ಕಾರು ಅಪಘಾತದಲ್ಲಿ ನಟರಾದ ದರ್ಶನ್, ದೇವರಾಜ್, ಪ್ರಜ್ವಲ್‍ಗೆ ಗಾಯ
ಮೈಸೂರು

ಕಾರು ಅಪಘಾತದಲ್ಲಿ ನಟರಾದ ದರ್ಶನ್, ದೇವರಾಜ್, ಪ್ರಜ್ವಲ್‍ಗೆ ಗಾಯ

September 25, 2018

ಮೈಸೂರು: ಮೈಸೂರಿನ ಹೆಬ್ಬಾಳು ಬಳಿ ರಿಂಗ್ ರಸ್ತೆಯಲ್ಲಿ ಇಂದು ಮುಂಜಾನೆ ನಡೆದ ಕಾರು ಅಪಘಾತದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಸೇರಿದಂತೆ ನಾಲ್ವರು ಕನ್ನಡ ಚಲನಚಿತ್ರ ನಟರು ತೀವ್ರವಾಗಿ ಗಾಯಗೊಂಡಿದ್ದಾರೆ.

ದರ್ಶನ್ ತೂಗುದೀಪ, ದೇವರಾಜ್, ಪ್ರಜ್ವಲ್ ದೇವರಾಜ್ ಹಾಗೂ ರಾಯ್ ಆಂಟನಿ ಅಪಘಾತದಲ್ಲಿ ಗಾಯಗೊಂಡವರಾಗಿದ್ದು, ಅವರನ್ನು ಮೈಸೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಎಲ್ಲರಿಗೂ ಶಸ್ತ್ರಚಿಕಿತ್ಸೆ ನೆರವೇರಿಸ ಲಾಗಿದೆ. ದರ್ಶನ್ ಅವರ ಬಲಗೈ ಮೂಳೆ ಮುರಿದಿದ್ದು, ತೋಳಿಗೂ ಗಾಯವಾಗಿದೆ. ದೇವರಾಜ್ ಅವರ ಎಡಗೈ ಬೆರಳಿನ ತುದಿ ತುಂಡರಿಸಿರುವುದಲ್ಲದೆ, ಬೆನ್ನು, ಕುತ್ತಿಗೆ ಭಾಗಕ್ಕೆ ಗಾಯವಾಗಿದೆ. ಪ್ರಜ್ವಲ್ ದೇವರಾಜ್ ಅವರಿಗೂ ಕೈ ಮತ್ತು ಕಾಲಿಗೆ ಗಾಯ ವಾಗಿದೆ. ರಾಯ್ ಆಂಟನಿ ಬಲಗೈ ಮೂಳೆ ಮುರಿದಿದ್ದು, ಎಲ್ಲರನ್ನೂ ಶಸ್ತ್ರ ಚಿಕಿತ್ಸೆ ಗೊಳಪಡಿಸಿದ ನಂತರ ಇದೀಗ ವಾರ್ಡ್‍ಗಳಿಗೆ ಸ್ಥಳಾಂತರ ಮಾಡಲಾಗಿದೆ ಎಂದು ಕೊಲಂಬಿಯಾ ಏಷಿಯಾ ಆಸ್ಪತ್ರೆ ಮುಖ್ಯಸ್ಥರೂ ಆದ ಹೃದ್ರೋಗ ತಜ್ಞ ಡಾ. ಉಪೇಂದ್ರ ಶೆಣೈ ಸುದ್ದಿಗಾರರಿಗೆ ಮಾಹಿತಿ ನೀಡಿದರು. `ಒಡೆಯ’ ಚಿತ್ರದ ಚಿತ್ರೀಕರಣಕ್ಕಾಗಿ ಚಿತ್ರ ತಂಡದೊಂದಿಗೆ ಮೈಸೂರಿಗೆ ಆಗಮಿಸಿದ್ದ ದರ್ಶನ್ ಸೇರಿದಂತೆ ನಾಲ್ವರು ನಟರು ಇಲ್ಲಿನ ಖಾಸಗಿ ಹೋಟೆಲಿನಲ್ಲಿ ಭಾನುವಾರ ವಾಸ್ತವ್ಯ ಹೂಡಿದ್ದರು.

