ಬೇರೆಯವರಿಗೋಸ್ಕರವೇ ಬದುಕು ಮುಡಿಪಾಗಿಟ್ಟು ದುಡಿಯುವ ಶ್ರಮಜೀವಿ ಸಮುದಾಯ ವಿಶ್ವಕರ್ಮ
ಮೈಸೂರು

ಬೇರೆಯವರಿಗೋಸ್ಕರವೇ ಬದುಕು ಮುಡಿಪಾಗಿಟ್ಟು ದುಡಿಯುವ ಶ್ರಮಜೀವಿ ಸಮುದಾಯ ವಿಶ್ವಕರ್ಮ

September 18, 2018

ಮೈಸೂರು: ವಿಗ್ರಹಗಳ ಕೆತ್ತನೆ, ಮರಗೆಲಸ, ವ್ಯವಸಾಯಕ್ಕೆ ಅಗತ್ಯ ನೇಗಿಲು, ಮದುವೆ ಸಂದರ್ಭದಲ್ಲಿ ಅಗತ್ಯ ಮಾಂಗಲ್ಯ ಹೀಗೆ ಮನುಷ್ಯ ಜೀವನದಲ್ಲಿ ಅಗತ್ಯವಿರುವುದೆಲ್ಲವೂ ವಿಶ್ವಕರ್ಮ ಸಮುದಾಯದ ಕೊಡುಗೆ. ದೈಹಿಕ ಶ್ರಮ ವಹಿಸಿ ದುಡಿಯುವ ಸಮುದಾಯವೆಂದರೆ ಅದು ವಿಶ್ವಕರ್ಮರು ಮಾತ್ರ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅಭಿಪ್ರಾಯಪಟ್ಟರು.

ಮೈಸೂರಿನ ಕಲಾಮಂದಿರದಲ್ಲಿ ಮೈಸೂರು ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ವಿಶ್ವಕರ್ಮ ಜಯಂತ್ಯೋತ್ಸವ ಸಮಿತಿ ಜಂಟಿಯಾಗಿ ಆಯೋಜಿ ಸಿದ್ದ ಜಿಲ್ಲಾ ವಿಶ್ವಕರ್ಮ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಅಂದು ದುಡಿದ ಸಮುದಾಯ ಇಂದು ಯಾವ ಸ್ಥಿತಿಯಲ್ಲಿದೆ ಎಂಬು ದನ್ನು ಅವರು ನೀಡಿದ ಮನವಿ ಪತ್ರದ ಮೂಲಕ ಮನವರಿಕೆಯಾಗಿದೆ. ಬೇರೆಯವರಿಗೋಸ್ಕರವೇ ತಮ್ಮ ಬದುಕು ಎಂದು ಕುಲಕಸುಬನ್ನೇ ನಂಬಿರುವ ವಿಶ್ವಕರ್ಮ ಸಮುದಾಯದ ಉದ್ಯೋಗವನ್ನು ನಾನಾ ಕಂಪನಿಗಳು ಕಸಿದುಕೊಂಡಿವೆ. ಇದರಿಂದ ಸಮುದಾಯದವರು ನಿರುದ್ಯೋಗಿಗಳಾಗುವಂತಾಗಿದೆ ಎಂದು ಬೇಸರ ವ್ಯಕ್ತ ಪಡಿಸಿದರು. ಈ ಸಮುದಾಯ ಜಯಂತ್ಯೋತ್ಸವದ ಮೂಲಕ ಸಂಘಟಿತರಾಗದಿದ್ದರೆ ನಶಿಸುತ್ತದೆ. ನೀವು ಸಂಪೂರ್ಣ ಸಂಘಟಿತರಾಗಬೆಕು.

ಶಿಕ್ಷಣ, ಸಂಘಟನೆ, ಹೋರಾಟದ ಮೂಲಕ ಸಮುದಾಯ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಸಮುದಾಯದವರಿಗೆ ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ಸಚಿವ ಜಿ.ಟಿ. ದೇವೇಗೌಡರಿಗೆ ಜೆಡಿಎಸ್ ಉಪಾಧ್ಯಕ್ಷ ಹುಯಿಲಾಳು ಕುಮಾರ್ ಮತ್ತು ತಂಡ, 100 ಕೆಜಿಗೂ ಹೆಚ್ಚಿನ ಗಾತ್ರದ ಸೇಬಿನ ಹಾರ ಹಾಕಿ ಅಭಿಮಾನ ಪ್ರದರ್ಶಿಸಿದರು. ಇದಕ್ಕೂ ಮುನ್ನ ಪವಿತ್ರಾ ಆಚಾರ್ ಮತ್ತು ತಂಡದಿಂದ ರಸಮಂಜರಿ ಕಾರ್ಯಕ್ರಮ, ಸಿ.ನವ್ಯಶ್ರೀಯಿಂದ ಭರತನಾಟ್ಯ ಗಮನ ಸೆಳೆಯಿತು.

ಸಮಾರಂಭದಲ್ಲಿ ಕಾರ್ಪೊರೇಟರ್‍ಗಳಾದ ರಮೇಶ್ (ರಮಣಿ), ವೇದಾವತಿ, ಛಾಯಾದೇವಿ, ಪ್ರಮೀಳ ಭರತ್, ಅಪರ ಜಿಲ್ಲಾಧಿಕಾರಿ ಯೋಗೀಶ್, ವಿಶ್ವಕರ್ಮ ಜಯಂತ್ಯೋತ್ಸವ ಸಮಿತಿ ಅಧ್ಯಕ್ಷ ಸಿ.ಹುಚ್ಚಪ್ಪಾಚಾರ್, ಉಪಾಧ್ಯಕ್ಷ ಎನ್.ನಂದಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಹೆಚ್.ಚನ್ನಪ್ಪ, ಮುಖಂಡ ಮುಳ್ಳೂರು ರಾಮಲಿಂಗಾಚಾರ್ ಇನ್ನಿತರರು ಉಪಸ್ಥಿತರಿದ್ದರು.

Translate »