ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದರೆ ನನ್ನ ಜನ ಗೆಲ್ಲಿಸುತ್ತಾರೇನ್ರಿ…!
ಮೈಸೂರು

ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದರೆ ನನ್ನ ಜನ ಗೆಲ್ಲಿಸುತ್ತಾರೇನ್ರಿ…!

September 2, 2018

ಬೆಂಗಳೂರು:  ‘ಲೋಕ ಸಭಾ ಚುನಾವಣೆಗೆ ಸ್ಪರ್ಧಿಸಿದರೆ ಜನರು ನನ್ನನ್ನು ಗೆಲ್ಲಿಸುತ್ತಾರೇನ್ರೀ’. ಈ ಮಾತನ್ನು ಬೇರ್ಯಾರೂ ಅಲ್ಲ, ಈ ರಾಜ್ಯವನ್ನು ಐದು ವರ್ಷಗಳ ಕಾಲ ಮುನ್ನಡೆಸಿ, ತಮ್ಮ ಆಡಳಿತಾವಧಿಯಲ್ಲಿ ಕೆಲವು ಭಾಗ್ಯಗಳನ್ನು ನೀಡಿದ, ಹಾಲಿ ಮೈತ್ರಿ ಪಕ್ಷಗಳ ಸಮನ್ವಯ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ.

ಮುಂಬರುವ ಲೋಕಸಭಾ ಚುನಾವಣೆಗೆ ಸಂಬಂಧಿ ಸಿದಂತೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಆಯ್ಕೆ ಹಾಗೂ ಚುನಾವಣಾ ಸಿದ್ಧತೆಗೆ ಕರೆದಿದ್ದ ಮುಖಂಡರ ಸಭೆಯಲ್ಲೇ ಈ ಅನುಮಾನ ವ್ಯಕ್ತ ಪಡಿಸಿದ್ದಾರೆ. ರಾಜ್ಯ ಉಸ್ತುವಾರಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣು ಗೋಪಾಲ್ ಅಧ್ಯಕ್ಷತೆ ಯಲ್ಲಿ ಪ್ರತಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳ ಆಯ್ಕೆ ಕುರಿತು ಆಯಾಪ್ರದೇಶದ ಹಾಲಿ ಶಾಸಕರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತವರು ಹಾಗೂ ಜಿಲ್ಲಾ ಮುಖಂಡರೊಂದಿಗೆ ಸಮಾಲೋಚನೆ ನಡೆಸಿದರು.

ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಉಪ ಮುಖ್ಯಮಂತ್ರಿ ಡಾ|| ಜಿ. ಪರಮೇಶ್ವರ್, ಸಚಿವ ಡಿ.ಕೆ. ಶಿವಕುಮಾರ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು. ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಆ ಭಾಗದ ನಾಯಕರು ತಮ್ಮ ಕ್ಷೇತ್ರಕ್ಕೆ ಸಿದ್ದರಾಮಯ್ಯ ಅವರನ್ನೇ ಒಮ್ಮತದ ಅಭ್ಯರ್ಥಿ ಯನ್ನಾಗಿ ಆಯ್ಕೆ ಮಾಡಿದ್ದೇವೆ. ಜಿಲ್ಲೆ ಯಲ್ಲಿ ಕುರುಬ ಸಮುದಾಯವೇ ನಿರ್ಣಾ ಯಕ ಎಂದು ಸಿದ್ದರಾಮಯ್ಯ ಸೇರಿದಂತೆ ರಾಜ್ಯ ನಾಯಕರ ಮನವೊಲಿಸಿದರು.

ತಕ್ಷಣವೇ ತಲೆ ಅಲ್ಲಾಡಿಸಿ, ನನಗೆ ಚುನಾವಣೆ ಬೇಡ, ಲೋಕಸಭೆಗೆ ಸ್ಪರ್ಧಿಸುವ ಬಗ್ಗೆ ನಾನು ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ಥಟ್ಟನೆ ಉತ್ತರಿಸಿದರು. ಅಷ್ಟೇ ಅಲ್ಲ, ಮುಂದುವರಿದು ‘ನಿಂತರೆ ಜನ ಗೆಲ್ಲಿಸುತ್ತಾ ರೇನ್ರೀ, ವರ್ಷಾನುಗಟ್ಟಲೆ ದುಡಿದ ಕ್ಷೇತ್ರ ದಿಂದಲೇ ನನ್ನನ್ನು ಹೊರಗಿಟ್ಟರು. ನನ್ನ ಆಡಳಿತಾವಧಿಯಲ್ಲಿ ಕೊಪ್ಪಳ ಮತ್ತು ಹೈದರಾಬಾದ್-ಕರ್ನಾಟಕಕ್ಕೆ ನಾನು ನೀಡಿದಷ್ಟು ಅನುದಾನವನ್ನು ಬೇರ್ಯಾರೂ ನೀಡಿರಲಿಲ್ಲ. ಆದರೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಿಮ್ಮೆಲ್ಲರನ್ನು ಹೀನಾಯವಾಗಿ ಸೋಲಿಸಿದರು, ಆ ಭಾಗದಲ್ಲಿ ಕಾಂಗ್ರೆಸ್‍ಗೆ ಉತ್ತಮ ಫಲಿತಾಂಶವೂ ಬರಲಿಲ್ಲ.

