ಕೇಂದ್ರಿಯ ವಿದ್ಯಾಲಯದಲ್ಲಿ ಮಾತೃಭಾಷೆ ಅಳವಡಿಸಲು ಶಿಫಾರಸು
ಚಾಮರಾಜನಗರ

ಕೇಂದ್ರಿಯ ವಿದ್ಯಾಲಯದಲ್ಲಿ ಮಾತೃಭಾಷೆ ಅಳವಡಿಸಲು ಶಿಫಾರಸು

August 14, 2018

ಚಾಮರಾಜನಗರ:  ‘ಕೇಂದ್ರಿಯ ವಿದ್ಯಾಲಯಗಳಲ್ಲಿ ಆಯಾ ರಾಜ್ಯಗಳ ಮಾತೃಭಾಷೆಯನ್ನು ಒಂದು ವಿಷಯವನ್ನಾಗಿ ಅಳವಡಿಸುವ ಬಗ್ಗೆ ಸರ್ಕಾರದ ಮಟ್ಟ ದಲ್ಲಿ ಪ್ರಯತ್ನ ನಡೆಸುತ್ತೇನೆ’ ಎಂದು ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರಗಳ ಹಾಗೂ ಸಂಸತ್ತಿನ ವ್ಯವಹಾರಗಳ ಖಾತೆ ಸಚಿವ ಅನಂತ ಕುಮಾರ್ ಹೇಳಿದರು.

ತಾಲೂಕಿನ ಮಾದಾಪುರ-ಕಿರಗಸೂರು ಬಳಿ 16 ಕೋಟಿ ರೂ. ವೆಚ್ಚದಡಿ ನಿರ್ಮಾಣ ಗೊಂಡಿದ್ದ ಕೇಂದ್ರಿಯ ವಿದ್ಯಾಲಯದ ನೂತನ ಕಟ್ಟಡವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.ಮಾತೃಭಾಷೆ ಇಲ್ಲದಿದ್ದರೆ ಸಂಸ್ಕೃತಿ ಇಲ್ಲ. ಬದುಕು ಇರುವುದಿಲ್ಲ. ಹಳ್ಳಿ ಬದುಕು ಇರು ವುದೇ ಇಲ್ಲ. ನಮ್ಮ ನೆಲದ ಸೊಗಡನ್ನು, ಸಂಬಂಧವನ್ನು ಎಂದೂ ಕಳೆದುಕೊಳ್ಳ ಬಾರದು. ಹಾಗಾಗಿ, ಕೇಂದ್ರ ಸರ್ಕಾರದ ಕೇಂದ್ರಿಯ ವಿದ್ಯಾಲಯಗಳಲ್ಲಿ ಆಯಾ ರಾಜ್ಯಗಳ ನಾಡಭಾಷೆ (ಮಾತೃಭಾಷೆ) ಯನ್ನು ಒಂದು ಭಾಷೆಯಾಗಿ ಕಲಿಸುವ ಬಗ್ಗೆ ಮಾನವ ಸಂಪನ್ಮೂಲ ಸಚಿವ ಪ್ರಕಾಶ ಜಾವ್ಡೇಕರ್ ಅವರೊಂದಿಗೆ ಮಾತುಕತೆ ನಡೆಸುತ್ತೇನೆ ಎಂದು ತಿಳಿಸಿದರು.

