ಮೈಸೂರು: ಮೈಸೂರು ಕುರುಬಾರಹಳ್ಳಿ ಸರ್ವೆ ನಂ.4 ಹಾಗೂ ಆಲನಹಳ್ಳಿ ಸರ್ವೆ ನಂ.41ರ ವ್ಯಾಪ್ತಿಗೆ ಬರುವ ಸಿಐಟಿಬಿ ಮತ್ತು ಮುಡಾ ಅಭಿ ವೃದ್ಧಿಪಡಿಸಿದ ಬಡಾವಣೆಗಳನ್ನು ಬಿ ಖರಾಬಿನಿಂದ ಮುಕ್ತಗೊಳಿಸಬೇಕೆಂಬ ಸಾವಿರಾರು ನಿವಾಸಿಗಳ ಮೊರೆಗೆ ಸರ್ಕಾರದಿಂದ ಕೊನೆಗೂ ಮುಕ್ತಿ ದೊರೆ ಯುವ ದಿನಗಳು ಸಮೀಪಿಸಿದ್ದು, ಮೈಸೂರು ಜಿಲ್ಲಾಧಿಕಾರಿಗಳು ದೊಡ್ಡ ಮನಸ್ಸು ಮಾಡಿದರೆ ಒಂದೆರಡು ದಿನದಲ್ಲೇ ಪರಿಹಾರ ಸಾಧ್ಯವಿದೆ.
ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ಕುರುಬಾರ ಹಳ್ಳಿ ಸರ್ವೆ ನಂ. 4ರ ವ್ಯಾಪ್ತಿಯ ಸಿದ್ಧಾರ್ಥನಗರ, ವಿದ್ಯಾನಗರ, ಆಲನ ಹಳ್ಳಿ ಸರ್ವೆ ನಂ. 41ರ ವ್ಯಾಪ್ತಿಯ ಆಲನಹಳ್ಳಿ, ಕೆಸಿ ನಗರ, ಜೆಸಿ ನಗರ, ಆದಾಯ ತೆರಿಗೆ ಬಡಾವಣೆಗಳನ್ನು ಬಿ ಖರಾಬಿನಿಂದ ಕೈಬಿಡುವ ವಿಚಾರ ದಲ್ಲಿ ಮುಂದಿನ ಸೂಕ್ತ ಕ್ರಮ ತೆಗೆದು ಕೊಳ್ಳುವಂತೆ ಮೈಸೂರು ನಗರಾಭಿ ವೃದ್ಧಿ ಪ್ರಾಧಿಕಾರದ ಆಯುಕ್ತರಿಗೆ ಮುಖ್ಯಮಂತ್ರಿಯವರ ಸಚಿವಾಲಯ ಪತ್ರ ಸಂಖ್ಯೆ: ಅಒ/52430/ಖಇP-4ಇಒ/2018 ದಿನಾಂಕ 17/09/2018 ಮುಖೇನ ತಿಳಿಸಿದೆ. ಈ ಮಾಹಿತಿ ಯನ್ನು ಮುಖ್ಯಮಂತ್ರಿ ಯವರ ಉಪ ಕಾರ್ಯ ದರ್ಶಿ ಅರುಣ್ ಫುರ್ಟಾಡೋ ಅವರು, ಕುರುಬಾರಹಳ್ಳಿ ಸರ್ವೆ ನಂ.4 ಹಾಗೂ ಆಲನಹಳ್ಳಿ ಸರ್ವೆ ನಂ.41ರ ವ್ಯಾಪ್ತಿಯ ಸಿಐಟಿಬಿ ಹಾಗೂ ಮುಡಾ ಅಭಿ ವೃದ್ಧಿಪಡಿಸಿದ ಬಡಾವಣೆಗಳ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರೂ ಆದ ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯ ಮತ್ತು ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬಿ.ಪಿ.ಮಂಜುನಾಥ್ ಅವರಿಗೆ ನೀಡಿದ್ದಾರೆ.
