ಇಂದು ಮತದಾನ
ಮೈಸೂರು

ಇಂದು ಮತದಾನ

April 18, 2019

ಮೈಸೂರು: ಮೈಸೂರು-ಕೊಡಗು, ಮಂಡ್ಯ, ಚಾಮರಾಜನಗರ, ಹಾಸನ ಸೇರಿದಂತೆ ರಾಜ್ಯದ 14 ಲೋಕಸಭಾ ಕ್ಷೇತ್ರ ದಲ್ಲಿ ನಾಳೆ(ಏ.18) ಮೊದಲ ಹಂತದ ಚುನಾ ವಣೆ ನಡೆಯಲಿದ್ದು, ಬೆಳಿಗ್ಗೆ 7 ರಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದೆ.

ಈ ಐದು ಜಿಲ್ಲೆಗಳ ಜಿಲ್ಲಾಡಳಿತ ಮತದಾನಕ್ಕೆ ಸಂಪೂರ್ಣ ಸಿದ್ಧತೆ ಮಾಡಿಕೊಂಡಿದ್ದು, ಮತ ದಾರರಿಗೆ ಮತಗಟ್ಟೆಗಳಲ್ಲಿ ಸಕಲ ಸೌಲಭ್ಯ ಒದ ಗಿಸಿವೆ. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಹಾಲಿ ಸಂಸದ ಪ್ರತಾಪ್‍ಸಿಂಹ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಸಂಸದ ಸಿ.ಹೆಚ್. ವಿಜಯಶಂಕರ್, ಮಂಡ್ಯದಲ್ಲಿ ಪಕ್ಷೇತರವಾಗಿ ಸುಮಲತಾ ಅಂಬರೀಶ್, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಪ್ರಧಾನಿ ದೇವೇ ಗೌಡರ ಮೊಮ್ಮಗ, ಹಾಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಸ್ಪರ್ಧಿ ಸಿದ್ದಾರೆ. ಚಾಮರಾಜನಗರ ಕ್ಷೇತ್ರದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಹಾಲಿ ಸಂಸದ ಆರ್.ಧ್ರುವನಾರಾಯಣ್, ಬಿಜೆಪಿ ಅಭ್ಯರ್ಥಿ ಯಾಗಿ ಮಾಜಿ ಸಂಸದರೂ ಆದ ಮಾಜಿ ಸಚಿವ ವಿ.ಶ್ರೀನಿವಾಸ ಪ್ರಸಾದ್ ಕಣದಲ್ಲಿದ್ದಾರೆ. ಹಾಸನ ಕ್ಷೇತ್ರದಲ್ಲಿ ಬಿಜೆಪಿ  ಅಭ್ಯರ್ಥಿಯಾಗಿ ಮಾಜಿ ಸಚಿವ ಎ.ಮಂಜು, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಪ್ರಧಾನಿ ದೇವೇಗೌಡರ ಮತ್ತೊಬ್ಬ ಮೊಮ್ಮಗ ಹಾಗೂ ಸಚಿವ ಹೆಚ್.ಡಿ.ರೇವಣ್ಣ ಅವರ ಪುತ್ರ ಪ್ರಜ್ವಲ್ ಸೆಣಸುತ್ತಿದ್ದಾರೆ.

ಮತಗಟ್ಟೆ ವಿವರ: ಮೈಸೂರು-ಕೊಡಗು ಕ್ಷೇತ್ರ ವ್ಯಾಪ್ತಿಯ ಮಡಿಕೇರಿಯಲ್ಲಿ 269, ವಿರಾಜಪೇಟೆಯಲ್ಲಿ 274, ಪಿರಿಯಾಪಟ್ಟಣದಲ್ಲಿ 235, ಹುಣಸೂರಿನಲ್ಲಿ 274, ಚಾಮುಂಡೇಶ್ವರಿಯಲ್ಲಿ 338, ಕೃಷ್ಣರಾಜದಲ್ಲಿ 270, ಚಾಮರಾಜದಲ್ಲಿ 245 ಹಾಗೂ ನರಸಿಂಹರಾಜ ಕ್ಷೇತ್ರದಲ್ಲಿ 282 ಸೇರಿದಂತೆ ಒಟ್ಟು 2,187 ಮತಗಟ್ಟೆಗಳನ್ನು ಸ್ಥಾಪಿಸಿದ್ದು, ಅಲ್ಲಿ ರ್ಯಾಂಪ್, ಕುಡಿಯುವ ನೀರು, ಶೌಚಾಲಯ, ವಿದ್ಯುತ್ ಸಂಪರ್ಕ ಹಾಗೂ ಕಾಂಪೌಂಡ್ ವ್ಯವಸ್ಥೆ ಮಾಡಲಾಗಿದೆ.