ಮಧ್ಯರಾತ್ರಿಯವರೆಗೂ ಸ್ಥಳೀಯ ರಾಜಕೀಯ ಮುಖಂಡರೂ, ಸ್ನೇಹಿತರೊಂದಿಗಿದ್ದ ದರ್ಶನ್ ತಂಡವು ಮುಂಜಾನೆ ಆಡಿ ಕ್ಯೂ-7 (ಕೆಎ-51, ಝಡ್-7999) ಕಾರಿನಲ್ಲಿ ಬೆಂಗಳೂರಿನತ್ತ ಪ್ರಯಾಣಿಸುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿದ ಕಾರು ಹೆಬ್ಬಾಳು ಬಳಿಯ ಜೆಎಸ್‍ಎಸ್ ಅರ್ಬನ್ ಹಾತ್ ಎದುರು ರಿಂಗ್ ರಸ್ತೆಯ ಸರ್ವೀಸ್ ರೋಡ್ ಮತ್ತು ರಿಂಗ್ ರಸ್ತೆ ನಡುವಿನ ವಿಭಜಕಕ್ಕೆ ಡಿಕ್ಕಿ ಹೊಡೆದು ಉರುಳಿ ಬಿದ್ದಿದೆ.

ಪರಿಣಾಮ ಕಾರಿನಲ್ಲಿದ್ದ ನಟ ದರ್ಶನ್, ದೇವರಾಜ್, ಪ್ರಜ್ವಲ್ ದೇವರಾಜ್ ಹಾಗೂ ರಾಯ್ ಆಂಟನಿ ಅವರು ತೀವ್ರವಾಗಿ ಗಾಯಗೊಂಡು ಒದ್ದಾಡುತ್ತಿದ್ದಾಗ ವಿಷಯ ತಿಳಿದ ದರ್ಶನ್ ಸ್ಥಳೀಯ ಸ್ನೇಹಿತರು ಅವರನ್ನು ಬೇರೆ ವಾಹನಗಳಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿಯ ಟೋಲ್ ಗೇಟ್ ಬಳಿ ಇರುವ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ಕರೆದೊಯ್ದು ದಾಖಲು ಮಾಡಿದರು. ರಾಯ್ ಆಂಟನಿ ಕಾರು ಚಾಲನೆ ಮಾಡುತ್ತಿದ್ದು, ದರ್ಶನ್ ಮುಂದಿನ ಎಡ ಸೀಟಿನಲ್ಲಿ ಕುಳಿತಿದ್ದರು. ದೇವರಾಜ್ ಮತ್ತವರ ಮಗ ಪ್ರಜ್ವಲ್ ದೇವರಾಜ್ ಕಾರಿನ ಹಿಂಬದಿ ಸೀಟಿನಲ್ಲಿ ಕುಳಿತಿದ್ದರು ಎಂದು ಹೇಳಲಾಗುತ್ತಿದೆ.

ಘಟನೆಯ ವಿಷಯ ತಿಳಿಯುತ್ತಿದ್ದಂತೆಯೇ ವಿವಿ ಪುರಂ ಸಂಚಾರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದರಾದರೂ ಸ್ವಯಂ ಅಪಘಾತ (ಸೆಲ್ಫ್ ಆಕ್ಸಿಡೆಂಟ್) ಆಗಿರುವುದರಿಂದ ನಾವೇ ಚಿಕಿತ್ಸೆ ಪಡೆದುಕೊಳ್ಳುತ್ತೇವೆ. ಕೇಸು ವಗೈರೆ ಏನೂ ಬೇಡ ಎಂದು ಹೇಳಿದ ನಟರು, ತಕ್ಷಣವೇ ವಾಹನವನ್ನು ತಮ್ಮ ಸ್ನೇಹಿತರ ಮೂಲಕ ಬೆಂಗಳೂರಿಗೆ ಟೋಲ್ ಮಾಡಿಸಿಕೊಂಡು ಹೋದರು ಎಂದು ಪೊಲೀಸರು ತಿಳಿಸಿದ್ದಾರೆ. ಅಪಘಾತದ ವಿಷಯ ತಿಳಿಯುತ್ತಿದ್ದಂತೆಯೇ ಮಾಧ್ಯಮ ಪ್ರತಿನಿಧಿಗಳು, ಗಣ್ಯರು ಆಸ್ಪತ್ರೆ ಬಳಿ ಜಮಾಯಿಸತೊಡಗಿದಾಗ ಪರಿಸ್ಥಿತಿಯ ಗಂಭೀರತೆ ಅರಿತ ಪೊಲೀಸರು, ಅಪಘಾತ ನಡೆದ ಸ್ಥಳ ಮಹಜರು ನಡೆಸಿದ ನಂತರ ಗಾಯಾಳು ನಟರ ಹೇಳಿಕೆ ದಾಖಲಿಸಿಕೊಂಡು ಅತಿವೇಗ, ಅಜಾಗರೂಕ ಚಾಲನೆಯಡಿ ಪ್ರಕರಣ ದಾಖಲಿಸಿಕೊಂಡು ಸ್ಥಳದಿಂದ ಕೊಂಡೊಯ್ದಿದ್ದ ಅಪಘಾತಕ್ಕೀಡಾದ ಆಡಿ ಕಾರನ್ನು ಠಾಣೆಗೆ ತರಿಸಿಕೊಂಡರು. ಪ್ರಕರಣ ದಾಖಲಿಸಿಕೊಂಡಿರುವ ವಿವಿ ಪುರಂ ಸಂಚಾರ ಠಾಣೆ ಇನ್ಸ್‍ಪೆಕ್ಟರ್ ಸಿ.ವಿ. ರವಿ ಅವರು ತನಿಖೆ ನಡೆಸುತ್ತಿದ್ದಾರೆ.