ಆದರೆ ವಿಷಯ ಪೂರ್ಣ ಪ್ರಮಾಣ ದಲ್ಲಿ ಕಂದಾಯ ಇಲಾಖೆ ವ್ಯಾಪ್ತಿಗೆ ಬರು ವುದರಿಂದಲೂ ಅಲ್ಲದೆ, ಮೈಸೂರು ಜಿಲ್ಲಾಧಿ ಕಾರಿಗಳು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವುದರಿಂದ ಅವರಿಗೆ ಪತ್ರವನ್ನು ಸಲ್ಲಿಸಿರುವುದಾಗಿ ಮುಡಾ ಆಯುಕ್ತರಾದ ಪಿ.ಎಸ್. ಕಾಂತರಾಜು ತಿಳಿಸಿದ್ದಾರೆ. ಆದರೆ ಈ ಸಂಬಂಧ ಯಾವುದೇ ಪತ್ರ ಈವರೆಗೆ ತಲುಪಿಲ್ಲವೆಂದು ಜಿಲ್ಲಾಧಿಕಾರಿ ಅಭಿರಾಂ ಜಿ. ಶಂಕರ್ ‘ಮೈಸೂರು ಮಿತ್ರ’ನಿಗೆ ಸ್ಪಷ್ಟಪಡಿಸಿದ್ದಾರೆ.
ಕಳೆದ ಮೂರು ವರ್ಷದ ಹಿಂದೆ ಕೆಲವೊಂದು ದೂರು ಆಧರಿಸಿ ನ್ಯಾಯಾಲಯ ಹಾಗೂ ಸರ್ಕಾರದ ಆದೇಶದ ಮೇರೆಗೆ ಅಂದು ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಸಿ.ಶಿಖಾ ಅವರು ಕುರುಬಾರಹಳ್ಳಿ ಸರ್ವೆ ನಂ.4 ಹಾಗೂ ಆಲನಹಳ್ಳಿ ಸರ್ವೆ ನಂ.41ರ ವ್ಯಾಪ್ತಿಯ ಭೂಮಿಯನ್ನು ಬಿ ಖರಾಬು (ಸರ್ಕಾರಿ ಭೂಮಿ) ಎಂದು ಆದೇಶ ಹೊರಡಿಸಿದ್ದರು. ಅಂದಿನಿಂದಲೂ ಈ ಸರ್ವೆ ನಂಬರ್‍ಗಳ ವ್ಯಾಪ್ತಿಯಲ್ಲಿ ಬರುವ ಸಿಐಟಿಬಿ ಹಾಗೂ ಮುಡಾ ಅಭಿವೃದ್ಧಿಪಡಿಸಿದ ಸಿದ್ಧಾರ್ಥನಗರ, ವಿದ್ಯಾನಗರ, ಕೆಸಿ ನಗರ, ಜೆಸಿ ನಗರ, ಆಲನಹಳ್ಳಿ ಹಾಗೂ ಆದಾಯ ತೆರಿಗೆ ಬಡಾವಣೆ ನಿವಾಸಿಗಳಿಗೆ ನಿವೇಶನ, ಮನೆ, ಆಸ್ತಿಗೆ ಸಂಬಂಧಿಸಿದ ದಾಖಲಾತಿ ವಿಲೇವಾರಿಯನ್ನು ಮುಡಾ ಹಾಗೂ ನಗರ ಪಾಲಿಕೆ ಸ್ಥಗಿತಗೊಳಿಸಿದ್ದವು. ಇದರಿಂದಾಗಿ ತಮ್ಮ ಆಸ್ತಿಯನ್ನು ಮಾರಾಟ ಮಾಡಲು, ಅವುಗಳ ಮೇಲೆ ಬ್ಯಾಂಕಿನಿಂದ ಸಾಲ ಪಡೆಯಲು ಸಾಧ್ಯವಾಗದೆ, ನಿವೇಶನಗಳಲ್ಲಿ ಕಟ್ಟಡ ನಿರ್ಮಿಸಲು ನಕ್ಷೆ ಅನುಮೋದನೆಯಾಗದೆ ನಿವಾಸಿಗಳು ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದರು. ಕುರುಬಾರಹಳ್ಳಿ ಮತ್ತು ಆಲನಹಳ್ಳಿ ಈ ಸರ್ವೆ ನಂಬರ್‍ಗಳಲ್ಲಿ ಬರುವ ಸಿಐಟಿಬಿ ಹಾಗೂ ಮುಡಾ ಅಭಿವೃದ್ಧಿಪಡಿಸಿದ ಬಡಾವಣೆಗಳನ್ನು ಬಿ ಖರಾಬಿನಿಂದ ಮುಕ್ತಗೊಳಿಸುವಂತೆ ಕ್ಷೇಮಾಭಿವೃದ್ಧಿ ಸಂಘ ರಚಿಸಿಕೊಂಡು ಬಿಜೆಪಿ ಮುಖಂಡರೂ ಆದ ಬಿ.ಪಿ.ಮಂಜುನಾಥ್ ನೇತೃತ್ವದಲ್ಲಿ ಹಲವು ಬಾರಿ ಲಲಿತ ಮಹಲ್ ರಸ್ತೆಯಲ್ಲಿ ರಸ್ತೆ ತಡೆ, ಮುಡಾ ಮುಂದೆ ಧರಣಿ ಸಹ ನಡೆಸಲಾಗಿತ್ತು.
ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಸ್ಯೆ ಪರಿಹರಿಸುವಂತೆ ಸಂಬಂಧಪಟ್ಟ ಅಧಿಕಾರಿ ವರ್ಗಕ್ಕೆ ಆದೇಶವನ್ನೂ ನೀಡಿದ್ದರು. ಅಂತಿಮವಾಗಿ ತಮ್ಮದೇ ಅಧಿಕಾರಾವಧಿಯಲ್ಲಿ ಕ್ಯಾಬಿನೆಟ್ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿ, ಕುರುಬಾರಹಳ್ಳಿ ಮತ್ತು ಆಲನಹಳ್ಳಿ ಸರ್ವೆ ನಂಬರ್‍ಗಳ ವ್ಯಾಪ್ತಿಯಲ್ಲಿ ಬರುವ ಸಿಐಟಿಬಿ, ಮುಡಾ ಅಭಿವೃದ್ಧಿಪಡಿಸಿದ ಬಡಾವಣೆಗಳನ್ನು ಬಿ ಖರಾಬಿನಿಂದ ಕೈಬಿಡುವ ನಿರ್ಧಾರವನ್ನು ಕೈಗೊಂಡು, ಸಂಪುಟದ ಈ ನಿರ್ಣಯವನ್ನು ನ್ಯಾಯಾಲಯದ ಗಮನಕ್ಕೆ ತಂದು ಅನುಷ್ಟಾನಕ್ಕೆ ತರುವಂತೆ ನಿರ್ಧರಿಸಲಾಗಿತ್ತು. ಈ ಮಧ್ಯೆ ಚುನಾವಣೆ ಎದುರಾದ ಹಿನ್ನೆಲೆಯಲ್ಲಿ ಸಂಪುಟ ನಿರ್ಣಯ ನೆನೆಗುದಿಗೆ ಬಿದ್ದಿತ್ತು. ಅಂತಿಮವಾಗಿ ಹಾಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೂ ಮೈಸೂರಿನ ಜೆಎಸ್‍ಎಸ್ ಶಾಖಾ ಮಠದಲ್ಲಿ ಇತ್ತೀಚೆಗೆ ಬಿ.ಪಿ.ಮಂಜುನಾಥ್ ನೇತೃತ್ವದಲ್ಲಿ ನಿವಾಸಿಗಳು ಮನವಿಯನ್ನು ಸಲ್ಲಿಸಿದರು. ಸಮಸ್ಯೆಗೆ ಸದ್ಯದಲ್ಲೇ ಪರಿಹಾರ ಕಲ್ಪಿಸುವುದಾಗಿ ಕುಮಾರಸ್ವಾಮಿ ಅವರು ನಿವಾಸಿಗಳಿಗೆ ಭರವಸೆ ನೀಡಿದ್ದರು.