ವಿಶ್ವಾಸ ಮತ ಯಾಚನೆ: ಸದನದಲ್ಲಿ ಹಾಜರಿರುವುದು ಶಾಸಕರ ವಿವೇಚನೆಗೆ ಬಿಟ್ಟದ್ದು
ಮೈಸೂರು

ವಿಶ್ವಾಸ ಮತ ಯಾಚನೆ: ಸದನದಲ್ಲಿ ಹಾಜರಿರುವುದು ಶಾಸಕರ ವಿವೇಚನೆಗೆ ಬಿಟ್ಟದ್ದು

July 18, 2019
  • ಸುಪ್ರೀಂಕೋರ್ಟ್ ಮಧ್ಯಂತರ ತೀರ್ಪು
  • ರಾಜೀನಾಮೆ ಅಂಗೀಕಾರ ವಿಚಾರ ಸ್ಪೀಕರ್‍ಗೆ ಸೇರಿದ್ದು

ನವದೆಹಲಿ: ಅತೃಪ್ತ ಶಾಸಕರ ರಾಜೀನಾಮೆ ಕುರಿತು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗಗೋಯ್ ಅವರನ್ನೊಳಗೊಂಡ ಪೀಠ ಇಂದು ಮಧ್ಯಂತರ ತೀರ್ಪು ನೀಡಿದ್ದು, ಸಂವಿಧಾನವನ್ನು ಎಲ್ಲರೂ ಕಾಪಾಡಬೇಕು. ನಿರ್ದಿಷ್ಟ ಸಮಯದಲ್ಲಿ ವಿಧಾನಸಭಾಧ್ಯಕ್ಷರು ಶಾಸಕರ ರಾಜೀನಾಮೆ ಬಗ್ಗೆ ನಿರ್ಧಾರ ಮಾಡಬೇಕು ಎಂದಿದೆ.

ಶಾಸಕರ ರಾಜೀನಾಮೆ ಕುರಿತು ನಿರ್ಧಾರ ಮಾಡುವುದು ವಿಧಾನಸಭಾಧ್ಯಕ್ಷರ ವಿವೇಚನೆಗೊಳಪಟ್ಟಿದ್ದು. ಆದ್ದರಿಂದ ಕೋರ್ಟ್ ಮಧ್ಯಸ್ಥಿಕೆ ವಹಿಸುವುದಿಲ್ಲ ಎಂದು ತೀರ್ಪಿನಲ್ಲಿ ತಿಳಿಸಿದ್ದು, ವಿಧಾನಸಭಾಧ್ಯಕ್ಷರು ನಿರ್ಧಿಷ್ಟ ಸಮಯದಲ್ಲಿ ರಾಜೀನಾಮೆ ಬಗ್ಗೆ ನಿರ್ಧರಿಸಬೇಕು ಎಂದು ತೀರ್ಪಿನಲ್ಲಿ ಹೇಳಿದ್ದರೂ ಕೂಡ ಅದಕ್ಕೆ ಕಾಲಮಿತಿ ನೀಡದೇ ಸ್ಪೀಕರ್ ವಿವೇಚನೆಗೆ ಬಿಟ್ಟಿದೆ. ಅರ್ಜಿದಾರರಾದ 15 ಶಾಸಕರು ವಿಧಾನಸಭೆಯಲ್ಲಿ ವಿಶ್ವಾಸ ಮತಯಾಚನೆ ಸಂದರ್ಭ ಸದನದಲ್ಲಿ ಹಾಜರಿ ರುವುದು ಶಾಸಕರ ವಿವೇಚನೆಗೆ ಬಿಟ್ಟ ವಿಷಯ ಎಂದು ವಿಶ್ಲೇಷಿಸಿರುವ ನ್ಯಾಯಮೂರ್ತಿಗಳು, ಸದನದಲ್ಲಿ ಹಾಜರಿರಲೇಬೇಕೆಂದು ವಿಧಾನಸಭಾಧ್ಯಕ್ಷರು ಶಾಸಕರನ್ನು ಒತ್ತಾಯ ಮಾಡುವಂತಿಲ್ಲ ಎಂದು ತೀರ್ಪಿನಲ್ಲಿ ತಿಳಿಸಿದ್ದಾರೆ.

ಶಾಸಕರ ರಾಜೀನಾಮೆ ನಿರ್ಧಾರ ಸ್ಪೀಕರ್ ವಿವೇಚನೆಗೆ ಬಿಟ್ಟಿದ್ದು ಎಂದು ತಿಳಿಸಿರುವ ಸುಪ್ರೀಂಕೋರ್ಟ್, ಶಾಸಕರ ಅನರ್ಹತೆ ಅರ್ಜಿ ಬಗ್ಗೆ ತೀರ್ಪಿನಲ್ಲಿ ಉಲ್ಲೇಖಿಸಿಲ್ಲ. ನಾಳಿನ ವಿಧಾನಸಭಾ ಕಲಾಪದಲ್ಲಿ ಪಾಲ್ಗೊಳ್ಳುವ ಅಥವಾ ಗೈರಾಗುವ ಸಂಪೂರ್ಣ ಹಕ್ಕು ಶಾಸಕರಿಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ ಎಂದು ಅತೃಪ್ತ ಶಾಸಕರ ಪರ ವಕೀಲ ಮುಕುಲ್ ರೋಹ್ಟಗಿ ತಿಳಿಸಿದ್ದಾರೆ. ಸುಪ್ರೀಂಕೋರ್ಟ್ ಮಧ್ಯಂತರ ತೀರ್ಪಿನ ನಂತರ ಕೋರ್ಟ್ ಆವರಣದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮುಂದಿನ ತೀರ್ಪು ಅತೃಪ್ತ ಶಾಸಕರಿಗೆ ನಿರಾಳತೆ ನೀಡಿದೆ. ವಿಶ್ವಾಸ ಮತ ಹಿನ್ನೆಲೆಯಲ್ಲಿ ನಡೆಯುವ ವಿಧಾನಸಭಾ ಕಲಾಪಕ್ಕೆ ಶಾಸಕರು ಹಾಜರಾಗಲೇಬೇಕು ಎಂಬ ನಿಯಮ ಅತೃಪ್ತ ಶಾಸಕರಿಗೆ ಅನ್ವಯವಾಗುವು ದಿಲ್ಲ ಎಂದರು. ವ್ಹಿಪ್‍ಗೆ ಸಂಬಂಧಪಟ್ಟಂತೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಸುಪ್ರೀಂಕೋರ್ಟ್ ದೃಷ್ಟಿಯಲ್ಲಿ ನೋಡುವುದಾದರೆ ಮಿತ್ರ ಪಕ್ಷಗಳು ಜಾರಿ ಮಾಡಿರುವ ವ್ಹಿಪ್ ಅತೃಪ್ತ ಶಾಸಕರಿಗೆ ಅನ್ವಯಿಸುವುದಿಲ್ಲ. ರಾಜೀನಾಮೆ ಕುರಿತು ಯಾವುದೇ ನಿರ್ಧಾರಕ್ಕೂ ವಿಧಾನಸಭಾಧ್ಯಕ್ಷರು ಬದ್ಧರು ಎಂದು ಅವರು ಹೇಳಿದರು.

Translate »