಾರ ಗಮನ ನೀಡಬೇಕು ಎಂದರು.

ಕಾರ್ಯಕ್ರಮದಲ್ಲಿ ಪುರಸಭೆ ಕಂದಾಯ ನಿರೀಕ್ಷಕ ಸುರೇಶ್, ವಿಷ್ಣುವರ್ಧನ್ ಸೇವಾ ಸಮಿತಿ ಅಧ್ಯಕ್ಷ ಸಮೀಉಲ್ಲಾ, ಉಪಾಧ್ಯಕ್ಷರಾದ ಸೋಮು, ಸ್ವಾಮಿ, ಯಶ್ವಂತ್ ಶೇಖರ್, ರವೀಶ್, ರಾಕೇಶ್ ಶರ್ಮ, ಸ್ವಾಮಿ, ಹುಚ್ಚಪ್ಪ ಇದ್ದರು.

Translate »