ಹಾಸನ

ಹಾಸನದಲ್ಲಿ ವಿಶ್ವ ಮಾನವ ಕೇಂದ್ರ ಸ್ಥಾಪನೆ: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ

March 3, 2020

ಹಾಸನ, ಮಾ.2- ಹಾಸನ ನಗರದಲ್ಲಿ ವಿಶ್ವಮಾನವ ಕೇಂದ್ರವನ್ನು ಸ್ಥಾಪಿಸಲು ಪ್ರಯತ್ನಿಸಲಾಗುವುದು. ಅದರ ನೇತೃತ್ವವನ್ನು ತಾವೇ ವಹಿಸಿಕೊಳ್ಳುವುದಾಗಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಭರವಸೆ ನೀಡಿದರು.

ನಗರದ ಮಹಾವೀರ ಭನದಲ್ಲಿ ಡಾ.ಎ.ಸಿ.ಮುನಿವೆಂಕಟೇಗೌಡ ಚಾರಿಟಬಲ್ ಟ್ರಸ್ಟ್, ಬೆಂಗಳೂರಿನ ಆಶ್ರಯ ಸೆಂಟರ್ ಫಾರ್ ಟ್ರಾನ್ಸ್ ಫರ್ಮೇಷನ್ ಮತ್ತು ಡಾ.ಎಸಿಎಂ ನೆನಪಿನ ಬಳಗ ವತಿಯಿಂದ ಆಯೋಜಿಸಿದ್ದ ಡಾ.ಎ.ಸಿ.ಮುನಿವೆಂಕಟೇಗೌಡ ಸ್ಮರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಗತ್ತಿನಲ್ಲಿ ಶಾಂತಿ ಕದಡುವಂತಹ ಘಟನೆಗಳು ನಡೆಯುತ್ತಿರುವ ಹಿನ್ನೆಲೆ ಕುವೆಂಪು ಅವರ ವಿಶ್ವ ಮಾನವ ಸಂದೇಶ ಜಗತ್ತಿಗೆ ಸಾರಲು ಹಾಸನದಲ್ಲೂ ವಿಶ್ವಮಾನವ ಕೇಂದ್ರ ಸ್ಥಾಪಿಸಬೇಕೆಂದು ಡಾ.ಎಸಿಎಂ ಕನಸು ಕಂಡಿದ್ದರು. ಅದರಂತೆ ಜಿಲ್ಲೆಯಲ್ಲಿ ವಿಶ್ವಮಾನವ ಕೇಂದ್ರ ಸ್ಥಾಪಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.

ಡಾ.ಎ.ಸಿ.ಮುನಿವೆಂಕಟೇಗೌಡ ಅವರು ಸಮಾಜ ಸೇವೆ ಮೈಗೂಡಿಸಿಕೊಂಡಿದ್ದ ವ್ಯಕ್ತಿ. ಜಿಲ್ಲೆ ಅಷ್ಟೇ ಅಲ್ಲದೆ ಅಕ್ಕ ಪಕ್ಕದ ಜಿಲ್ಲೆಗಳಿಂದ ಬರುವ ರೋಗಿಗಳಿಗೆ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡಿದ ಆದರ್ಶ ವ್ಯಕ್ತಿ. ಕೊನೆಗೆ ತಮ್ಮ ಪಾರ್ಥಿವ ಶರೀರ ಕೂಡ ಮೈಸೂರಿನ ವೈದ್ಯಕೀಯ ಕಾಲೇಜಿಗೆ ದಾನ ಮಾಡಿದ ಕರುಣಾಮಯಿ ಎಂದು ಶ್ಲಾಘಿಸಿದರರು.

ತಮ್ಮ ಜೀವನದಲ್ಲಿ ಮುನಿವೆಂಕಟೇಗೌಡರಂತಹ ನಿಸ್ವಾರ್ಥ ಸೇವೆಯ ವ್ಯಕ್ತಿಯನ್ನು ಬೇರೆಲ್ಲೂ ನೋಡಿಲ್ಲ. ಸಂಜೀವಿನಿ ಸಹಕಾರಿ ಆಸ್ಪತ್ರೆ ಸ್ಥಾಪಿಸಿ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡಿದ್ದರು. ಸೋಲು-ಗೆಲುವಿನ ನಡುವೆ ತಮಗೆ ಮಾರ್ಗದರ್ಶನ ಮಾಡಿದ್ದಾರೆ. ಯಾವುದೇ ಸ್ಥಾನಮಾನಕ್ಕೂ ಆಸೆ ಪಡೆದೆ ನಿಸ್ವಾರ್ಥ ಸೇವೆ ಸಲ್ಲಿಸಿದ್ದರು ಎಂದು ಸ್ಮರಿಸಿದರು.