ಮೈಸೂರು-ಕೊಡಗು ಕ್ಷೇತ್ರದ ಎಲ್ಲಾ 8 ವಿಧಾನಸಭಾ ಕ್ಷೇತ್ರಗಳಲ್ಲಿ 9,50,087 ಮಂದಿ ಮಹಿಳೆಯರು ಸೇರಿ ಒಟ್ಟು 18,95,056 ಮತದಾರರು ಗುರುವಾರ ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಮತಗಟ್ಟೆಗಳಿಗೆ ನಿಯೋಜನೆಗೊಂಡಿರುವ 2,406 ಮತಗಟ್ಟೆ ಅಧ್ಯಕ್ಷಾಧಿಕಾರಿಗಳು, 2,406 ಸಹಾಯಕ ಮತಗಟ್ಟೆ ಅಧ್ಯಕ್ಷಾಧಿಕಾರಿಗಳು, 4,812 ಮತದಾನಾಧಿಕಾರಿಗಳು(ಮೀಸಲು ಸೇರಿ), ಪ್ರತಿ ಮತಗಟ್ಟೆಗೊಬ್ಬರಂತೆ ಗ್ರೂಪ್ `ಡಿ’ ನೌಕರರು ಹಾಗೂ ಓರ್ವ ಮತಗಟ್ಟೆ ಮಟ್ಟದ ಅಧಿಕಾರಿ ಇಂದು ಇವಿಎಂಗಳು, ಲೇಖನ ಸಾಮಗ್ರಿ ಹಾಗೂ ಇನ್ನಿತರೆ ಮತದಾನ ಸಲಕರಣೆಗಳೊಂದಿಗೆ ನಿಯೋಜಿತ ಮತಗಟ್ಟೆಗಳಿಗೆ ಆಯಾಯ ಮಸ್ಟರಿಂಗ್ ಕೇಂದ್ರಗಳಿಂದ ಕೆಎಸ್‍ಆರ್‍ಟಿಸಿ ಮತ್ತು ಖಾಸಗಿ ಬಸ್ಸುಗಳಲ್ಲಿ ತೆರಳಿದ್ದಾರೆ. ಇಂದು ಬೆಳಿಗ್ಗೆ 7 ರಿಂದ ಮಧ್ಯಾಹ್ನ 2.30 ಗಂಟೆಯ ವರೆಗೆ ಮೈಸೂರಿನ ಊಟಿ ರಸ್ತೆಯ ಜೆಎಸ್‍ಎಸ್ ಕಾಲೇಜು, ಡಿಸಿ ಕಚೇರಿ ಹಿಂಭಾಗದ ಬೇಡನ್‍ಪೊವೆಲ್ ಪಬ್ಲಿಕ್ ಶಾಲೆ, ಮಹಾರಾಜ ಕಾಲೇಜು ಶತಮಾನೋತ್ಸವ ಭವನ, ಜೆಎಲ್‍ಬಿ ರಸ್ತೆಯ ಮಹಾರಾಣಿ ಮಹಿಳಾ ಕಲಾ ಕಾಲೇಜು, ಹುಣಸೂರಿನ ದೇವರಾಜ ಅರಸು ಪ್ರಥಮ ದರ್ಜೆ ಕಾಲೇಜು, ಪಿರಿಯಾಪಟ್ಟಣದ ಪುಷ್ಪಾ ಕಾನ್ವೆಂಟ್, ವಿರಾಜಪೇಟೆಯ ಸರ್ಕಾರಿ ಜೂನಿಯರ್ ಕಾಲೇಜು ಹಾಗೂ ಮಡಿಕೇರಿಯ ಸೆಂಟ್ ಜೋಸೆಫ್ ಕಾನ್ವೆಂಟ್‍ಗಳಲ್ಲಿ ಮಸ್ಟರಿಂಗ್ ಕಾರ್ಯ ನಡೆಯಿತು.

ಆಯಾ ವಿಧಾನಸಭಾ ಕ್ಷೇತ್ರಗಳ ಸಹಾಯಕ ಚುನಾವಣಾಧಿಕಾರಿಗಳು, ಮತಗಟ್ಟೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಹಾಜರಾತಿ ಪಡೆದು ಇವಿಎಂ ಹಾಗೂ ಮತದಾನ ಸಾಮಗ್ರಿ ಹಸ್ತಾಂತರಿಸಿ ಮತದಾನ ಪ್ರಕ್ರಿಯೆಯಲ್ಲಿ ಅನುಸರಿಸಬೇಕಾದ ಕ್ರಮದ ಬಗ್ಗೆ ವಿವರಿಸಿದ ನಂತರ ಆಯಾಯ ಮತಗಟ್ಟೆಗೆ ಕಳುಹಿಸಿಕೊಟ್ಟರು.