ಶಾಲೆಗಳಲ್ಲಿ ಈಗ ದಿನಕ್ಕೆ 8ಗಂಟೆ ಪಾಠ ಇದೆ. ಇದನ್ನು 4 ಗಂಟೆಗೆ ಇಳಿಸಿ ಉಳಿದ 4 ಗಂಟೆಯಲ್ಲಿ ತಾಂತ್ರಿಕ ಶಿಕ್ಷಣವನ್ನು ಕಲಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಇದು ಕೇಂದ್ರಿಯ ವಿದ್ಯಾಲಯಕ್ಕೂ ಬರಬೇಕಾಗಿದೆ. ಪೋಷಕರು ಹಾಗೂ ಜನ ಪ್ರತಿನಿಧಿಗಳ ಬೇಡಿಕೆಯಾದ ರಾಜ್ಯದ ಕೇಂದ್ರಿಯ ವಿದ್ಯಾಲಯಗಳಲ್ಲಿ ಕನ್ನಡ ಇರಬೇಕು ಎಂಬುದಕ್ಕೆ ನನ್ನ ಸಮ್ಮತಿ ಇದೆ. ಇದನ್ನು ಜಾರಿಗೊಳಿಸಲು ಪ್ರಯತ್ನಿಸುವುದಾಗಿ ಸಚಿವ ಅನಂತಕುಮಾರ್ ಭರವಸೆ ನೀಡಿದರು.

ಚಾಮರಾಜನಗರದ ಕೇಂದ್ರಿಯ ವಿದ್ಯಾ ಲಯ ಸ್ವಂತ ಕಟ್ಟಡ ಹೊಂದಿರುವುದರಿಂದ ಒಂದು ತರಗತಿಗೆ 80 ಮಕ್ಕಳನ್ನು ದಾಖಲಿಸಿಕೊಳ್ಳುವ ಬಗ್ಗೆ (ಪ್ರಸ್ತುತ 40 ಮಕ್ಕಳು ದಾಖಲಾಗಿದ್ದಾರೆ) ಸರ್ಕಾರದಿಂದ ಅನುಮತಿ ಕೊಡಿಸುತ್ತೇನೆ ಎಂದು ಅವರು, ನಗರದ ಕೇಂದ್ರಿಯ ವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಐಎಎಸ್, ಐಪಿಎಸ್ ಸೇರಿದಂತೆ ಉನ್ನತ ಮಟ್ಟದ ಉದ್ಯೋಗವನ್ನು ಅಲಂಕರಿಸಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಕೇಂದ್ರದಲ್ಲಿರುವ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಕಳೆದ 4 ವರ್ಷದಲ್ಲಿ ದೇಶದಲ್ಲಿ 104 ಕೇಂದ್ರಿಯ ವಿದ್ಯಾಲಯ, 63 ನವೋದಯ ಶಾಲೆಗಳನ್ನು ಪ್ರಾರಂಭಿಸಿದೆ. ಚಾಮರಾಜನಗರಕ್ಕೆ ಮತ್ತೊಂದು ನವೋದಯ ಶಾಲೆಯನ್ನು ಮಂಜೂರು ಮಾಡಿಸಿಕೊಡುತ್ತೇನೆ ಎಂದು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎನ್. ಮಹೇಶ್ ಮಾತನಾಡಿ, ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಕೇಂದ್ರಿಯ ವಿದ್ಯಾಲಯ ರಾಷ್ಟ್ರಾದ್ಯಂತ ಏಕ ರೂಪ ಶಿಕ್ಷಣ ತರಲು ಪ್ರಯತ್ನಿಸುತ್ತಿದೆ. ಈ ನಿಟ್ಟಿನಲ್ಲಿ ಒಂದು ಉತ್ತಮ ವೇದಿಕೆಯಾಗಿ ಕೇಂದ್ರಿಯ ವಿದ್ಯಾಲಯ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.

ರಾಜ್ಯದ ಎಲ್ಲಾ 46 ಕೇಂದ್ರಿಯ ವಿದ್ಯಾ ಲಯಗಳಿಗೆ ಭೇಟಿ ನೀಡಿ ಅಲ್ಲಿನ ಶಿಕ್ಷಣ ಪದ್ಧತಿ ಬಗ್ಗೆ ಪರಿಶೀಲಿಸಲು ನಿರ್ಧರಿಸಿದ್ದೇನೆ. ಅಲ್ಲಿನ ಗುಣಮಟ್ಟದ ಶಿಕ್ಷಣ ಪದ್ಧತಿ ಯನ್ನು ರಾಜ್ಯದ ಸರ್ಕಾರಿ ಶಾಲೆಗಳಿಗೆ ಅಳ ವಡಿಸುವ ಬಗ್ಗೆ ಪ್ರಯತ್ನಿಸುತ್ತೇನೆ ಎಂದರು.

