ಮೈಸೂರು-ತಲಚೇರಿ ರೈಲು ಮಾರ್ಗ ಸರ್ವೇಗೆ ಅನುಮತಿ ನೀಡಿಲ್ಲ
ಕೊಡಗು

ಮೈಸೂರು-ತಲಚೇರಿ ರೈಲು ಮಾರ್ಗ ಸರ್ವೇಗೆ ಅನುಮತಿ ನೀಡಿಲ್ಲ

July 12, 2018

ಮಡಿಕೇರಿ: ದಕ್ಷಿಣ ಕೊಡಗಿನ ಮೂಲಕ ಹಾದು ಹೋಗಲಿರುವ ಮೈಸೂರು-ತಲಚೇರಿ ಉದ್ದೇಶಿತ ರೈಲು ಮಾರ್ಗದ ಸರ್ವೇ ಕಾರ್ಯಕ್ಕೆ ಅನುಮತಿ ನೀಡಿಲ್ಲ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ವಿಧಾನ ಪರಿಷತ್‍ನಲ್ಲಿ ಸದಸ್ಯ ಎಂ.ಪಿ.ಸುನಿಲ್ ಸುಬ್ರಹ್ಮಣಿ ಪ್ರಸ್ತುತ ರೈಲು ಮಾರ್ಗದ ಸರ್ವೇ ಕಾರ್ಯ ಉಲ್ಲೇಖಿಸಿ ಸಭಾಪತಿಗಳಿಗೆ ಪತ್ರ ಬರೆದಿದ್ದರು. ಅಲ್ಲದೆ ಶೂನ್ಯ ವೇಳೆಯಲ್ಲಿ ಈ ವಿಚಾರದ ಪ್ರಸ್ತಾಪಕ್ಕೆ ಅವಕಾಶವನ್ನು ಕೋರಿದ್ದರು. ಇದಕ್ಕೆ ಸಂಬಂಧಪಟ್ಟಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಸ್ಟಷ್ಟನೆ ನೀಡಿ, ಉದ್ದೇಶಿತ ಮೈಸೂರು-ತಲಚೇರಿ ರೈಲು ಮಾರ್ಗಕ್ಕೆ ಸಂಬಂಧಿಸಿದಂತೆ ಕೇರಳ ಸರ್ಕಾರ ಸರ್ವೇ ಕಾರ್ಯ ನಡೆಸಲು ಅನುಮತಿ ಕೋರಿದ್ದರು. ಆದರೆ ಈ ಕುರಿತು ಪ್ರಸ್ತಾವನೆ ಸಲ್ಲಿಸುವಂತೆ ಕರ್ನಾಟಕ ಸರ್ಕಾರ ತಿಳಿಸಿದೆಯೇ ಹೊರತು, ಸರ್ವೇ ನಡೆಸಲು ಅನುಮತಿ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.

ಮೈಸೂರು-ತಲಚೇರಿ ರೈಲು ಮಾರ್ಗಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹಾಗೂ ಕೇರಳ ರಾಜ್ಯ ಮುಖ್ಯ ಕಾರ್ಯದರ್ಶಿಗಳ ಹಂತದಲ್ಲಿ ಎರಡು ಸಭೆಗಳು ನಡೆದಿದ್ದು, ಈ ಸಭೆಯಲ್ಲಿ ಉದ್ದೇಶಿತ ರೈಲು ಮಾರ್ಗವು ಆನೆಗಳ ಕಾರಿಡಾರ್ ಮೂಲಕ ಹಾದು ಹೋಗು ವುದರಿಂದ ಆ ಭಾಗದಲ್ಲಿ ಮನುಷ್ಯರ ಮತ್ತು ಆನೆಗಳ ನಡುವಿನ ಸಂಘರ್ಷವು ಹೆಚ್ಚಾಗಲಿದೆ ಎಂದು ಕರ್ನಾಟಕ ಸರ್ಕಾರವು ತಿಳಿಸಿದೆ ಎಂದರು. ಮಳೆ ಹಾನಿಗೆ ಸಂಬಂಧಿಸಿದಂತೆ ಇತ್ತೀಚೆಗೆ ರಾಜ್ಯ ಕಂದಾಯ ಸಚಿವರು ಕೊಡಗಿಗೆ ಭೇಟಿ ನೀಡಿದ್ದ ವೇಳೆಯಲ್ಲಿ ಮಡಿಕೇರಿಯಲ್ಲಿ ನಡೆಸಿದ ಸಭೆಯಲ್ಲಿಯೂ ಇದನ್ನು ತಿಳಿಸಿದ್ದರು. ಈ ಯೋಜನೆಯ ಸರ್ವೇ ಕಾರ್ಯ ನಡೆಸಲು ಸರಕಾರದಿಂದ ಯಾವುದೇ ಅನುಮತಿಯನ್ನು ನೀಡಿಲ್ಲ ಎಂದು ಅಲ್ಲಿರುವ ಸ್ಥಳೀಯ ನಾಗರಿಕರಿಗೆ ಕಂದಾಯ ಸಚಿವರು ಹೇಳಿದ್ದರು ಎಂದು ಮುಖ್ಯಮಂತ್ರಿಗಳು ನೀಡಿರುವ ಉತ್ತರದಲ್ಲಿ ಉಲ್ಲೇಖಿಸಿದ್ದಾರೆ.

