ಅನ್ನದಾತನ ಮನೆ ಬಾಗಿಲಿಗೆ ಸಾಲ ಮನ್ನಾ ಋಣಮುಕ್ತ ಪತ್ರ
ಮೈಸೂರು

ಅನ್ನದಾತನ ಮನೆ ಬಾಗಿಲಿಗೆ ಸಾಲ ಮನ್ನಾ ಋಣಮುಕ್ತ ಪತ್ರ

September 25, 2018

ಬೆಂಗಳೂರು: ಸಹಕಾರಿ ಸಂಸ್ಥೆಗಳಲ್ಲಿ ರೈತರು ಪಡೆದ ಕೃಷಿ ಸಾಲ ಮನ್ನಾದ ಋಣಮುಕ್ತ ಪತ್ರ ದಸರಾ-ದೀಪಾವಳಿ ಕೊಡುಗೆಯಾಗಿ ಫಲಾನುಭವಿಗಳ ಮನೆ ಬಾಗಿಲಿಗೆ ತಲುಪಲಿದೆ.

ಬ್ಯಾಂಕ್‍ಗಳಲ್ಲಿ ಠೇವಣಿ ಇಟ್ಟು ಸಾಲ ಪಡೆದಿರುವ ರೈತರ ಕೃಷಿ ಸಾಲ ಮನ್ನಾ ಮಾಡುವ ಮಹತ್ವದ ನಿರ್ಧಾರವನ್ನು ಸರ್ಕಾರ ಪ್ರಕಟಿಸಿದೆ. ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸಹಕಾರಿ ಸಚಿವ ಬಂಡೆಪ್ಪ ಕಾಶಂಪೂರ್, ಸಹಕಾರಿ ಸಂಸ್ಥೆಗಳಲ್ಲಿ 22 ಲಕ್ಷ ರೈತರು ಪಡೆದಿರುವ 17,000 ಕೋಟಿ ರೂ.ಗಳನ್ನು ಅಕ್ಟೋಬರ್ 15ರ ವೇಳೆಗೆ ಮನ್ನಾ ಮಾಡಿ ಹಬ್ಬದ ಉಡು ಗೊರೆಯಾಗಿ ಋಣಮುಕ್ತ ಪತ್ರ ರೈತರ ಮನೆ ಬಾಗಿಲಿಗೆ ಸೇರಲಿದೆ. ಸಾಲ ಮನ್ನಾ ಆಗುತ್ತಿ ದ್ದಂತೆ ಅದೇ ರೈತರಿಗೆ ಹೊಸ ಸಾಲ ವಿತರಿ ಸಲು ಸರ್ಕಾರ ಕ್ರಮ ಕೈಗೊಂಡಿರುವುದಲ್ಲದೆ, ಇನ್ನೂ ಹೊಸದಾಗಿ 15 ಲಕ್ಷ ರೈತರಿಗೆ ಇನ್ನೊಂದು ವರ್ಷದಲ್ಲಿ ಸಾಲ ನೀಡಲಾಗುವುದೆಂದು ತಿಳಿಸಿದರು.

