ರಮೇಶ್ ಜಾರಕಿಹೊಳಿ ರಾಜೀನಾಮೆ ಚಿಂತನೆ
ಮೈಸೂರು

ರಮೇಶ್ ಜಾರಕಿಹೊಳಿ ರಾಜೀನಾಮೆ ಚಿಂತನೆ

December 24, 2018

ಬೆಳಗಾವಿ: ಸಚಿವರಾಗಿದ್ದಾಗಲೂ ಪಕ್ಷ ಹಾಗೂ ಸರ್ಕಾರದ ಜೊತೆಗೆ ಅಂತರ ಕಾಯ್ದುಕೊಂಡಿದ್ದ ರಮೇಶ್ ಜಾರಕಿ ಹೊಳಿ ಇದೀಗ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಚಿಂತನೆಯಲ್ಲಿದ್ದಾರೆ ಎನ್ನಲಾಗಿದೆ.

ಆಪ್ತರ ಬಳಿ ಈ ಸಂಬಂಧ ಚರ್ಚಿಸಿರುವ ರಮೇಶ್ ಜಾರಕಿಹೊಳಿ ಶೀಘ್ರವೇ ರಾಜೀನಾಮೆ ನಿರ್ಧಾರ ಪ್ರಕಟಿಸುವುದಾಗಿಯೂ ಹೇಳಿಕೊಂಡಿದ್ದಾರೆ. ತಮ್ಮ ಜೊತೆಗೆ ಇನ್ನೂ ಹಲವು ಶಾಸಕರು ರಾಜೀನಾಮೆ ನೀಡಲಿದ್ದಾರೆ ಎಂದು ಬಾಂಬ್ ಸಿಡಿಸಿರುವ ರಮೇಶ್, ರಾಜೀನಾಮೆ ಸಲ್ಲಿಸಲಿರುವವರ ಸಂಖ್ಯೆಯನ್ನು ಗೌಪ್ಯವಾಗಿ ಇಟ್ಟಿದ್ದಾರೆ. ರಮೇಶ್ ಮತ್ತು ಆಪ್ತರ ಮಾತುಕತೆಯ ಆಡಿಯೋ ಇದೀಗ ವೈರಲ್ ಆಗಿದ್ದು, ಸಮ್ಮಿಶ್ರ ಸರ್ಕಾರವನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ರಮೇಶ್ ಜಾರಕಿಹೊಳಿ ಅವರ ಬೆಂಬಲ ದಿಂದಲೇ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ದಾಖಲಿಸಿರುವ ಅಥಣಿ ಶಾಸಕ ಮಹೇಶ ಕುಮಟಳ್ಳಿ ಹಾಗೂ ಕಾಗವಾಡ ಶಾಸಕ ಶ್ರೀಮಂತ ಪಾಟೀಲ ರಾಜೀನಾಮೆ ಸಲ್ಲಿಸುವ ಸಾಧ್ಯತೆ ದಟ್ಟವಾಗಿದೆ. ತಮ್ಮನ್ನು ಸಂಪುಟ ದಿಂದ ಕೈಬಿಟ್ಟಿರುವುದಕ್ಕೆ ಸಿಟ್ಟಾಗಿರುವ ರಮೇಶ್ ಜಾರಕಿಹೊಳಿ, ಜಿಲ್ಲೆಯಲ್ಲಿ 40 ವರ್ಷಗಳಿಂದ ಪಕ್ಷ ಸಂಘಟಿಸಿದಕ್ಕೆ ಕಾಂಗ್ರೆಸ್ ನನಗೆ ಒಳ್ಳೆಯ ಬೆಲೆ ಕೊಟ್ಟಿದೆ. ಸಚಿವ ಡಿಕೆಶಿ ವಿರುದ್ಧ ಕ್ರಮ ಕೈಗೊಳ್ಳದ ಹೈಕಮಾಂಡ್ ನನ್ನ ವಿರುದ್ಧ ಕ್ರಮ ಕೈಗೊಂಡಿದೆ. ನಾನು ಏನು ಎಂಬುದನ್ನು ಕಾಂಗ್ರೆಸ್‍ನವರಿಗೆ ತೋರಿಸು ತ್ತೇನೆ ಎಂದು ಆಪ್ತರ ಬಳಿ ಹೇಳಿಕೊಂಡಿದ್ದಾರೆ

ಎನ್ನಲಾಗುತ್ತಿದೆ. ಮೈತ್ರಿ ಸರ್ಕಾರದಲ್ಲಿ ಇದ್ದರೂ ಬಿಜೆಪಿ ಜೊತೆಗೆ ಹೆಚ್ಚಾಗಿ ಕಾಣಿಸಿಕೊಂಡಿದ್ದ ಜಾರಕಿಹೊಳಿ, ಕಾಂಗ್ರೆಸ್ ಹಾಗೂ ಮೈತ್ರಿ ಸರ್ಕಾರ ಮುಜುಗರಕ್ಕೆ ಒಳಗಾಗುವಂತೆ ನಡೆದುಕೊಂಡಿದ್ದರು ಎನ್ನಲಾಗಿದೆ. ಹೀಗಾಗಿಯೇ ಹೈಕಮಾಂಡ್ ರಮೇಶ್ ಬದಲು ಅವರ ಸಹೋದರ ಸತೀಶ್ ಜಾರಕಿಹೊಳಿ ಅವರಿಗೆ ಸಂಪುಟದಲ್ಲಿ ಅವಕಾಶ ನೀಡಿದೆ. ಇದು ರಮೇಶ್ ಜಾರಕಿಹೊಳಿ ಅವರಿಗೆ ಇರಿಸುಮುರಿಸು ಉಂಟಾಗುವಂತೆ ಮಾಡಿದೆ ಎಂದು ತಿಳಿದು ಬಂದಿದೆ.

ಅಜ್ಞಾತ ಸ್ಥಳದಲ್ಲಿ ರಮೇಶ್ ಜಾರಕಿಹೊಳಿ!: ಎರಡು ದಿನಗಳಿಂದ ರಮೇಶ್ ಜಾರಕಿಹೊಳಿ ಎಲ್ಲಿದ್ದಾರೆ ಎಂಬ ಬಗ್ಗೆ ಕುಟುಂಬ ಸದಸ್ಯರಿಗೂ ಸರಿಯಾದ ಮಾಹಿತಿ ಇಲ್ಲ. ರಮೇಶ್ ಜಾರಕಿಹೊಳಿ ಬೆಂಗಳೂರಿಗೆ ಹೋಗುವುದಾಗಿ ಅವರ ಆಪ್ತ ಮೂಲಗಳು ಖಚಿತ ಪಡಿಸಿವೆ. ಆದರೆ ಬೆಂಗಳೂರಿನಲ್ಲಿ ಎಲ್ಲಿದ್ದಾರೆ ಎಂಬುದು ಗೊತ್ತಾಗುತ್ತಿಲ್ಲ. ಅಜ್ಞಾತಸ್ಥಳದಲ್ಲೇ ಕುಳಿತು ರಮೇಶ್ ಜಾರಕಿಹೊಳಿ ತಂತ್ರಗಾರಿಕೆ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ.

Translate »