ಸಂಸದ ಆರ್.ಧ್ರುವನಾರಾಯಣ ಮಾತನಾಡಿ, ಈ ಕೇಂದ್ರಿಯ ವಿದ್ಯಾಲಯಕ್ಕೆ ಪ್ರತಿವರ್ಷ 40ಮಕ್ಕಳನ್ನು ದಾಖಲಿಸಿ ಕೊಳ್ಳಲು ಅವಕಾಶ ಇತ್ತು. ಈಗ ಸ್ವಂತ ಕಟ್ಟಡ ಹೊಂದಿರುವುದರಿಂದ ಕೊಠಡಿ ಗಳು ಲಭ್ಯ ಇರುವ ಕಾರಣ 80 ಮಕ್ಕಳನ್ನು ದಾಖಲಿಸಿಕೊಳ್ಳಲು ಸರ್ಕಾರದಿಂದ ಅನುಮತಿ ಕೊಡಿಸಬೇಕು. ಪೋಷಕರ ಒತ್ತಾಯದ ಮೇರೆಗೆ ಕೇಂದ್ರಿಯ ವಿದ್ಯಾಲಯಗಳಲ್ಲಿ ಮಾತೃಭಾಷೆಯಾದ ಕನ್ನಡವನ್ನು ಒಂದು ವಿಷಯವಾಗಿ ಅಳವಡಿಸಲು ಕ್ರಮ ಕೈಗೊಳ್ಳಬೇಕು ಹಾಗೂ ಜಿಲ್ಲೆಗೆ ಮತ್ತೊಂದು ನವೋದಯ ಶಾಲೆಯನ್ನು ಮಂಜೂರು ಮಾಡಿಸಬೇಕು ಎಂದು ಅನಂತಕುಮಾರ್ ಅವರಲ್ಲಿ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಶಾಸಕರಾದ ಸಿ.ಎಸ್. ನಿರಂಜನ್‍ಕುಮಾರ್, ಎಸ್.ಎ.ರಾಮದಾಸ್, ಜಿಪಂ ಅಧ್ಯಕ್ಷೆ ಶಿವಮ್ಮ, ಉಪಾಧ್ಯಕ್ಷ ಜೆ. ಯೋಗೇಶ್, ಸದಸ್ಯ ಸಿ.ಎನ್.ಬಾಲರಾಜು, ತಾಪಂ ಅಧ್ಯಕ್ಷೆ ದೊಡ್ಡಮ್ಮ, ಸದಸ್ಯೆ ಪುಷ್ಪ ಲತಾ, ಮಾದಾಪುರ ಗ್ರಾಪಂ ಅಧ್ಯಕ್ಷ ಕೆ.ಎಸ್. ಸಿದ್ದರಾಜು, ಮಾಜಿ ಶಾಸಕರಾದ ಎಸ್.ಬಾಲ ರಾಜು, ಜಿ.ಎನ್.ನಂಜುಂಡಸ್ವಾಮಿ, ಸಿ. ರಮೇಶ್, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ, ಸಿಇಓ ಡಾ.ಕೆ.ಹರೀಶ್ ಕುಮಾರ್, ಎಸ್‍ಪಿ ಧರ್ಮೇಂದ್ರಕುಮಾರ್ ಮೀನಾ, ಬೆಂಗಳೂರು ವಲಯದ ಕೇಂದ್ರಿಯ ವಿದ್ಯಾಲಯ ಉಪ ಆಯುಕ್ತ ಡಾ.ಪಿ.ದೇವ ಕುಮಾರ್, ಪ್ರಾಂಶುಪಾಲ ಡಿ. ಕೆ.ಮಿಶ್ರಾ, ಡಿಡಿಪಿಐ ಮಮತಾ ಇತರರು ಹಾಜರಿದ್ದರು.