ಪಿರಿಯಾಪಟ್ಟಣ ಹಾಗೂ ಹುಣಸೂರು ತಾಲೂಕಿನ ಕಾಡಂಚಿನ ಪ್ರದೇಶಗಳ ಬುಡಕಟ್ಟು ಮತದಾರರ ಅನುಕೂಲಕ್ಕಾಗಿ 6 ಹಾಗೂ ವಿರಾಜಪೇಟೆ ಮತ್ತು ಮಡಿಕೇರಿ ಭಾಗಗಳಲ್ಲಿ 6 ಬುಡಕಟ್ಟು ಮತಗಟ್ಟೆಗಳನ್ನು ಸಾಂಪ್ರದಾಯಿಕ ರೀತಿಯಲ್ಲಿ ಸ್ಥಾಪಿಸಿ ಶೃಂಗರಿಸಲಾಗಿದೆ.

ಮಹಿಳಾ ಮತದಾರರು ಅಧಿಕ ಸಂಖ್ಯೆಯಲ್ಲಿರುವ ಮೈಸೂರು ಜಿಲ್ಲೆಯಲ್ಲಿ 12 ಹಾಗೂ ಕೊಡಗು ಜಿಲ್ಲೆಯಲ್ಲಿ 10 `ಸಖಿ’ ಮತಗಟ್ಟೆಗಳನ್ನು ವ್ಯವಸ್ಥೆ ಮಾಡಲಾಗಿದ್ದು, ಈ 22 ಸಖಿ ಮತಗಟ್ಟೆಗಳಲ್ಲಿ ಮಹಿಳಾ ಸಿಬ್ಬಂದಿಗಳೇ ಕರ್ತವ್ಯ ನಿರ್ವಹಿಸಲಿದ್ದಾರೆ. ಮಧ್ಯಾಹ್ನ 3.30 ಗಂಟೆ ವೇಳೆಗೆ ಎಲ್ಲಾ ಸಿಬ್ಬಂದಿ ಮತಗಟ್ಟೆ ತಲುಪಿದ್ದು, ಬ್ಯಾಲೆಟ್ ಯೂನಿಟ್ ಕಂಟ್ರೋಲ್ ಯೂನಿಟ್ ಹಾಗೂ ವಿವಿ ಪ್ಯಾಟ್‍ಗಳನ್ನು ಅಳವಡಿಸಿ ಕೊಂಡು ಅವು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿವೆಯೇ ಎಂಬುದನ್ನು ಪರೀಕ್ಷಿಸಿ ದೃಢಪಡಿಸಿಕೊಂಡಿದ್ದಾರೆ. ನಾಳೆ (ಏ.18) ಬೆಳಿಗ್ಗೆ 7 ಗಂಟೆಯೊಳಗೆ ಮತದಾನದ ತಾಲೀಮು ನಡೆಸಿ ಇವಿಎಂಗಳು ಸರಿಯಾಗಿ ಕೆಲಸ ಮಾಡುತ್ತಿವೆ ಎಂಬುದನ್ನು ಮತಗಟ್ಟೆ ಅಧ್ಯಕ್ಷಾಧಿಕಾರಿಗಳು ದೃಢಪಡಿಸಿಕೊಳ್ಳಬೇಕು. ಸರಿಯಾಗಿ 7 ಗಂಟೆಯಿಂದ ಎಲ್ಲಾ ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆಯನ್ನು ಆರಂಭಿಸಲೇಬೇಕಾಗಿದೆ.

ವಿಶೇಷ ಮತದಾರರಿಗೆ ಅನುಕೂಲ: ವೃದ್ಧರು, ಅಂಗವಿಕಲರು, ಅಂಧ ಮತದಾರರಿಗೆ ಅನುಕೂಲವಾಗುವಂತೆ ಎಲ್ಲಾ ಮತಗಟ್ಟೆಗಳಲ್ಲಿ ವ್ಹೀಲ್ ಚೇರ್, ಬೂತಕನ್ನಡಿ, ಬ್ರೈಲ್ ಬ್ಯಾಲೆಟ್ ಪೇಪರ್ ಅನ್ನು ಒದಗಿಸಲಾಗಿದೆ. ಹಿರಿಯ ನಾಗರಿಕರನ್ನು ಮತಗಟ್ಟೆಗೆ ಕರೆತರಲು ವಾಹನವನ್ನು ವ್ಯವಸ್ಥೆ ಮಾಡಲಾಗಿದೆ.