ಮಳೆಯಿಂದ ಅಪಘಾತವೇ… ಕಡಗದಿಂದ ದರ್ಶನ್ ಕೈ ಮೂಳೆ ಮುರಿಯಿತೇ..?

ಮೈಸೂರು: ಇಂದು ಮುಂಜಾನೆ ಸುರಿದ ಭಾರೀ ಮಳೆಯಿಂದಾಗಿ ನಟ ದರ್ಶನ್ ಹಾಗೂ ಇತರರಿದ್ದ ಕಾರು ಅಪಘಾತ ಸಂಭವಿಸಿತೇ?, ವಿಷ್ಣುವರ್ಧನ್ ಮಾದರಿ ಕೈಗೆ ಕಡಗ ಧರಿಸಿದ್ದರಿಂದ ನಟ ದರ್ಶನ್ ಬಲಗೈ ಮೂಳೆ ಮುರಿಯಿತೆ? ಎಂಬ ಪ್ರಶ್ನೆ ಉದ್ಭವವಾಗಿದೆ.

ಆಡಿ ಕಾರಿನಲ್ಲಿ ಹೋಗುತ್ತಿದ್ದಾಗ ಇಂದು ಮುಂಜಾನೆ ಸುಮಾರು 2.30 ಗಂಟೆಗೆ ಮೈಸೂರಿನ ಜೆಎಸ್‍ಎಸ್ ಅರ್ಬನ್‍ಹಾತ್ ಎದುರಿನ ಕ್ರಾಸ್, ರಿಂಗ್ ರಸ್ತೆಯಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು, ಉರುಳಿ ಬಿದ್ದಿದೆ. ಆ ವೇಳೆ ಧಾರಾಕಾರ ಸುರಿಯುತ್ತಿದ್ದ ಮಳೆಯೂ ದುರಂತಕ್ಕೆ ಕಾರಣವಿರಬಹುದೆಂದು ಶಂಕಿಸಲಾಗಿದೆ.
ಅಪಘಾತದಲ್ಲಿ ನಟ ದರ್ಶನ್ ಅವರ ಬಲಗೈನ ಮೂಳೆ ಮುರಿದಿದ್ದು, ಅದಕ್ಕೆ ಅವರು ಧರಿಸಿದ್ದ ಕಡಗ(ಬಳೆ) ಪ್ರೆಸ್ ಆಗಿರುವುದೇ ಕಾರಣ ಎಂದು ಹೇಳಲಾಗುತ್ತಿದೆ.