ನಾನು ಮೆಚ್ಚಿದ ಸಂಸದ ಧ್ರುವನಾರಾಯಣ!

‘ಚಾಮರಾಜನಗರ ಲೋಕಸಭಾ ಕ್ಷೇತ್ರದ ಅಭಿವೃದ್ಧಿಯ ಕಾರ್ಯಗಳನ್ನು ಮಾಡುತ್ತಿರುವ ಸಂಸದ ಆರ್.ಧ್ರುವನಾರಾಯಣ ನಾನು ಮೆಚ್ಚಿದ ಸಂಸದ’ ಎಂದು ಕೇಂದ್ರ ಸಚಿವ ಅನಂತಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಧ್ರುವನಾರಾಯಣ ಅವರು ಅಭಿವೃದ್ಧಿಯ ಚಿಂತನೆಯನ್ನು ನಡೆಸುವ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದರು.

ಬಿಎಸ್‍ಪಿ ರಾಷ್ಟ್ರೀಯ ಅಧ್ಯಕ್ಷೆ ಮಾಯವತಿ ಅವರಿಗೂ ನನಗೂ ಪರಸ್ಪರ ಸ್ನೇಹವಿದೆ. ಅದೇ ಸ್ನೇಹ ಸಚಿವ ಎನ್.ಮಹೇಶ್ ಅವರೊಂದಿಗೆ ಇರುವುದರಿಂದ ನಾನು ಮಹೇಶ್ ಅವರನ್ನು ಅಣ್ಣ ಮಹೇಶ್ ಎಂದೇ ಕರೆಯುತ್ತೇನೆ ಎಂದು ಹೇಳಿದರು.

ಎಸ್‍ಎಸ್‍ಎಲ್‍ಸಿಯಲ್ಲಿ ನಾನು ಜಸ್ಟ್ ಪಾಸ್!

ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ನಾನು ಜಸ್ಟ್ ಪಾಸ್… ನಾನು ಎಲ್ಲಾ ವಿಷಯಗಳಲ್ಲೂಗಳಿಸಿದ ಅಂಕ 35… ಎಂದು ಕೇಂದ್ರ ಸಚಿವ ಅನಂತಕುಮಾರ್ ಎಸ್‍ಎಸ್‍ಎಲ್‍ಸಿಯಲ್ಲಿ ಅವರು ಪಡೆದ ಅಂಕವನ್ನು ಬಹಿರಂಗಪಡಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಶಿಕ್ಷಣ ಪಡೆಯುವಾಗ ಒಂದನೇ ತರಗತಿಯಿಂದ 4ನೇ ತರಗತಿ ವರೆಗೆ ಒಂದೇ ಶೆಡ್‍ನಲ್ಲಿ ತರಗತಿಗಳು ನಡೆಯುತ್ತಿತ್ತು. 4ನೇ ತರಗತಿಯವರಿಗೆ ಪಾಠ ಮಾಡುತ್ತಿದ್ದರೇ 3ನೇ ತರಗತಿಯವರೆಗೆ, 3ನೇ ತರಗತಿಯವರಿಗೆ ಪಾಠ ಮಾಡುತ್ತಿದ್ದರೇ 2ನೇ ತರಗತಿಯವರಿಗೆ ಕೇಳುತ್ತಿತ್ತು. ಒಂದನೇ ತರಗತಿ ಮಕ್ಕಳ ಸ್ಥಿತಿಯಂತೂ ಹೇಳತೀರದಂತಿತ್ತು ಎಂದು ಹಳೆಯ ನೆನಪನ್ನು ಬಿಚ್ಚಿಟ್ಟರು.