ಉದ್ಯಮಿ ಕುಮಾರ್ ಮಾತನಾಡಿ, ಡಾ.ಮುನಿವೆಂಕಟೇಗೌಡರು ಅಗಲಿಕೆ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ. ಅವರು ಮಾಡಿರುವ ಸಮಾಜ ಸೇವೆ ಅನನ್ಯ ಎಂದು ಅವರೊಂದಿಗಿನ ತಮ್ಮ ಒಡನಾಟ ಹಂಚಿಕೊಂಡರು.

ವೈದ್ಯ ಡಾ.ನಾಗರಾಜ್ ಮಾತನಾಡಿ, ಮುನಿವೆಂಕಟೇಗೌರು ಅದ್ಬುತ ಕ್ರೀಡಾಪಟು, ವಾಲಿಬಾಲ್ ಅವರ ನೆಚ್ಚಿನ ಆಟವಾಗಿತ್ತು. ಅಲ್ಲದೆ ಕ್ರಿಕೆಟ್, ಟೆನ್ನಿಸ್ ಕ್ರೀಡೆಯಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದರು. ಕರುಣಾಮಯಿಯಾಗಿದ್ದ ಎಸಿಎಂ ವೈದ್ಯ ವೃತ್ತಿಯ ಜೊತೆಗೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಅಜಾತ ಶತ್ರುವಾಗಿದ್ದರು. ಹಲವು ಜನಪರ ಕಾರ್ಯಕ್ರಮ ಆಯೋಜಿಸಿ ಹಾಸನದ ಮನೆಮಾತಾಗಿದ್ದರು ಎಂದು ಹೇಳಿದರು.

ಸಮಾಜ ಸೇವಕ ಎಸ್.ಎಸ್.ಪಾಷಾ ಮಾತನಾಡಿ, ಜಿಲ್ಲೆಯನ್ನು ಮಾದರಿ ಜಿಲ್ಲೆ ಮಾಡಬೇಕು ಎಂಬ ಕನಸು ಕಂಡಿದ್ದರು. ಸಂಜೀವಿನಿ ಸಹಕಾರಿ ಆಸ್ಪತ್ರೆ ಸ್ಥಾಪಿಸುವ ಮೂಲಕ ಬಡವರಿಗೆ ಕಡಿಮೆ ದರದಲ್ಲಿ ಚಿಕಿತ್ಸೆ ದೊರೆಯುವಂತೆ ಮಾಡಿದ್ದರು. ಶಾಂತಿನಿಕೇತನ ಮಾದರಿಯಲ್ಲಿ ಹಾಸನದಲ್ಲೂ ವಿಶ್ವ ಮಾನವನ ಕೇಂದ್ರ ಸ್ಥಾಪಿಸಬೇಕು ಹಾಗೂ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಬೇಕು ಎಂಬುದು ಎಸಿಎಂ ಕನಸಾಗಿತ್ತು. ಅದನ್ನು ಜಿಲ್ಲೆಯ ಎಲ್ಲಾ ಸಮಾನ ಮನಸ್ಕರು ಸೇರಿ ನನಸು ಮಾಡಬೇಕಿದೆ ಎಂದರು.

ಡಾ.ಮುನಿವೆಂಕಟೇಗೌಡ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷೆ ಕೆ.ಆರ್.ಜಯಲಕ್ಷ್ಮಿ ಮಜನಿವೆಂಕಟೇಗೌಡರು ಮಾತನಾಡಿದರು. ಕಾರ್ಯಕ್ರಮದಲ್ಲಿ ಹಾಸನ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಜಿ.ಎಲ್.ಮುದ್ದೇಗೌಡ, ಜಿಲ್ಲಾ ವೀರಶೈವ ಲಿಂಗಾಯತ ಮುಖಂಡ ಬಿ.ಪಿ.ಐಸಾಮಿಗೌಡ, ಮಾಜಿ ನಗರಸಭೆ ಅಧ್ಯಕ್ಷ ಚನ್ನವೀರಪ್ಪ, ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಂ.ಶಿವಣ್ಣ, ಆರ್.ಟಿ. ದ್ಯಾವೇಗೌಡ, ಜಿಪಂ ಉಪಾಧ್ಯಕ್ಷ ಹೆಚ್.ಪಿ.ಸ್ವರೂಪ್ ಇತರರು ಇದ್ದರು.

Translate »