ಅಪಘಾತವಾದಾಗ ಕಾರಿನ ಏರ್‍ಬ್ಯಾಗ್ ತೆರೆದುಕೊಂಡಿತ್ತೇ ಎಂಬುದರ ಬಗ್ಗೆ ಗಾಯಾಳುಗಳು ಗೊಂದಲದ ಹೇಳಿಕೆ ನೀಡಿದ್ದು, ಒಂದು ವೇಳೆ ಏರ್‍ಬ್ಯಾಗ್ ಓಪನ್ ಆಗದಿದ್ದರೆ ಭಾರೀ ಅಪಾಯ ಸಂಭವಿ ಸುತ್ತಿತ್ತು ಎಂದು ಹೇಳಲಾಗುತ್ತಿದೆ. ಕಾರಿ ನಲ್ಲಿದ್ದವರು ಸೀಟ್ ಬೆಲ್ಟ್ ಧರಿಸಿದ್ದರೇ ಎಂಬು ದರ ಬಗ್ಗೆಯೂ ಸ್ಪಷ್ಟ ಮಾಹಿತಿ ಇಲ್ಲ. ಸೀಟ್ ಬೆಲ್ಟ್ ಧರಿಸದಿದ್ದರೆ ಏರ್‍ಬ್ಯಾಗ್ ಓಪನ್ ಆಗುವುದಿಲ್ಲ ಎಂದು ಕೆಲವರು ಹೇಳುತ್ತಿದ್ದಾರೆ. ಪ್ರಕರಣ ದಾಖಲಿಸಿಕೊಂಡಿ ರುವ ಪೊಲೀಸರ ತನಿಖೆ ನಂತರ ಸ್ಪಷ್ಟ ಮಾಹಿತಿ ದೊರೆಯಲಿದೆ.

ಸ್ನೇಹಿತರ ತೋಟದಲ್ಲಿದ್ದ ಕಾರು ವಾಪಸ್ ತರಿಸಿದ ಪೊಲೀಸರು

ಮೈಸೂರು: ಸ್ವಯಂ ಅಪಘಾತದ ಹಿನ್ನೆಲೆ ಟಾರ್ಪಾಲ್‍ನಿಂದ ಮುಚ್ಚಿ ಟೋಯಿಂಗ್ ವಾಹನದಲ್ಲಿ ಬೆಂಗಳೂರಿಗೆ ತೆಗೆದುಕೊಂಡು ಹೋಗುತ್ತೇವೆಂದು ಹೇಳಿ ಸಾಗಿಸಿದ್ದ ಆಡಿ ಕ್ಯೂ-7 ಕಾರನ್ನು ಪ್ರಕರಣ ದಾಖಲಾಗುತ್ತಿದ್ದಂತೆಯೇ ವಿವಿ ಪುರಂ ಸಂಚಾರ ಠಾಣೆ ಪೊಲೀಸರು ಮಧ್ಯಾಹ್ನದ ವೇಳೆಗೆ ವಾಪಸ್ ತರಿಸಿದ್ದಾರೆ.