ಉದ್ದೇಶಿತ ಯೋಜನೆಯ ಅನುಷ್ಠಾನದ ಬಗ್ಗೆ ಸ್ಥಳೀಯರ ಭಾವನೆ, ಯೋಜನೆ ಅನುಷ್ಠಾನದಿಂದ ವನ್ಯ ಜೀವಿ ಹಾಗೂ ಪರಿಸರದ ಮೇಲಾಗುವ ಪರಿಣಾಮ ಇತ್ಯಾದಿ ಪ್ರಮುಖವಾದ ಅಂಶಗಳನ್ನು ಪರಿಗಣಿಸಿ ಈ ಬಗ್ಗೆ ಮುಂದಿನ ದಿನಗಳಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಿಎಂ ಕುಮಾರಸ್ವಾಮಿ ತಿಳಿಸಿದ್ದಾರೆ.

ಕೊಡಗು ಜಿಲ್ಲೆಯ ಮೂಲಕ ಮೈಸೂರು-ತಲಚೇರಿ ರೈಲ್ವೆ ಮಾರ್ಗಕ್ಕೆ ಜಿಲ್ಲೆಯಾದ್ಯಂತ ತೀವ್ರ ವಿರೋಧ ಕಂಡು ಬಂದು ಪ್ರತಿಭಟನೆ ನಡೆಸಿ ಸರ್ಕಾರದ ಗಮನ ಸೆಳೆದ ಬೆನ್ನಲ್ಲೇ ಇದೀಗ ಈ ಯೋಜನೆಯ ಅನುಷ್ಠಾನಕ್ಕೆ ಪೂರಕವಾಗಿ, ಸರ್ವೇ ಕಾರ್ಯ ಕೈಗೆತ್ತಿಕೊಂಡಿರುವುದು ಬೆಳಕಿಗೆ ಬಂದಿದೆ.

ಈ ಯೋಜನೆಯ ಸರ್ವೇ ಕಾರ್ಯ ದಕ್ಷಿಣ ಕೊಡಗಿನ ಕುಟ್ಟ, ಕೆ.ಬಾಡಗ ಮತ್ತು ಶ್ರೀಮಂಗಲ ಗ್ರಾಪಂ ವ್ಯಾಪ್ತಿಯಲ್ಲಿ ನಡೆಯುತ್ತಿದ್ದು, ಈ ಯೋಜನೆಗೆ ಖಾಸಗಿ ಮಾಲೀಕರಿಗೆ ಯಾವುದೇ ಮಾಹಿತಿ ನೀಡದೆ ಸರ್ವೇ ಕಾರ್ಯ ನಡೆಸ ಲಾಗುತ್ತಿದೆ.

ಕೊಂಕಣ ರೈಲ್ವೆ ಕಾರ್ಪೋರೇಷನ್ ಲಿಮಿಟೆಡ್ ಸಂಸ್ಥೆಯು ಗುತ್ತಿಗೆ ಆಧಾರದಲ್ಲಿ ಈ ಸರ್ವೇ ಕಾರ್ಯಕ್ಕೆ ಅಧಿಕಾರಿ, ಸಿಬ್ಬಂದಿಗಳನ್ನು ನೇಮಕ ಮಾಡಿದ್ದು, ಪರಿಕರಗಳೊಂದಿಗೆ ಸರ್ವೇ ಕಾರ್ಯವನ್ನು ಪ್ರಾರಂಭಿಸಿದ್ದಾರೆ. ಈ ಸಿಬ್ಬಂದಿ ಹೊಂದಿರುವ ಸರ್ವೇ ಮಾಹಿತಿಯ ನಕಾಶೆಯಂತೆ ಈಗಾಗಲೇ ಯೋಜನೆಯ ಮಾರ್ಗವನ್ನು ಗುರುತಿಸಲಾಗಿದ್ದು, ಜಿಲ್ಲೆಯ ತಿತಿಮತಿ ಮೂಲಕ ಜಿಲ್ಲೆಗೆ ಪ್ರವೇಶಿಸುವ ಈ ಮಾರ್ಗವು ಹಲವೆಡೆ ಸುರಂಗಗಳ ಮೂಲಕ ಹಾದು ಹೋಗಿ ಕುಟ್ಟದ ಮೂಲಕ ಕೇರಳ ರಾಜ್ಯವನ್ನು ಸಂಪರ್ಕಿಸುವುದನ್ನು ಗುರುತಿಸಲಾಗಿದೆ.

ದಕ್ಷಿಣ ಕೊಡಗಿನ ಮೂಲಕ ರೈಲ್ವೆ ಯೋಜನೆಗೆ ಅವಕಾಶ ನೀಡಿದರೆ, ಜಿಲ್ಲೆಯ ಅಸ್ತಿತ್ವವಾದ ಕಾಫಿ ತೋಟಗಳಿಗೆ, ಜಿಲ್ಲೆಯ ಜನಜೀವನಕ್ಕೆ ಹಾಗೂ ಮೇಲಾಗಿ ಕಾವೇರಿ ನದಿಯ ಅಸ್ತಿತ್ವಕ್ಕೆ ಧಕ್ಕೆ ಉಂಟಾಗುವುದೆಂದು ಪರಿಸರವಾದಿಗಳ ಅಭಿಪ್ರಾಯ ವಾಗಿದ್ದು, ಈ ಸರ್ವೆ ಕಾರ್ಯದ ಕುರಿತಾಗಿ ಸರ್ಕಾರದ ನಿಲುವೇನು. ಈ ಸರ್ವೇ ಕಾರ್ಯಕ್ಕೆ ರಾಜ್ಯದಿಂದ ಅನುಮತಿ ನೀಡಲಾಗಿದೆಯೇ ಎಂಬುದನ್ನು ಸುನಿಲ್ ಸುಬ್ರಹ್ಮಣಿ ಪ್ರಶ್ನಿಸಿದ್ದರು.

Translate »