ಮತ್ತೆ ಅದೇ ಕ್ಷೇತ್ರದಿಂದ ಕಣಕ್ಕಿಳಿಯಿರಿ ಎನ್ನುತ್ತೀರಿ, ಯಾರನ್ನು ನಂಬಿ ನಿಲ್ಲಲಿ, ನಾನು ಈಗೇನೂ ನಿರ್ಧಾರ ಕೈಗೊಳ್ಳಲ್ಲ, ಮುಂದೆ ನೋಡೋಣ’ ಎಂದು ವಿಷಯಕ್ಕೆ ತೆರೆ ಎಳೆದರು. ಉಳಿದಂತೆ 2019ರ ಲೋಕಸಭೆ ಚುನಾವಣೆಯಲ್ಲಿ ಅಧಿಕಾರದ ಗದ್ದುಗೆಗೇರುವ ಕನಸು ಕಾಣುತ್ತಿರುವ ಕಾಂಗ್ರೆಸ್ ಪಕ್ಷ ಪ್ರಬಲ ಬಿಜೆಪಿ ಅಭ್ಯರ್ಥಿಗಳ ವಿರುದ್ಧ ಸಮರ್ಥ ಕೈ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಗೆಲುವು ಸಾಧಿಸುವ ಕುರಿತಂತೆ ಇಂದಿನ ಸಭೆಯಲ್ಲಿ ಜಿಲ್ಲಾ ನಾಯಕರೊಂದಿಗೆ ಮುಖಾಮುಖಿ ಸಂವಾದ ನಡೆಸಿತು.

ಕ್ಷೇತ್ರಗಳಲ್ಲಿ ಯಾರನ್ನು ಕಣಕ್ಕೆ ಇಳಿಸಬೇಕು, ಆಕಾಂಕ್ಷಿಗಳು ಯಾರು, ಮತದಾರರು ಯಾರ ಪರ ಇದ್ದಾರೆ, ಕಳೆದ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳ ಸಾಧನೆ ಏನು, ಜಾತ್ಯತೀತ ಪಕ್ಷಗಳೊಂದಿಗೆ ಮೈತ್ರಿ ಎಂಬಿತ್ಯಾದಿ ಕುರಿತು ಚರ್ಚಿಸಲಾಯಿತು.

ದೇಶಾದ್ಯಂತ ಇರುವ ಮೋದಿ ಅಲೆಯನ್ನು ಕುಗ್ಗಿಸಿ ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳನ್ನು ದೇಶಾದ್ಯಂತ ಪ್ರಚುರಪಡಿಸಿ ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ದೇಶದ ಚುಕ್ಕಾಣಿ ಹಿಡಿಯಬೇಕಾಗಿದೆ.

ತಳಮಟ್ಟದ ಕಾರ್ಯಕರ್ತರನ್ನು ಹುರಿದುಂಬಿಸಿ ಜನರಲ್ಲಿ ಜಾಗೃತಿ ಮೂಡಿಸಿ ಮತಗಳನ್ನು ಸೆಳೆಯಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ರಾಜ್ಯ ನಾಯಕರು, ಸ್ಥಳೀಯ ನಾಯಕರಿಗೆ ಮನದಟ್ಟು ಮಾಡಿದರು. ಕಳೆದ ಚುನಾವಣೆಯಲ್ಲಿ ಪಕ್ಷ ಕೇವಲ ಒಂಭತ್ತು ಲೋಕಸಭಾ ಸ್ಥಾನಗಳಲ್ಲಷ್ಟೇ ಗೆಲ್ಲಲು ಸಾಧ್ಯವಾಯಿತು, ಮುಂದೆ ಎದುರಾಗುವ ಚುನಾವಣೆಯಲ್ಲಿ ನಾವು ಇನ್ನೂ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಅನಿವಾರ್ಯತೆ ಇದೆ. ಇದಕ್ಕಾಗಿ ಜಾತ್ಯತೀತ ಶಕ್ತಿಗಳ ಜತೆ ಕೈ ಜೋಡಿಸಬೇಕು. ರಾಜ್ಯದಲ್ಲಿ ಜೆಡಿಎಸ್ ಜತೆ ಸೇರಿ ಮೈತ್ರಿ ಸರ್ಕಾರ ಮಾಡಿದ್ದು, ಜೆಡಿಎಸ್ ಜತೆ ಚುನಾವಣೆ ಪೂರ್ವ ಮೈತ್ರಿ ಮಾಡಿಕೊಂಡು ಹೆಚ್ಚಿನ ಸ್ಥಾನಗಳನ್ನು ಗೆಲ್ಲಬೇಕು. ಮೈತ್ರಿ ಸರ್ಕಾರ ಮಾಡಿರುವ ರೈತರ ಸಂಪೂರ್ಣ ಸಾಲಮನ್ನಾ, ಹಿಂದಿನ ಕಾಂಗ್ರೆಸ್ ಸರ್ಕಾರದ ಜನಪ್ರಿಯ ಯೋಜನೆಗಳಾದ ಅನ್ನಭಾಗ್ಯ, ಕ್ಷೀರಭಾಗ್ಯ, ಇಂದಿರಾ ಕ್ಯಾಂಟಿನ್ ಮುಂತಾದ ಯೋಜನೆಗಳನ್ನು ಮುಂದುವರಿಸಿರುವುದರ ಲಾಭವನ್ನು ಚುನಾವಣೆಯಲ್ಲಿ ಪಡೆಯುವುದರ ಬಗ್ಗೆಯೂ ಕೂಡ ಸಭೆಯಲ್ಲಿ ಚರ್ಚಿಸಲಾಯಿತು.

Translate »