ಈ ಕುರಿತು ‘ಮೈಸೂರು ಮಿತ್ರ’ನಿಗೆ ಮಾಹಿತಿ ನೀಡಿದ ವಿವಿ ಪುರಂ ಸಂಚಾರ ಠಾಣೆ ಇನ್ಸ್‍ಪೆಕ್ಟರ್ ಸಿ.ವಿ.ರವಿ ಅವರು, ಅಪಘಾತ ಸ್ಥಳಕ್ಕೆ ನಮ್ಮ ಸಿಬ್ಬಂದಿ ಹೋಗಿದ್ದಾಗ ನಾವೇ ರಿಪೇರಿ ಮಾಡಿಸಿಕೊಳ್ಳುತ್ತೇವೆ. ಯಾವುದೇ ಕೇಸು ವಗೈರೆ ಬೇಡ.
ಇನ್ಷೂರೆನ್ಸ್ ಅನ್ನೂ ಕ್ಲೇಮ್ ಮಾಡುವುದಿಲ್ಲ ಎಂದು ಹೇಳಿ ಕಾರನ್ನು ಬೆಂಗಳೂರಿಗೆ ಕೊಂಡೊಯ್ಯುವುದಾಗಿ ತೆಗೆದುಕೊಂಡು ಹೋಗಿದ್ದರು. ಪ್ರಕರಣ ದಾಖಲಾದರೆ ವಾಹನವನ್ನು ತಂದೊಪ್ಪಿಸ ಬೇಕಾಗುತ್ತದೆ ಎಂದು ನಮ್ಮವರು ಹೇಳಿದ್ದರು ಎಂದು ಇನ್ಸ್‍ಪೆಕ್ಟರ್ ತಿಳಿಸಿದರು. ನಂತರ ವಾಹನ ಸವಾರರಿಗೆ ಆಗಿರುವ ಗಾಯದ ತೀವ್ರತೆ ಗಮನಿಸಿದಾಗ ಹಾಗೂ ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ಎಂಎಲ್‍ಸಿ (Medico Legal Case) ಆಗಿರುವುದರಿಂದ ನಾವು ಅತೀ ವೇಗ ಹಾಗೂ ಅಜಾಗರೂಕ ಚಾಲನೆ ಪ್ರಕರಣ ದಾಖಲಿಸಿ, ಕಾರನ್ನು ವಾಪಸ್ ತರಿಸಿದ್ದೇವೆ ಎಂದ ಅವರು, ಪ್ರಕರಣ ದಾಖಲಾದರೆ ವಾಹನ ತಂದೊಪ್ಪಿಸಬೇಕಾಗುತ್ತದೆ ಎಂದು ನಾವು ಮೊದಲೇ ತಿಳಿಸಿದ್ದರಿಂದ ಹೆಬ್ಬಾಳಿನ ಇನ್‍ಫೋಸಿಸ್ ಹಿಂಭಾಗದ ದರ್ಶನ್ ಅವರ ಸ್ನೇಹಿತರ ತೋಟವೊಂದರಲ್ಲಿ ಇರಿಸಿದ್ದ ಕಾರನ್ನು ಟೋಯಿಂಗ್ ವಾಹನದಲ್ಲಿ ತಂದು ಒಪ್ಪಿಸಿದರು ಎಂದರು. ತೀವ್ರ ಸ್ವರೂಪದ ಅಪಘಾತವಾಗಿ ನಾಲ್ವರು ನಟರು ಗಾಯಗಳಾಗಿದ್ದರೂ ವಾಹನವನ್ನು ತೆಗೆದುಕೊಂಡು ಹೋಗಲು ಬಿಟ್ಟಿರುವ ಪೊಲೀಸರ ಕ್ರಮದ ಬಗ್ಗೆ ಸಾರ್ವಜನಿಕರಿಂದ ಆಕ್ಷೇಪ ಕೇಳಿ ಬಂದಿದ್ದಲ್ಲದೆ, ಸಾಮಾನ್ಯರಿಗಾದರೆ ಪೊಲೀಸರು ವಾಹನ ವಶಪಡಿಸಿಕೊಳ್ಳದೆ ಬಿಡುತ್ತಿದ್ದರೆ ಎಂಬ ಮಾತುಗಳೂ ಕೇಳಿ ಬರುತ್ತಿವೆ. ಅಪಘಾತಕ್ಕೊಳಗಾದ ಆಡಿ ಕ್ಯೂ 7(ಕೆಎ51, ಝಡ್7999) ಕಾರು ಖ್ಯಾತ ಉದ್ಯಮಿ ಹಾಗೂ ಚಲನಚಿತ್ರ ನಿರ್ಮಾಪಕ ಮೈಸೂರಿನ ಸಂದೇಶ್ ನಾಗರಾಜ್ ಅವರಿಗೆ ಸೇರಿದ್ದು ಎಂಬುದು ದಾಖಲಾತಿಗಳಿಂದ ತಿಳಿದು ಬಂದಿದ್ದು, ಇನ್ಷೂರೆನ್ಸ್ ಚಾಲ್ತಿಯಲ್ಲಿದೆ ಎಂದು ಇನ್ಸ್‍ಪೆಕ್ಟರ್ ಸಿ.ವಿ.ರವಿ ತಿಳಿಸಿದ್ದಾರೆ.

ಟಾರ್ಪಾಲ್ ಮುಚ್ಚಿದ ಸ್ಥಿತಿಯಲ್ಲಿ ತಂದ ಆಡಿ ಕಾರನ್ನು ಸಂಚಾರ ಪೊಲೀಸರು, ಆರ್‍ಟಿಓ ಕಚೇರಿ ಅಧಿಕಾರಿಗಳು ಮಹಜರು ನಡೆಸಿದರು. ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು, ಸ್ಟಾರ್ಟ್ ಆಗುತ್ತಿರಲಿಲ್ಲ ಎಂದು ತಿಳಿದು ಬಂದಿದೆ.

ಗಾಯಗೊಂಡ ನಟರು ಚೇತರಿಕೆ

ಮೈಸೂರು: ಕಾರು ಅಪಘಾತದಿಂದ ತೀವ್ರವಾಗಿ ಗಾಯ ಗೊಂಡಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೇರಿದಂತೆ ನಾಲ್ವರು ಕನ್ನಡ ನಾಯಕ ನಟರು ಈಗ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಕೊಲಂಬಿಯಾ ಏಷಿಯಾ ಆಸ್ಪತ್ರೆ ಮುಖ್ಯಸ್ಥರೂ ಆದ ಹೃದ್ರೋಗ ತಜ್ಞ ಡಾ.ಉಪೇಂದ್ರ ಶೆಣೈ ತಿಳಿಸಿದ್ದಾರೆ.

