ಜನರ ಪ್ರೀತಿ ದೊರೆತಿರುವುದು ನಮ್ಮ ಅದೃಷ್ಟ: ಅನಿರುದ್
ಮೈಸೂರು ಗ್ರಾಮಾಂತರ

ಜನರ ಪ್ರೀತಿ ದೊರೆತಿರುವುದು ನಮ್ಮ ಅದೃಷ್ಟ: ಅನಿರುದ್

March 3, 2020

ಬನ್ನೂರು, ಮಾ.2- ಕನ್ನಡದ ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾಗುತ್ತಿರುವ ‘ಜೊತೆ ಜೊತೆಯಲಿ’ ಧಾರವಾಹಿಯು ಪ್ರತಿಯೊಂದು ಕುಟುಂಬವನ್ನು ತಲುಪಿದ್ದು ಜನರ ದೊರೆತಿರುವುದು ನಮ್ಮ ಅದೃಷ್ಟ ಎಂದು ನಟ ಅನಿರುದ್ ತಿಳಿಸಿದರು.

ಪಟ್ಟಣದ ಸಮೀಪದ ತುರಗನೂರು ಗ್ರಾಮದ ಎನ್‍ಸಿಆರ್ ವಿದ್ಯಾ ಸಂಸ್ಥೆಯಲ್ಲಿ ನಡೆದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಾನು ಇಂದು ಗ್ರಾಮಕ್ಕೆ ಭೇಟಿ ನೀಡಿ, ಇಲ್ಲಿನ ಜನರ ಪ್ರೀತಿ ನೋಡಿ ಹೆಚ್ಚು ಸಂತಸವಾಗಿದೆ. ಜನರ ಪ್ರೀತಿಯನ್ನು ಎಂದಿಗೂ ನಾನು ಮರೆಯುವುದಿಲ್ಲ ಎಂದರು.

ಈ ವೇಳೆ ದಿವಂಗತ ಡಾ.ವಿಷ್ಣುವರ್ಧನ್ ಅವರು ಹಾಡಿರುವ ‘ತುತ್ತು ಅನ್ನ ತಿನ್ನೋಕೆ ಬೊಗಸೆ ನೀರು ಕುಡಿಯೋಕೆ’ ಗೀತೆ ಹಾಡಿದರು. ಜೊತೆ ಜೊತೆಯಲಿ ಧಾರವಾಹಿಯ ಡೈಲಾಗ್ ಹೇಳಿ ಸಾರ್ವಜನಿಕರನ್ನು ರಂಜಿಸಿದರು.

ಕಿರುತೆರೆ ನಟ ವಸಂತಕುಮಾರ್ ಮಾತನಾಡಿ, ಪ್ರತಿಯೊಬ್ಬರಲ್ಲೂ ವಿಶೇಷ ಪ್ರತಿಭೆಗಳಿದೆ. ಅದನ್ನು ಬೆಳಕಿಗೆ ತರುವ ಪ್ರಯತ್ನವನ್ನು ಶಾಲೆಯ ಶಿಕ್ಷಕರು ಮಾಡಬೇಕು. ನಟನೆ ಒಂದು ಕಲೆ. ಆ ಕಲೆಯನ್ನು ಪ್ರೋತ್ಸಾಹಿಸಲು, ಮಕ್ಕಳಲ್ಲಿ ಕಲೆ ಬೆಳೆಸಲು ತಮ್ಮಿಂದಾಗುವ ಅನುಕೂಲ ಮಾಡಲು ಸಿದ್ಧರಾಗಿದ್ದೇವೆ ಎಂದು ತಿಳಿಸಿದರು.

ಬಳಿಕ ಕಲಾವಿದರಾದ ವಸಂತ್‍ಕುಮಾರ್, ರೇಖಾ ವಸಂತ್‍ಕುಮಾರ್ ಅವರಿಗೆ ‘ಕಲಾರತ್ನ ಅಪೂರ್ವ ದಂಪತಿ’ ಪ್ರಶಸ್ತಿ ಹಾಗೂ ನಟ ಅನಿರುದ್ ಅವರಿಗೆ ‘ಕರ್ನಾಟಕ ಕಲಾ ಭೂಷಣ’ ಬಿರುದು ನೀಡಿ ಸನ್ಮಾನಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಆದಿಶಕ್ತಿ ಗುರುಕುಲ ಸಂಸ್ಥಾಪಕ ಬೋಳಪ್ಪ ಗುರೂಜಿ, ಜೆಡಿಎಸ್ ಕಾರ್ಯಾಧ್ಯಕ್ಷ ಬಿ.ಆರ್.ಮಂಜುನಾಥ್, ಎಲ್.ಜಗದೀಶ್, ಶಾಲೆಯ ಅಧ್ಯಕ್ಷ ಟಿ.ಎನ್. ಚನ್ನಯ್ಯ, ಶಾಲೆಯ ಕಾರ್ಯದರ್ಶಿ ಟಿ.ಸಿ.ರಾಜೇಶ್, ಉಪಾಧ್ಯಕ್ಷೆ ಮಾದಮ್ಮ, ಯಾಚೇನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವೈ.ಎನ್.ಶಂಕರೇಗೌಡ ಸೇರಿದಂತೆ ಶಾಲೆಯ ಶಿಕ್ಷಕ ವೃಂದ, ವಿದ್ಯಾರ್ಥಿಗಳು, ಗ್ರಾಮದ ಮುಖಂಡರು ಇದ್ದರು.