ನನ್ನ ಬ್ಯಾಚ್‍ನಲ್ಲಿ ಎಸ್‍ಎಸ್‍ಎಲ್‍ಸಿ ಪಾಸ್ ಮಾಡಿದ್ದು ನಾನೊಬ್ಬನೇ ಎಲ್ಲಾ ಮೇಷ್ಟ್ರ್ಟುಗಳು ಬಂದು ನನ್ನನ್ನು ಅಪ್ಪಿಕೊಂಡರು. ಆದರೆ, ನನ್ನ ಎಲ್ಲಾ ವಿಷಯಗಳಲ್ಲಿ ತೆಗೆದುಕೊಂಡಿದ್ದು ತಲಾ 35 ಅಂಕ ಮಾತ್ರ. ಅಂದರೆ ನಾನು ಆಗಿದ್ದು ಜಸ್ಟ್ ಪಾಸ್. ಯಾವುದೇ ವಿಷಯದಲ್ಲಿ ನಾನು 36 ಅಥವಾ 34 ಅಂಕವನ್ನು ಗಳಿಸಿಲ್ಲ ಎಂದ ಅವರು, ನೀವು ಹಾಗೆ ಮಾಡುವುದು ಬೇಡ. ಎಲ್ಲಾ ವಿಷಯಗಳಲ್ಲಿ ಶೇ.80ಕ್ಕಿಂತ ಹೆಚ್ಚು ಅಂಕ ಗಳಿಸಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಬೆಂಗಳೂರಿನಲ್ಲಿಯೇ ಏರ್ ಶೋ: ಕೇಂದ್ರ ಸಚಿವ ಅನಂತ್‍ಕುಮಾರ್

‘ಬೆಂಗಳೂರಿನಿಂದ ಲಕ್ನೋಗೆ ಯಾವುದೇ ಕಾರಣಕ್ಕೂ ಏರ್ ಶೋ ಸ್ಥಳಾಂತರ ಆಗು ವುದಿಲ್ಲ. ಇದೊಂದು ವದಂತಿ’ ಎಂದು ಕೇಂದ್ರ ಸಚಿವ ಅನಂತಕುಮಾರ್ ಹೇಳಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಏರ್ ಶೋ ಬೆಂಗಳೂರಿನಿಂದ ಸ್ಥಳಾಂತರ ಗೊಳ್ಳಲಿದೆ ಎಂದು ಕಳೆದ ಬಾರಿಯೂ ಸಹ ವದಂತಿ ಹಬ್ಬಿತ್ತು. ಅದೇ ರೀತಿ ಈ ಬಾರಿಯೂ ಲಕ್ನೋಗೆ ಸ್ಥಳಾಂತರಗೊಳ್ಳುತ್ತದೆ ಎಂದು ವದಂತಿ ಹಬ್ಬಿದೆ. ಆದರೆ, ಏರ್ ಶೋ ಬೆಂಗಳೂರಿನಿಂದ ಸ್ಥಳಾಂತರವಾಗುವುದಿಲ್ಲ. ಈ ಬಗ್ಗೆ ರಕ್ಷಣಾ ಸಚಿ ವಾಲಯದಿಂದ ಸ್ಪಷ್ಟವಾಗಿ ಆದೇಶ ಬಂದಿದೆ ಎಂದರು. ನಮ್ಮಲ್ಲಿ ಏರ್ ಶೋ ನಡೆಸಲು ಮೂಲ ಸೌಕರ್ಯಗಳೇ ಇಲ್ಲ ಎಂದು ಲಕ್ನೋ ಅಧಿಕಾರಿಗಳು ಸಹ ಪತ್ರ ಬರೆದಿದ್ದಾರೆ. ಹಾಗಾಗಿ, ಬೆಂಗಳೂರಿನಲ್ಲಿ ಏರ್ ಶೋ ನಡೆಯಲಿದೆ ಎಂದು ಸ್ಪಷ್ಟಪಡಿಸಿದರು.

Translate »