ಮೊಬೈಲ್, ಕ್ಯಾಮರಾ ನಿಷಿದ್ಧ: ಮೊಬೈಲ್, ಕ್ಯಾಮರಾಗಳನ್ನು ಮತಗಟ್ಟೆಗಳಿಗೆ ಕೊಂಡೊಯ್ಯದಂತೆ ನಿಷೇಧ ಹೇರಲಾಗಿದೆ. ಮುಕ್ತ ಹಾಗೂ ನ್ಯಾಯ ಸಮ್ಮತ ಮತದಾನಕ್ಕೆ ಅನುಕೂಲವಾಗುವಂತೆ ಕ್ಷೇತ್ರದಾದ್ಯಂತ ಮೈಸೂರು ನಗರ, ಜಿಲ್ಲಾ ಪೊಲೀಸ್ ಹಾಗೂ ಕೊಡಗು ಜಿಲ್ಲೆ ಪೊಲೀಸ್ ಘಟಕವು ಪ್ರತಿ ಮತಗಟ್ಟೆಗೆ ವ್ಯಾಪಕ ಭದ್ರತೆ ಒದಗಿಸಿದೆ. ಒಟ್ಟಾರೆ ಮೈಸೂರು ಮತ್ತು ಕೊಡಗು ಜಿಲ್ಲೆಗಳ ಚುನಾವಣಾಧಿಕಾರಿಗಳ ನೇತೃತ್ವದಲ್ಲಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಮತದಾನಕ್ಕೆ ಸಿದ್ಧತೆ ಪೂರ್ಣಗೊಳಿ ಸಿರುವುದರಿಂದ ಸಂವಿಧಾನಿಕ ಹಕ್ಕು ಚಲಾವಣೆಗೆ ಕ್ಷಣಗಣನೆ ಆರಂಭವಾಗಿದೆ.

ಕ್ಷೇತ್ರವಾರು ಮತದಾರರ ಮಾಹಿತಿ:ಮೈಸೂರು-ಕೊಡಗು ಕ್ಷೇತ್ರದಲ್ಲಿ 22 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದು, 9,44,819 ಪುರುಷರು, 9,50,087 ಮಹಿಳೆಯರು ಸೇರಿದಂತೆ ಒಟ್ಟು 18,95,056 ಮತದಾರರಿದ್ದಾರೆ. 2187 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಅದರಲ್ಲಿ 685 ಸೂಕ್ಷ್ಮ ಮತ್ತು 22 ಸಖಿ ಮತಗಟ್ಟೆಗಳಿವೆ.

ಮಂಡ್ಯ ಕ್ಷೇತ್ರದಲ್ಲಿ 22 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದು, 8,54,758 ಪುರುಷರು, 8,56,285 ಮಹಿಳೆಯರು, 147 ಇತರರು, 822 ಸೇವಾ ಮತದಾರರು ಸೇರಿದಂತೆ ಒಟ್ಟು 17,12,012 ಮತದಾರರಿದ್ದಾರೆ. 2046 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, 444 ಅತಿಸೂಕ್ಷ್ಮ, 132 ಸೂಕ್ಷ್ಮ ಮತ್ತು 30 ಸಖಿ ಮತಗಟ್ಟೆಗಳಿವೆ.

ಚಾಮರಾಜನಗರ ಕ್ಷೇತ್ರದಲ್ಲಿ 10 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದು, 8,42,742 ಪುರುಷರು, 8,43,167 ಮಹಿಳೆಯರು, 114 ಇತರರು, 310 ಸೇವಾ ಮತದಾರರು ಸೇರಿದಂತೆ ಒಟ್ಟು 16,86,023 ಮತದಾರರಿದ್ದಾರೆ. 2005 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಅದರಲ್ಲಿ 363 ಸೂಕ್ಷ್ಮ, 4 ಬುಡಕಟ್ಟು, 10 ಸಖಿ, ಮತ್ತು 2 ವಿಕಲಚೇತನರ ಮತಗಟ್ಟೆಗಳಿವೆ.

ಹಾಸನ ಕ್ಷೇತ್ರದಲ್ಲಿ 6 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದು, 8,32,320 ಪುರುಷರು, 8,19,643 ಮಹಿಳೆಯರು, 36 ಇತರರು ಸೇರಿದಂತೆ ಒಟ್ಟು 16,55,999 ಮತದಾರರಿ ದ್ದಾರೆ. 2235 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಅದರಲ್ಲಿ 23 ಅತಿಸೂಕ್ಷ್ಮ, 421 ಸೂಕ್ಷ್ಮ, 14 ಸಖಿ, 1 ಪಾರಂಪರಿಕ ಮತ್ತು 1 ವಿಕಲ ಚೇತನರ ಮತಗಟ್ಟೆಗಳಿವೆ.

Translate »