ಹಣಕಾಸು ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಮುಂಗಡ ಪತ್ರದಲ್ಲಿ ಸಾಲ ಮನ್ನಾ ನಿರ್ಧಾರ ಪ್ರಕಟಿಸಿದ್ದರಾದರೂ ಮನ್ನಾದ ಮಾರ್ಗಸೂಚಿ ಹೊರಬಿದ್ದಿಲ್ಲ ಎಂಬ ಅಪಸ್ವರ ಕೇಳಿಬಂದಿತ್ತು. ಸಾಲ ಪ್ರಮಾಣದ ಸಂಪೂರ್ಣ ಮಾಹಿತಿ ಲಭ್ಯವಾಗಿದ್ದು, ಇದೀಗ ಎಲ್ಲಾ ಸಹಕಾರಿ ಬ್ಯಾಂಕ್ ಗಳಿಗೂ ಸಾಲ ಮನ್ನಾದ ಮಾರ್ಗಸೂಚಿ ರವಾನಿಸಲಾಗಿದೆ. ವಾಣಿಜ್ಯ ಬ್ಯಾಂಕ್‍ಗಳಲ್ಲಿ ರೈತರು ಪಡೆದಿರುವ 30,000 ಕೋಟಿ ರೂ.ಗೂ ಹೆಚ್ಚು ಕೃಷಿ ಸಾಲ ಮನ್ನಾ ಪ್ರಕ್ರಿಯೆಯೂಆರಂಭಗೊಂಡಿದೆ. ಮೊದಲ ಹಂತದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಡಳಿತದಲ್ಲಿ ಪ್ರಕಟಿಸಿದ್ದ ಕೃಷಿ ಸಾಲ ಒಳಗೊಂಡಂತೆ ನಮ್ಮ ಮುಖ್ಯಮಂತ್ರಿ ಅವರು ಪ್ರಕಟಿಸಿದ ಚಾಲ್ತಿ ಸಾಲವೂ ಸೇರಿ ಎಲ್ಲಾ ಕೃಷಿ ಸಾಲಗಳು ಮನ್ನಾ ಆಗಲಿವೆ.

ಎರಡು ಲಕ್ಷ ರೂ.ಗಿಂತ ಹೆಚ್ಚು ಸಾಲ ಪಡೆದಿರುವ 2.65 ಲಕ್ಷ ರೈತರು ತಮ್ಮ ಹೆಚ್ಚಿನ ಮೊತ್ತದ ಸಾಲವನ್ನು ಸಂಬಂಧಪಟ್ಟ ಸಂಸ್ಥೆಗಳಿಗೆ ಪಾವತಿಸಿ ಸರ್ಕಾರದ ಸಾಲ ಮನ್ನಾ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ. ಬ್ಯಾಂಕ್‍ಗಳಲ್ಲಿ ಠೇವಣಿ ಇಟ್ಟ ರೈತರನ್ನು ಸಾಲ ಮನ್ನಾ ವ್ಯಾಪ್ತಿಗೆ ತರದಿರಲು ಈ ಮೊದಲು ನಿರ್ಧಾರ ಕೈಗೊಳ್ಳಲಾಗಿತ್ತು. ಆದರೆ ಇದೀಗ ಈ ತಿಂಗಳ 14ರಂದು ಹೊರಡಿಸಿದ್ದ ಆದೇಶಕ್ಕೆ ತಿದ್ದುಪಡಿ ತಂದು ಹೊಸದಾಗಿ ಆದೇಶ ಮಾಡಲಾಗಿದೆ. ರೈತರು ಎಷ್ಟೇ ಮೊತ್ತದ ಠೇವಣಿ ಇಟ್ಟಿದ್ದರೂ ಸಾಲ ಮನ್ನಾ ಯೋಜನೆ ವ್ಯಾಪ್ತಿಗೆ ಒಳಪಡಲಿದ್ದಾರೆ, ಆದರೆ ಸರ್ಕಾರಿ ನೌಕರರು, ವೇತನದಾರರು, ಆದಾಯ ತೆರಿಗೆ ಪಾವತಿಸುವವರು ಸಾಲ ಮನ್ನಾ ವ್ಯಾಪ್ತಿಗೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಸಹಕಾರಿ ಸಂಸ್ಥೆಗಳಿಗೆ ಜುಲೈ 2019 ರವರೆಗೆ ರೈತರು ಪಾವತಿಸಬೇಕಿರುವ ಸಾಲದ ಕಂತು ಆಯಾ ತಿಂಗಳಿನಲ್ಲಿ ಸರ್ಕಾರ ಬ್ಯಾಂಕ್‍ಗಳಿಗೆ ತಲುಪಿಸಲಿದೆ ಎಂದರು.

Translate »