ಆಸ್ಪತ್ರೆಯಲ್ಲಿ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಅವರು, ಈಗಾ ಗಲೇ ದರ್ಶನ್ ಸೇರಿದಂತೆ ಎಲ್ಲಾ ನಾಲ್ವರು ನಟರಿಗೆ ಶಸ್ತ್ರ ಚಿಕಿತ್ಸೆಗೊಳ ಪಡಿಸಿದ ನಂತರ ವಾರ್ಡ್‍ಗಳಿಗೆ ಸ್ಥಳಾಂತರಿಸಲಾಗಿದೆ. ಚೇತರಿಸಿಕೊಳ್ಳು ತ್ತಿದ್ದು ಯಾವುದೇ ಅಪಾಯವಿಲ್ಲ. ಸದ್ಯದಲ್ಲೇ ಅವರನ್ನು ಡಿಸ್‍ಚಾರ್ಜ್ ಮಾಡಲಾಗುವುದು ಎಂದರು.

ಮೂಳೆ ತಜ್ಞ ಡಾ.ಅಜಯ್ ಹೆಗಡೆ, ಪ್ಲಾಸ್ಟಿಕ್ ಸರ್ಜನ್ ಡಾ.ವಿಜಯ್ ಮತ್ತು ತಂಡದವರು ಗಾಯಾಳುಗಳನ್ನು ಶಸ್ತ್ರ ಚಿಕಿತ್ಸೆಗೊಳಪಡಿಸಿದ್ದಾರೆ. ಈಗ ಎಲ್ಲರೂ ಚೆನ್ನಾಗಿದ್ದಾರೆ ಎಂದು ಡಾ.ಶೆಣೈ ತಿಳಿಸಿದರು. ವಿಷಯ ತಿಳಿಯುತ್ತಿದ್ದಂತೆಯೇ ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್ ಅವರು ಆಸ್ಪತ್ರೆಗೆ ತೆರಳಿ ದರ್ಶನ್ ಸೇರಿದಂತೆ ಎಲ್ಲಾ ನಟರ ಆರೋಗ್ಯ ವಿಚಾರಿಸಿದರು. ನಂತರ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಕಾರು ಅಪಘಾತದಲ್ಲಿ ಗಾಯಗೊಂಡಿ ರುವ ನಟ ದರ್ಶನ್, ದೇವರಾಜ್, ಪ್ರಜ್ವಲ್ ಹಾಗೂ ರಾಯ್ ಆಂಟನಿ ಅವರು ಆರಾಮಾಗಿದ್ದಾರೆ. ಚೆನ್ನಾಗಿ ಮಾತನಾಡುತ್ತಿದ್ದಾರೆ ಎಂದರು. ಈ ಸಂದರ್ಭ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಆಸ್ಪತ್ರೆ ಬಳಿ ಸುದ್ದಿಗಾರರೊಂದಿಗೆ ಮಾತನಾಡಿ, ಇಂದು ಮುಂಜಾನೆ ಕಾರು ಅಪಘಾತದಲ್ಲಿ ಗಾಯಗೊಂಡಿರುವ ಪತಿ ದರ್ಶನ್ ಹಾಗೂ ಇತರರು ಆರೋಗ್ಯವಾಗಿದ್ದಾರೆ. ಕೆಲ ದಿನ ವಿಶ್ರಾಂತಿ ಬೇಕೆಂದು ವೈದ್ಯರು ತಿಳಿಸಿದ್ದಾರೆ. ಅವರಿಗೆ ತೊಂದರೆ ಏನೂ ಇಲ್ಲ ಎಂದರು. ದರ್ಶನ್ ತಾಯಿ ಶ್ರೀಮತಿ ಮೀನಾ ತೂಗುದೀಪ ಶ್ರೀನಿವಾಸ್, ದೇವರಾಜು ಅವರ ಕುಟುಂಬ ವರ್ಗದವರು ಸಹ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ಧಾವಿಸಿದ್ದಾರೆ. ನಟರು ದಾಖಲಾಗಿರುವ ಹಿನ್ನೆಲೆಯಲ್ಲಿ ಅಪಾರ ಅಭಿಮಾನಿಗಳು ಧಾವಿಸಬಹುದೆಂದು ಆಸ್ಪತ್ರೆ ಬಳಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಿ, ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.

Translate »